Mysuru : ಹಸುಗಳ ಚರ್ಮಗಂಟು ರೋಗಕ್ಕೆ ಸಾಮಾನ್ಯ ಜ್ವರದ ಚಿಕಿತ್ಸೆ
ಜಾನುವಾರು, ದನಗಳಿಗೆ ಚರ್ಮ ಗಂಟು ರೋಗ ಕಾಡುತ್ತಿದ್ದು, ಈ ರೋಗಕ್ಕೆ ನಿರ್ದಿಷ್ಟಔಷಧ ಇಲ್ಲದ ಕಾರಣ ಸದ್ಯಕ್ಕೆ ಸಾಮಾನ್ಯ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ಜತೆಗೆ ರೋಗ ನಿಯಂತ್ರಣಕ್ಕೆ ನಾಟಿ ಔಷಧ ಕೂಡ ಸಹಕಾರಿಯಾಗಿರುವ ಹಿನ್ನೆಲೆಯಲ್ಲಿ ಹಾಲು ಒಕ್ಕೂಟ, ಪಶು ಸಂಗೋಪನಾ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಎಸ್.ಆರ್. ಪ್ರಕಾಶ್
ಸಾಲಿಗ್ರಾಮ (ಅ.17): ಜಾನುವಾರು, ದನಗಳಿಗೆ ಚರ್ಮ ಗಂಟು ರೋಗ ಕಾಡುತ್ತಿದ್ದು, ಈ ರೋಗಕ್ಕೆ ನಿರ್ದಿಷ್ಟಔಷಧ ಇಲ್ಲದ ಕಾರಣ ಸದ್ಯಕ್ಕೆ ಸಾಮಾನ್ಯ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ಜತೆಗೆ ರೋಗ ನಿಯಂತ್ರಣಕ್ಕೆ ನಾಟಿ ಔಷಧ ಕೂಡ ಸಹಕಾರಿಯಾಗಿರುವ ಹಿನ್ನೆಲೆಯಲ್ಲಿ ಹಾಲು ಒಕ್ಕೂಟ, ಪಶು ಸಂಗೋಪನಾ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆತಂಕ ಬಿಟ್ಟು ಮುಂಜಾಗ್ರತೆ ವಹಿಸಲು ಪಶುಪಾಲನಾ ಇಲಾಖೆ ತಿಳಿಸಿದೆ.
ಸಾಲಿಗ್ರಾಮ ವ್ಯಾಪ್ತಿಯಲ್ಲಿ 600 ಲಸಿಕೆ ಬಂದಿದ್ದು 500ಕ್ಕೂ ಹೆಚ್ಚು ಲಸಿಕೆಯನ್ನು (Vaccination) ಜಾನುವಾರುಗಳಿಗೆ (Cow) ನೀಡಲಾಗಿದೆ. ಸ್ಥಳೀಯ ಸಾಲಿಗ್ರಾಮ ಗ್ರಾಪಂ ಔಷಧಿ ಸಿಂಪಡಿಸಲು ಸ್ಯಾನಿಟೈಜರ್ ಮಾಡಿಸಿ ರೈತರಿಗೆ ಅರಿವು ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ಸಾವಿರ ಲಸಿಕೆಗೆ ಬೇಡಿಕೆ
ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನಾದ್ಯಂತ ಈಗಾಗಲೇ 4500 ಸಾವಿರ ಲಸಿಕೆ ವಿತರಿಸಲಾಗಿದೆ. ರಾಸುಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಜತೆಗೆ 11 ಸಾವಿರ ಲಸಿಕೆ ಬೇಕಿದೆ ಎಂದು ನಮ್ಮ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಲಭ್ಯವಿದೆ.
ಗಾಯಗಳಿಗೆ ಲೇಪನ
ಗಾಯಗಳಾಗಿದ್ದರೆ ಒಂದು ಕೈಹಿಡಿ ಕುಪ್ಪಿ ಗಿಡದ ಎಲೆಗಳು, 20 ಗ್ರಾಂ. ಅರಿಶಿಣ, ತಲಾ 1 ಹಿಡಿ ಮೆಹಂದಿ ಸೊಪ್ಪು, ಒಳ್ಳೆ ಬೇವಿನ ಸೊಪ್ಪು, ತುಳಸಿ ಸೊಪ್ಪು, 10 ಎಸಳು ಬೆಳ್ಳುಳ್ಳಿಯನ್ನು ತಲಾ 500 ಮಿ.ಲೀ. ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ 3 ಬಾರಿ ಹಚ್ಚಿದರೆ ಗಾಯ ವಾಸಿಯಾಗಲಿದೆ.
