Asianet Suvarna News Asianet Suvarna News

ಶುದ್ಧ ನೀರಿನ ದರ ಹೆಚ್ಚಳ: ದುಪ್ಪಟ್ಟು ವಸೂಲಿ

ನೀರಿನ ಕೊರತೆ ಎದುರಿಸುತ್ತಿರುವ ಶುದ್ಧ ನೀರಿನ ಘಟಕಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಜೊತೆಗೆ ಪ್ರಸ್ತುತ ಪ್ರತಿ 20 ಲೀಟರ್‌ ನೀರಿಗೆ ವಸೂಲಿ ಮಾಡುತ್ತಿರುವ ಹಣವನ್ನು ದುಪ್ಪಟ್ಟು ಮಾಡಿ, ಅದೇ ಹಣದಲ್ಲಿ ಟ್ಯಾಂಕರ್‌ ನೀರು ಖರೀದಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

Drinking water price increased in Chikkaballapur
Author
Bangalore, First Published Mar 12, 2020, 12:09 PM IST

ಚಿಕ್ಕಬಳ್ಳಾಪುರ(ಮಾ.12): ನೀರಿನ ಕೊರತೆ ಎದುರಿಸುತ್ತಿರುವ ಶುದ್ಧ ನೀರಿನ ಘಟಕಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಜೊತೆಗೆ ಪ್ರಸ್ತುತ ಪ್ರತಿ 20 ಲೀಟರ್‌ ನೀರಿಗೆ ವಸೂಲಿ ಮಾಡುತ್ತಿರುವ ಹಣವನ್ನು ದುಪ್ಪಟ್ಟು ಮಾಡಿ, ಅದೇ ಹಣದಲ್ಲಿ ಟ್ಯಾಂಕರ್‌ ನೀರು ಖರೀದಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಪಂ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಲ್ಲೆಯ ಆರೂ ತಾಲೂಕುಗಳ ನಾನಾ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳಲ್ಲಿ ಹಲವು ನೀರಿನ ತೊಂದರೆಯಿಂದ ಸ್ಥಗಿತಗೊಂಡಿವೆ. ಇನ್ನು ಹಲವು ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ನೀರು ಕೊಳವೆ ಬಾವಿಗಳಲ್ಲಿದ್ದು, ಈ ನೀರು ಗ್ರಾಮಸ್ಥರಿಗೆ ನೀಡುವ ಬದಲು ಶುದ್ಧ ನೀರಿನ ಘಟಕಗಳಿಗೆ ಮಾತ್ರ ಬಳಸುತ್ತಿರುವ ಬಗ್ಗೆ ದೂರುಗಳಿವೆ ಎಂದರು.

ಶುದ್ಧ ನೀರು ಕಡ್ಡಾಯ

ಅಲ್ಲದೆ ಈಗಾಗಲೇ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿರುವ ಗ್ರಾಮಗಳ ಜನರು ಈಗಾಗಲೇ ಶುದ್ಧ ನೀರಿಗೆ ಹೊಂದಿಕೊಂಡಿದ್ದು, ಈಗ ಘಟಕಗಳಿಂದ ನೀರು ಪೂರೈಸದಿದ್ದರೆ ಸಮಸ್ಯೆ ಎದುರಾಗಲಿದ್ದು, ಪ್ರಸ್ತುತ ಪ್ರತಿ 20 ಲೀಟರ್‌ ನೀರಿಗೆ ಪಡೆಯುತ್ತಿರುವ 5 ರುಪಾಯಿ ಬದಲು 10 ರುಪಾಯಿ ವಸೂಲಿ ಮಾಡುವುದು, ಅದೇ ಹಣದಲ್ಲಿ ಟ್ಯಾಂಕರ್‌ ನೀರು ಖರೀದಿಸಲು ಬಳಸಲು ಸಂಬಂಧಿಸಿದರು ಕ್ರಮ ವಹಿಸುವಂತೆ ಅಧ್ಯಕ್ಷರು ಸೂಚಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ

ಪ್ರಸ್ತುತ ವಿಧಾನಸಭಾ ಕಲಾಪಗಳು ನಡೆಯುತ್ತಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ಸರ್ಕಾರ ಪಂಪು ಮೋಟಾರ್‌ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಆದರೆ ಸಭೆಗೆ ಹಾಜರಾಗಿರುವ ಅಧಿಕಾರಿಗಳು ಇಡೀ ತಾಲೂಕಿಗೆ 5 ರಿಂದ 10 ಪಂಪು ಮೋಟಾರ್‌ಗಳಿಗೆ ಬೇಡಿಕೆ ಇದೆ ಎನ್ನುತ್ತಿದ್ದಾರೆ. ಯಾರು ಹೇಳುತ್ತಿರುವುದು ಸರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು.

ಅಧಿಕಾರಿಗಳಿಗೆ ಅಧ್ಯಕ್ಷರ ತರಾಟೆ

ನೀರಿನ ವಿಷಯದಲ್ಲಿ ಜನಪ್ರತಿನಿಧಿಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಶುದ್ಧ ನೀರಿನ ಘಟಕಕ್ಕೆ ಜಾಗ ಗುರ್ತಿಸಿಲ್ಲ, ನಿಮ್ಮ ವಿರುದ್ಧ ಬಳಸಲು ಭಾಷೆಯೇ ಸಿಗುತ್ತಿಲ್ಲ. ಕೂಡಲೇ ಸಂಬಂಧಿಸಿದವರಿಗೆ ನೋಟಿಸ್‌ ಜಾರಿ ಮಾಡಿ. ಪುಸ್ತಕದಲ್ಲಿರುವುದನ್ನು ನೀವು ಓದಿ ಹೇಳಲು ಪ್ರಗತಿ ಪರಿಶೀಲನಾ ಸಭೆ ಅಗತ್ಯವಿದೆಯೇ, ಮನೆಯಲ್ಲಿಯೇ ಕುಳಿತು ನಾನು ಓದಲು ಬರುವುದಿಲ್ಲವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

106 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಜಿಲ್ಲೆಯ ಆರೂ ತಾಲೂಕುಗಳ ಒಟ್ಟು 106 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಇದರಲ್ಲಿ ಟ್ಯಾಂಕರ್‌ಗಳ ಮೂಲಕ 32 ಗ್ರಾಮಗಳಿಗೆ, ಖಾಸಗಿ ಕೊಳವೆ ಬಾವಿಗಳ ಮೂಲಕ 74 ಗ್ರಾಮಗಳಿಗೆ ಪ್ರಸ್ತುತ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಇದ್ದು, ಇಲ್ಲಿ ಒಟ್ಟು 56 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಇದರಲ್ಲಿ 20 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಮತ್ತು 36 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ. ಗುಡಿಬಂಡೆ ತಾಲೂಕಿನಲ್ಲಿ ಎರಡು ಗ್ರಾಮಗಳಲ್ಲಿ ಸಮಸ್ಯೆ ಇದ್ದು, 1 ಗ್ರಾಮಕ್ಕೆ ಟ್ಯಾಂಕರ್‌, ಮತ್ತೊಂದು ಗ್ರಾಮಕ್ಕೆ ಖಾಸಗಿ ಕೊಳವೆ ಬಾವಿ ಮೂಲಕ ನೀರು ನೀಡಲಾಗುತ್ತಿದೆ ಎಂದು ಹೇಳಿದರು.

ನೀರಿನ ಸಮಸ್ಯೆ ಇರುವ ಗ್ರಾಮಗಳು

ಬಾಗೇಪಲ್ಲಿ ತಾಲೂಕಿನ 19 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, 3 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಮತ್ತು 16 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಲ ಮೂಲಕ ನೀರು ನೀಡಲಾಗುತ್ತಿದೆ. ಶಿಡ್ಲಘಟ್ಟತಾಲೂಕಿನ 11 ಗ್ರಾಮಗಳಲ್ಲಿ ಸಮಸ್ಯೆ ಇದ್ದು, 1 ಗ್ರಾಮಕ್ಕೆ ಟ್ಯಾಂಕರ್‌ ಮೂಲಕ 10 ಗ್ರಾಮಗಳಿಗೆ ಖಾ3ಸಗಿ ಕೊಳವೆ ಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 18 ಗ್ರಾಮಗಳ್ಲಲಿ ಸಮಸ್ಯೆ ಇದ್ದು, 7 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಮತ್ತು 11 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ. ಜಿಲ್ಲೆಯ ಐದೂ ತಾಲೂಕಿನಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದರೂ ಗೌರಿಬಿದನೂರು ತಾಲೂಕಿನಲ್ಲಿ ಮಾತ್ರ ನೀರಿನ ಸಮಸ್ಯೆ ಇಲ್ಲ.

ಕೊರೋನ ಕುರಿತು ಜಾಗೃತಿ

ಜಿಪಂ ಪ್ರಗತಿ ಪರಿಶೀಲನಾ ಸಭೆ ಆರಂಭಕ್ಕೂ ಮುನ್ನವೇ ಜಿಲ್ಲಾ ಆರೋಗ್ಯಾಧಿಕಾರಿ ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ನೀಡಿ, ಕೈಗೊಳ್ಳಬೇಕಾದ ಎಚ್ಚರಿಕೆಗಳ ಕುರಿತು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಕೊರೋನಾ ಜಿಲ್ಲೆಯಲ್ಲಿ ಹರಡಿಲ್ಲ. ಆದರೆ ಪ್ರಸ್ತುತ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.

Follow Us:
Download App:
  • android
  • ios