ಬೆಳಗಾವಿ: ಆಹಾರ ಅರಸಿ ಬಂದು ರೈಲಿಗೆ ಸಿಕ್ಕಿ ಪ್ರಾಣಬಿಟ್ಟ ಕಾಡುಕೋಣ
ಹಳಿಯ ಬದಿ ಆಹಾರ ಸೇವಿಸುವಾಗ ರೈಲಿಗೆ ಅಪ್ಪಳಿಸಿ ಕಾಡುಕೋಣ ಸಾವು| ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಿರಾವಳಾ ಗ್ರಾಮದ ಬಳಿ ನಡೆದ ಘಟಣೆ| ಕಾಡುಕೋಣಕ್ಕೆ ಡಿಕ್ಕಿ ಹೊಡೆದ ರಾಣಿ ಚನ್ನಮ್ಮ ರೈಲು|
ಖಾನಾಪುರ(ಫೆ.26): ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದ ಕಿರಾವಳಾ ಗ್ರಾಮದ ಬಳಿ ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಕಾಡುಕೋಣವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಸೋಮವಾರ ಸಂಜೆ 7 ರಿಂದ 8 ಗಂಟೆ ಅವಧಿಯಲ್ಲಿ ಈ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಿದ್ದ ರಾಣಿ ಚನ್ನಮ್ಮ ರೈಲಿಗೆ ಕಾಡುಕೋಣ ಬಲಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಡಿಎಫ್‌ಒ ಎಂ.ವಿ ಅಮರನಾಥ್, ಎಸಿಎಫ್ ಶಶಿಧರ್, ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಕಾಡುಕೋಣದ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ. ಬಳಿಕ ಕಿರಾವಳೆ ಅರಣ್ಯದಲ್ಲಿ ಇಲಾಖೆಯ ನಿಯಮಾನುಸಾರ ಕಾಡುಕೋಣದ ಕಳೇ ಬರದ ಅಂತ್ಯಕ್ರಿಯೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ವಲಯದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಇದ್ದರು.
ರೈಲು ಹಳಿಗಳ ಪಕ್ಕದಲ್ಲಿ ಬಿದ್ದಿದ್ದ ಆಹಾರ ತಿನ್ನುತ್ತಿದ್ದ ಕಾಡುಕೋಣಕ್ಕೆ ರೈಲು ಅಪ್ಪಳಿಸಿದ್ದರಿಂದ ಈ ದುರಂತ ನಡೆದಿದೆ. ರೈಲಿನ ಮುಂದಿನ ಭಾಗ ಕಾಡುಕೋಣಕ್ಕೆ ತಗುಲಿದ ಬಳಿಕ ಕಾಡುಕೋಣದ ದೇಹವನ್ನು ಕೆಲ ದೂರ ಎಳೆದುಕೊಂಡು ಹೋಗಿದೆ. ಮಧ್ಯ ವಯಸ್ಕ ಕಾಡುಕೋಣ ಹಳಿಗಳ ಪಕ್ಕ ರೈಲ್ವೆ ಪ್ರಯಾಣಿಕರು ತಿಂದು ಎಸೆದ ಆಹಾರವನ್ನು ಸೇವಿಸುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇದೇ ರೀತಿಯ ಘಟನೆ ತಾಲೂಕಿನ ಮೂಲಕ ಹಾದುಹೋದ ರೈಲು ಮಾರ್ಗದಲ್ಲಿ ಈ ಹಿಂದೆ ಹಲವು ಬಾರಿ ನಡೆದಿವೆ. ಒಂದು ಕಾಡಾನೆ ಮತ್ತು ಹಲವಾರು ಕಾಡುಕೋಣಗಳು ರೈಲಿಗೆ ಬಲಿಯಾಗಿವೆ ಎಂದು ಎಸಿಎಫ್ ಶಶಿಧರ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾಡಿನಲ್ಲಿ ಆಹಾರ ಎಸೆಯಬೇಡಿ
ರೈಲ್ವೆ ಪ್ರಯಾಣಿಕರು ಸಾಮಾನ್ಯವಾಗಿ ಆಹಾರ ಸೇವನೆ ಮಾಡಿ ಅಳಿದುಳಿದ ಆಹಾರವನ್ನು ಹೊರಗೆ ಚೆಲ್ಲುತ್ತಾರೆ. ಆದರೆ, ಇಂತಹ ಉಳಿದ ಆಹಾರ ಪದಾರ್ಥವನ್ನು ಚೆಲ್ಲದೇ ರೈಲ್ವೆ ನಿಲ್ದಾಣ ಅಥವಾ ರೈಲಿ ಬೋಗಿಯಲ್ಲಿ ಕಸ ಚೆಲ್ಲಲು ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲಿಯೇ ಅದನ್ನು ಹಾಕಬಹುದು. ಅರಣ್ಯ ಪ್ರದೇಶದಲ್ಲಿ ಹಳಿಗಳು ಇರುವುದರಿಂದ ಆಹಾರ ಹುಡುಕಿಕೊಂಡು ಬಂದ ವನ್ಯ ಪ್ರಾಣಿಗಳು ಹಳಿಗಳ ಬಳಿ ಬಿದ್ದ ಆಹಾರ ತಿನ್ನುತ್ತ ಅಲ್ಲಿಯೇ ನಿಂತುಬಿಡುತ್ತವೆ. ಈ ವೇಳೆ ರೈಲ್ವೆ ವೇಗವಾಗಿ ಬಂದು ಅವುಗಳಿಗೆ ಡಿಕ್ಕಿ ಹೊಡೆದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ರೈಲ್ವೆ ಪ್ರಯಾಣಿಕರು ಕಾಡಿನಲ್ಲಿ ಹಾದು ಹೋಗಿರುವ ರೈಲ್ವೆ ಹಳಿಯಲ್ಲಿ ಯಾವ ಕಾರಣಕ್ಕೂ ಆಹಾರ ಎಸೆಯಬಾರದು ಎಂಬುವುದು ರೈಲ್ವೆ, ಅರಣ್ಯ ಇಲಾಖೆಯ ಅಧಿಕಾರಿಗಳ ಕಳಕಳಿಯ ಮನವಿಯಾಗಿದೆ.