Asianet Suvarna News Asianet Suvarna News

ದೀಪದ ಬೆಳಕಲ್ಲಿ ಓದುತ್ತಿರುವ ಆದಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು: ಪರೀಕ್ಷೆ ಬರೆಯಲು ಸಂಕಷ್ಟ

ಪೊನ್ನಂಪೇಟೆಯ ಬಳಿಯ ನಾಣಚ್ಚಿ ಹಾಡಿ ಬುಡಕಟ್ಟು ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮನೆ ಹಾಗೂ ವಿದ್ಯುತ್‌ ವ್ಯವಸ್ಥೆಯಿಲ್ಲದೇ ದೀಪದ ಬೆಳಕಿನಲ್ಲಿ ಓದಿ ಪರೀಕ್ಷೆ ಬರೆಯುತ್ತಿದ್ದಾರೆ. 

Tribal SSLC students studying under lamplight It is difficult to write the exam sat
Author
First Published Apr 1, 2023, 11:22 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಏ.01): ತಮ್ಮ ಜಾಗಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಆದಿವಾಸಿ ಬುಡಕಟ್ಟು ಜನರು ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಸ್ಥಳದಲ್ಲಿ ಬೆಳಕಿಲ್ಲದ ಕಾರಣ ಬೆಂಕಿ ಬೆಳಕಲ್ಲಿಯೇ ಓದಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಹೌದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿ ಹಾಡಿ ಸೇರಿದಂತೆ ವಿವಿಧ ಹಾಡಿಗಳ ನೂರಾರು ಬುಡಕಟ್ಟು ಕುಟುಂಬದ ಜನರು ತಾವು ವಾಸಿಸುತ್ತಿರುವ ಸ್ಥಳಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕಳೆದ 18 ದಿನಗಳಿಂದ ನಾಗರಹೊಳೆ ಅರಣ್ಯ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಚುನಾವಣೆ ಘೋಷಣೆ ಆಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಪೊನ್ನಂಪೇಟೆ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಆದರೆ ಪಟ್ಟುಬಿಡದೆ ಹಗಲು ರಾತ್ರಿ ಎನ್ನದೆ ಕಳೆದ 18 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ಜನರು ಸ್ಥಳದಲ್ಲಿಯೇ ಅಡುಗೆ ಮಾಡಿ ಅಲ್ಲಿಯೇ ಬಿಡಾರ ಹಾಕಿ ಕುಳಿತಿದ್ದಾರೆ. ತಮಗೆ ಹಕ್ಕು ಪತ್ರ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ. 

SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಈ ಬಾರಿಯೂ 10 % ಗ್ರೇಸ್ ಮಾರ್ಕ್ಸ್! ಯಾವೆಲ್ಲ ವಿಷಯಕ್ಕೆ ಸಿಗಲಿದೆ?

ಅಡುಗೆ ಮಾಡುವ ಬೆಂಕಿಯಲ್ಲಿ ವಿದ್ಯಾರ್ಥಿಗಳ ಅಭ್ಯಾಸ: ಪ್ರತಿಭಟನಾ ಧರಣಿಗೂ ಮುನ್ನ ಮಾರ್ಚ್ 15ರಿಂದಲೇ ಕುಂಬಾರಕಟ್ಟೆ ಹಾಡಿಯಿಂದ ಪ್ರತಿಭಟನಾ ಜಾಥಾ ಆರಂಭಿಸಿದ್ದ ಪ್ರತಿಭಟನಾಕಾರರು ಬಾಳೆಲೆ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಾಡಿಗಳ ಮೂಲಕ ಜನರನ್ನು ಸಂಘಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಬಳಿಕ ನಾಗರ ಹೊಳೆ ಅರಣ್ಯ ಕಚೇರಿ ಎದುರು ಧರಣಿ ಆರಂಭಿಸಿದ ಜನರು ಅಂದಿನಿಂದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರು ತಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕುಳಿತಿದ್ದಾರೆ. ಸ್ಥಳದಲ್ಲಿ ವಿದ್ಯುತ್ ಅಥವಾ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿರುವ ನಾಲ್ಕಕ್ಕೂ ಹೆಚ್ಚು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಅಡುಗೆ ಮಾಡಲು ಹಾಕಿರುವ ಬೆಂಕಿಯ ಬೆಳಕಿನಲ್ಲಿ ಕುಳಿತು ಓದಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 

