ಬೆಂಗಳೂರು [ಡಿ.27]:  ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ರೈಲು ಹಳಿ ತಪ್ಪಿದ್ದು ಮತ್ತೊಂದು ರೈಲಿನ ಬೋಗಿಗೆ ಬೆಂಕಿ ತಗುಲಿರುವ ಘಟನೆಗಳು ಜರುಗಿದ್ದು, ಅದೃಷ್ಟವಶಾತ್‌ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೈಸೂರಿನಿಂದ ಬರುತ್ತಿದ್ದ ‘ಮೈಸೂರು- ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್‌’ ರೈಲು (ಸಂಖ್ಯೆ 16023) ಗುರುವಾರ ನಗರದ ನಾಯಂಡಹಳ್ಳಿ ಬಳಿ ಹಳಿ ತಪ್ಪಿದರೂ ಲೋಕೊ ಪೈಲಟ್‌ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಬೆಳಗ್ಗೆ 11ರ ಸುಮಾರಿಗೆ 16 ಬೋಗಿಯ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ನಾಯಂಡಹಳ್ಳಿ ಬಳಿ ಬಂದಿದೆ. ಅಂದರೆ, ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಒಂದು ಕಿ.ಮೀ. ಅಂತರದಲ್ಲಿ ರೈಲಿನ ಎಂಜಿನ್‌ನ ಆ್ಯಕ್ಸೆಲ್‌ ಹಳಿ ತಪ್ಪಿದೆ. ರೈಲು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ಎಂಜಿನ್‌ ಹಳಿ ತಪ್ಪಿದ್ದನ್ನು ಗ್ರಹಿಸಿದ ಲೋಕೋ ಪೈಲಟ್‌ ಇ.ಕೆ.ರಾಜೀವ್‌, ಎಂಜಿನ್‌ ಆಫ್‌ ಮಾಡಿ ತುರ್ತು ನಿಲುಗಡೆಗೆ ಮುಂದಾಗಿದ್ದಾರೆ. ಈ ವೇಳೆ ರೈಲು 22 ಮೀಟರ್‌ನಷ್ಟುಸಂಚರಿಸಿ ನಿಂತಿದೆ. ಘಟನೆಯಲ್ಲಿ ರೈಲಿನ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಲೋಕೋ ಪೈಲಟ್‌ ತೋರಿದ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಲೋಕೋ ಪೈಲಟ್‌ ಅವರ ಈ ಕಾರ್ಯಕ್ಕೆ ರೈಲ್ವೆ ಅಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲು ಎಂಜಿನ್‌ ಹಳಿ ತಪ್ಪಿರುವ ವಿಚಾರ ತಿಳಿದ ತಕ್ಷಣ ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಪರಿಹಾರ ಮತ್ತು ಉಪಕರಣಗಳ ವಾಹನವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ಕುಮಾರ್‌ ವರ್ಮಾ ಹಾಗೂ ಚೀಫ್‌ ರೋಲಿಂಗ್‌ ಸ್ಟಾಕ್‌ ಎಂಜಿನಿಯರ್‌ ಆರ್‌.ವಿ.ಎನ್‌.ಶರ್ಮಾ ಸ್ಥಳ ಪರಿಶೀಲಿಸಿದರು. ಹಳಿ ತಪ್ಪಿದ ರೈಲು ಎಂಜಿನ್‌ ಮರಳಿ ಹಳಿಗೆ ಕೂರಿಸಲು ಸಿಬ್ಬಂದಿಗೆ ಅಗತ್ಯ ಸಲಹೆ-ಸೂಚನೆ ನೀಡಿದರು. ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಎಂಜಿನ್‌ ಹಳಿಗೆ ಕೂರಿಸಲಾಯಿತು.

ಮಧ್ಯಾಹ್ನ 12.36ಕ್ಕೆ ಘಟನಾ ಸ್ಥಳದಿಂದ ಹೊರಟ ಈ ರೈಲು ಮಧ್ಯಾಹ್ನ 1ಕ್ಕೆ ಮೆಜೆಸ್ಟಿಕ್‌ನ ಕೆಎಸ್‌ಆರ್‌ ರೈಲು ನಿಲ್ದಾಣ ತಲುಪಿತು. ಘಟನೆ ಹಿನ್ನೆಲೆಯಲ್ಲಿ ಈ ರೈಲನ್ನು ಯಲಹಂಕದ ಬದಲು ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಸ್ಥಗಿತಗೊಳಿಸಲಾಯಿತು. ಬಳಿಕ ಯಲಹಂಕದಿಂದ ಹೊರಡಬೇಕಿದ್ದ ಯಲಹಂಕ- ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 16024) ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಮೈಸೂರಿಗೆ ಕಾರ್ಯಾಚರಣೆ ಮಾಡಲಾಯಿತು.

ರೈಲು ಸಂಚಾರ ವಿಳಂಬ:

ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಮೈಸೂರಿಗೆ ತೆರಳಬೇಕಿದ್ದ ಎಂಜಿಆರ್‌ ಚೆನ್ನೈ ಸೆಂಟ್ರಲ್‌- ಮೈಸೂರು ಶತಾಬ್ಧಿ ಎಕ್ಸ್‌ಪ್ರೆಸ್‌, ಬಾಗಲಕೋಟೆ- ಮೈಸೂರು ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಕೆಲ ಕಾಲ ವಿಳಂಬವಾಯಿತು. ಅಂತೆಯೆ ಮೈಸೂರಿನಿಂದ ಹೊರಡಬೇಕಿದ್ದ ಮೈಸೂರು- ಉದಯಪುರ್‌ ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌ ಎಕ್ಸ್‌ಪ್ರೆಸ್‌, ಚಾಮರಾಜನಗರ- ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್‌, ಮೈಸೂರು- ಜೈಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರವೂ ವಿಳಂಬವಾಯಿತು.

ಜಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂಜಿನ್‌ ಹಳಿ ತಪ್ಪಲು ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ. ತನಿಖಾ ವರದಿ ಕೈಸೇರಿದ ಬಳಿಕ ನಿಖರ ಕಾರಣ ತಿಳಿದು ಬರಲಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಎಸಿಗೆ ಬೋಗಿಗೆ ಬೆಂಕಿ 

ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಯಶವಂತಪುರ- ಬಿಕಾನೇರ್‌ ರೈಲಿನ ಹವಾನಿಯಂತ್ರಿತ ಬೋಗಿಗೆ (ಬಿ4) ಬೆಂಕಿ ಹೊತ್ತಿಕೊಂಡು 10ಕ್ಕೂ ಹೆಚ್ಚು ಆಸನಗಳಿಗೆ ಹಾನಿಯಾಗಿದೆ. ರಾಜಸ್ಥಾನದ ಬಿಕಾನೇರ್‌ನಿಂದ ಯಶವಂತಪುರಕ್ಕೆ ಬುಧವಾರ ಬಂದಿದ್ದ ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು. ಬೆಳಗ್ಗೆ 9.30ರ ಸುಮಾರಿಗೆ ಬಿ4 ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ನಿಲ್ದಾಣದ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಎರಡು ವಾಹನಗಳಲ್ಲಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದ್ದಾರೆ. 10 ಆಸನಗಳು ಹಾಗೂ ಬೋಗಿಯ ಹೊರಭಾಗ ಬಹುತೇಕ ಹಾನಿಯಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.