ನಮ್ಮ ಗ್ರಾಮದಲ್ಲಿ 2 ತಿಂಗಳಿಂದ 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು ನಮ್ಮಂತಹ ಸಣ್ಣಪುಟ್ಟರೈತರು ಸಾಲಸೋಲ ಮಾಡಿ ದನಕುರಿಗಳ ಸಾಕಾಣಿಕೆ ಮಾಡುತ್ತಿದ್ದು ಇದರಿಂದ ಧಿಕ್ಕೇತೋಚದ ಹಾಗೆ ಆಗಿದೆ. ಯಾವ ಕಾಯಿಲೆಯಿಂದ ಎನ್ನುವುದೇ ತಿಳುಯುತ್ತಿಲ್ಲ. ಮೃತಪಟ್ಟಜಾನುವಾರುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು.
- ಕೃಷ್ಣನಾಯ್ಕ, ರೈತ, ದೇವಿತಂದ್ರೆ.
ಸಾಲಿಗ್ರಾಮ ವ್ಯಾಪ್ತಿಯಲ್ಲಿ ಎಂಟು ಜಾನುವಾರಿಗೆ ರೋಗ ಬಾದೆ ಕಾಣಿಸಿಕೊಂಡಿದ್ದು ಲಸಿಕೆ ನೀಡಿ ಆರೈಕೆ ಮಾಡಲಾಗಿದೆ. 500ಕ್ಕೂ ಹೆಚ್ಚು ಲಸಿಕೆಯನ್ನು ಜಾನುವಾರಿಗೆ ನೀಡಿದ್ದು, ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಪಶು ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸುವಂತೆ ಕರಪತ್ರ ವಿತರಿಸಿ ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಜಾಗೃತಿ ಮೂಡಿಸಲು ಕ್ರಮ ವಹಿಸಿದೆ.
- ಸುರೇಂದ್ರ, ಪಶುವೈದ್ಯಾಧಿಕಾರಿ, ಸಾಲಿಗ್ರಾಮ.
ಚರ್ಮಗಂಟು ರೋಗ ಸಂಬಂಧ ಮುಂಜಾಗ್ರತೆ ವಹಿಸಲಾಗಿದೆ. ಜತೆಗೆ ತಕ್ಷಣ ಚಿಕಿತ್ಸೆ ನೀಡುವ ಕಾರ್ಯ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಕಾಯಿಲೆಯ ಪ್ರಮಾಣ ತಗ್ಗಿದ್ದು ರೈತರು ಆತಂಕಕ್ಕೆ ಒಳಗಾಗದೆ ರೋಗ ಪೀಡಿತ ರಾಸುಗಳನ್ನು ಪ್ರತ್ಯೇಕವಾಗಿ ಇಟ್ಟು ಸೂಕ್ತ ಚಿಕಿತ್ಸೆ ಕೊಡಿಸಿ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ.
- ಡಾ.ಬಿ. ಮಂಜುನಾಥ್, ಸಹಾಯಕ ನಿರ್ದೇಶಕರು, ಪಶುಪಾಲನ ಇಲಾಖೆ
ನಾಟಿ ಔಷಧಿ ಹೇಗೆ
ರೋಗದ ಲಕ್ಷಣ ಕಂಡು ಬಂದ ತಕ್ಷಣ ಒಂದು ಸಲಕ್ಕೆ 10 ವೀಳ್ಯದೆಲೆ, ತಲಾ 10 ಗ್ರಾಂ ನಷ್ಟುಮೆಣಸು, ಉಪ್ಪು, ಬೆಲ್ಲವನ್ನು ಸೇರಿಸಿ ರುಬ್ಬಿ ಜಾನುವಾರಿಗೆ ತಿನ್ನಿಸಬೇಕು. ಮೊದಲ ದಿನ ಮೂರು ಗಂಟೆಗಳಿಗೊಮ್ಮೆ ನೀಡಬೇಕು. 2ನೇ ದಿನದಿಂದ 2 ವಾರಗಳವರೆಗೆ ಪ್ರತಿದಿನ ಮೂರು ಬಾರಿ ರೋಗಪೀಡಿತ ರಾಸುಗಳಿಗೆ ನೀಡಬೇಕು.
ಮುನ್ನೆಚರಿಕೆ ಕ್ರಮವಾಗಿ ಎರಡು ತಿಂಗಳು ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ, ದನಗಳ ಸಂತೆ ಮತ್ತು ಜಾನುವಾರುಗಳ ಸಾಗಾಣಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಚುಂಚನಕಟ್ಟೆಗ್ರಾಮದಲ್ಲಿ ಬುಧವಾರ ನಡೆಯುತ್ತಿದ್ದ ಜಾನುವಾರು ಸಂತೆಗೆ ನಡೆಸದಂತೆ ಪಶು ಅಧಿಕಾರಿಗಳು ತಾಲೂಕು ಆಡಳಿತ, ಪೊಲೀಸ್ ಹಾಗೂ ಸ್ಥಳೀಯ ಪಂಚಾಯಿತಿಗಳಿಗೆ ಸಂತೆ ಕಟ್ಟದಂತೆ ಕಟ್ಟೆಚ್ಚರ ವಹಿಸಲು ಆದೇಶ ಹೊರಡಿಸಲಾಗಿದೆ.