ವಾಸದ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಮೀನಮೇಷ: ಈ ಕುರಿತು ಮಾತನಾಡಿರುವ ನಾಗರಹೊಳೆ ಜಮ್ಮಾಬಾಣೆ ಹಕ್ಕು ಸ್ಥಾಪನಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಕೆ. ತಿಮ್ಮ ಅವರು ತಲತಲಾಂತರಗಳಿಂದ ತಮ್ಮ ಪೂರ್ವಜರು ನಾಗರಹೊಳೆ ಅರಣ್ಯ ಪ್ರದೇಶದ ವಿವಿಧ ಹಾಡಿಗಳಲ್ಲಿ ವಾಸಿಸುತ್ತಿದ್ದವರು. ಅರಣ್ಯದ ವಿವಿಧ ಕೆರೆಗಳಿಗೆ ಅವರು ಹೆಸರುಗಳನ್ನು ಇಟ್ಟಿರುವುದೇ ಇದಕ್ಕೆ ಸಾಕ್ಷಿ. ಜೊತೆಗೆ ಹಲವಾರು ಕಡೆಗಳಲ್ಲಿ ನಮ್ಮ ದೇವರುಗಳನ್ನು ಪೂಜಿಸಿದ್ದು, ಈಗಲೂ ಇರುವ ಗುಡಿಗಳೇ ಸಾಕ್ಷಿ. ಜೊತೆಗೆ ನಮ್ಮ ಸಾಂಪ್ರದಾಯಿಕ ಗಡಿಗಳನ್ನು ಗುರುತ್ತಿಸಿದ್ದಾರೆ. ಆದ್ದರಿಂದ ನಮಗೆ ನಮ್ಮ ಜಾಗಗಳ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಡ್ಯಾಂನಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿನಿಯರು ಸಾವು: ಟ್ರಿಪ್‌ಗೆ ಹೋದವರು ಮಸಣ ಸೇರಿದರು

ಪ್ರಾಣ ಬಿಟ್ಟರೂ ಸರಿ ಹೋರಾಟ ಕೈಬಿಡಲ್ಲ: ಕಳೆದ ಎರಡು ವರ್ಷದ ಹಿಂದೆ ಇದೇ ರೀತಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದೆವು. ಆದರೆ ಬೇಡಿಕೆ ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿ ಎರಡು ತಿಂಗಳ ಸಮಯ ಕೇಳಿದ್ದ ಅಧಿಕಾರಿಗಳು ಎರಡು ವರ್ಷವಾದರೂ ನಮ್ಮ ಸಮಸ್ಯೆಯನ್ನು ಆಲಿಸಿಲ್ಲ. ಆದ್ದರಿಂದ ಈ ಬಾರಿ ಅಧಿಕಾರಿಗಳ ಸುಳ್ಳು ಭರವಸೆಗಳನ್ನು ನಂಬಿ ಸ್ಥಳದಿಂದ ಹೋಗುವುದಿಲ್ಲ ಎಂದು ಜೆ.ಕೆ. ತಿಮ್ಮ ಹೇಳುತ್ತಿದ್ದಾರೆ. ಇನ್ನು ಪ್ರತಿಭಟನಾಕಾರರಾದ ಸುಧಾ ಅವರು ಮಾತನಾಡಿ ನಾವು ನಮ್ಮ ಅಜ್ಜ, ತಾತನ ಕಾಲದಿಂದಲೂ ಇಲ್ಲಿಯೇ ವಾಸವಾಗಿದ್ದೆವು. ಆದರೆ ಆನೆ, ಹುಲಿಗಳನ್ನು ಇಲ್ಲಿಗೆ ತಂದು ಬಿಟ್ಟು, ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಿದರು. ಪರಿಣಾಮವಾಗಿ ನಾವು ಕಾಫಿತೋಟಗಳ ಲೈನ್ ಮನೆಗಳಿಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾಯಿತು. ಇಂದು ಪಡಬಾರದ ಕಷ್ಟ ಅನುಭವಿಸುತ್ತೇವೆ. ನಮಗೆ ಹಕ್ಕುಪತ್ರಗಳನ್ನು ನೀಡುವವರೆಗೆ ಪ್ರಾಣಬಿಟ್ಟರು ಹೋರಾಟವನ್ನು ಕೈಬಿಡುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios