ಮಂಡ್ಯ(ಮಾ.12): ಶ್ರಿರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಎರಮಣಿ ನಾಲೆ ಏರಿ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರ ಸಾಗುವಳಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಕೂಡಲಕುಪ್ಪೆ ಗ್ರಾಮದ ಸರ್ವೆ ನಂ. 278/1ಎ ಮತ್ತು 278/3ರ ಜಮೀನಿನಲ್ಲಿ ಇದ್ದ ಮರಗಳನ್ನು ಯಾವುದೇ ನೋಟಿಸ್‌ ನೀಡದೆ ಮರಗಳನ್ನು ಉರುಳಿಸಿ ರಸ್ತೆ ಮಾಡಲಾಗಿದೆ. ಸರ್ವೇಯರ್‌ ಕರೆಸಿ ಹದ್ದುಬಸ್ತು ಗೊತ್ತುಪಡಿಸದೆ ಜಮೀನು ಅಗೆದು ಕೃಷಿ ಜಮೀನು ಸೇರಿಸಿ ರಸ್ತೆ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೋದರೆ ಪೊಲೀಸರನ್ನು ಕರೆಸಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಾಕಿದ್ದಾರೆ. ಇದರಿಂದ ಸುಮಾರು ಲಕ್ಷಾಂತರ ರು. ನಷ್ಟಉಂಟಾಗಿದೆ ಎಂದು ಕೆ.ಪಿ.ಸ್ವಾಮಿಗೌಡ ಮತ್ತು ಕೆ.ಎಸ್‌. ಶಿವಲಿಂಗೇಗೌಡ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

ಶುದ್ಧ ನೀರಿನ ದರ ಹೆಚ್ಚಳ: ದುಪ್ಪಟ್ಟು ವಸೂಲಿ

ಇನ್ನೋರ್ವ ರೈತ ಟಿ.ಲೋಕೇಶ್‌ ಎಂಬುವವರು ಕೂಡ ಸ್ಥಳೀಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಎರಮಣಿ ನಾಲೆಗೆ ಹೊಂದಿಕೊಂಡಿರುವ ಸರ್ವೆ ನಂ.16ರಲ್ಲಿನ ಕೃಷಿ ಜಮೀನಿನಲ್ಲಿರುವ ಬೀಟೆ, ಸಿಲ್ವರ್‌ ಮತ್ತು ತೆಂಗಿನ ಮರಗಳನ್ನು ನೆಲಸಮ ಮಾಡಿದ್ದಾರೆ. ಜಮೀನು ಹದ್ದುಬಸ್ತು ಗೊತ್ತುಮಾಡಿಸಿಕೊಡಬೇಕು. ನಮ್ಮ ಜಮೀನು ಮತ್ತು ಮರಗಳನ್ನು ಉಳಿಸಿಕೊಡಬೇಕು ಎಂದು ಕೋರಿದ್ದಾರೆ.

ಕೂಡಲಕುಪ್ಪೆ ಸರ್ವೆ ನಂ. 278, 279, 282, 283ರಲ್ಲಿ ಖರಾಬು ಜಮೀನು ಇರುವುದಿಲ್ಲ. ಸರ್ಕಾರಿ ಖರಾಬು ಇರುವುದನ್ನು ಅಧಿಕಾರಿಗಳು ಬಿಡಿಸದೆ ಹಿಡುವಳಿ ಜಮೀನಿನ ಭಾಗ ಒತ್ತುವರಿಯಾಗಿದೆ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಎರಮಣಿ ನಾಲೆ ಏರಿಯ ಹದ್ದುಬಸ್ತು ಗುರುತಿಸಿ ಜಮೀನು ಅಳತೆ ಮಾಡಿಸಿ, ನಂತರ ಒತ್ತುವರಿ ತೆರವು ಮಾಡಿಸಬೇಕು ಎಂದು ಮುಖಂಡ ಕೆ.ಆರ್‌.ಮಹೇಂದ್ರ ಒತ್ತಾಯಿಸಿದ್ದಾರೆ.