ಏಷ್ಯಾನೆಟ್ ಸುವರ್ಣ ನ್ಯೂಸ್ ರೈತ ರತ್ನ ಪ್ರಶಸ್ತಿ ವಿಜೇತೆ, ತೃತೀಯ ಲಿಂಗಿ ಅರುಂಧತಿ ಅವರು ಭರಮಸಾಗರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಿಧನರಾಗಿದ್ದಾರೆ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದ ಇವರು, ತಮ್ಮ ಸಮುದಾಯದವರಿಗೂ ನೆರವಾಗುತ್ತಿದ್ದರು.

ಚಿತ್ರದುರ್ಗ: ಭೀಕರ ಅಪಘಾತದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ರೈತ ರತ್ನ ಪ್ರಶಸ್ತಿ ವಿಜೇತೆ ತೃತೀಯ ಲಿಂಗಿ ಅರುಂಧತಿ ಕೊನೆಯುಸಿರೆಳೆದಿದ್ದಾರೆ. ಭರಮಸಾಗರದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಸಾಧಕಿ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಂಧತಿ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕೊಡ ಮಾಡುವ ರೈತ ಪ್ರಶಸ್ತಿ ಸ್ವೀಕರಿಸಿದ್ದರು. 40 ವರ್ಷದ ತೃತೀಯ ಲಿಂಗಿ ಅರುಂಧತಿ ಅವರು ಕೃಷಿ ಮೂಲಕ ಸ್ವಾವಲಂಬನೆಯಾಗಿ ಜೀವನ ಸಾಗಿಸುತ್ತಿದ್ದರು. ಕುರಿ, ಮೇಕೆ, ಕೋಳಿಗಳ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದರು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹಲವರಿಗೆ ಮಾದರಿಯಾಗಿದ್ದ ತೃತೀಯ ಲಿಂಗಿ ಅರುಂಧತಿ

ಅರುಂಧತಿ ಅವರು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿಯ ತಮ್ಮ ಜಮೀನಿನಲ್ಲಿ ಸಣ್ಣ ಜಾನುವಾರು ಫಾರ್ಮ್ ನಿರ್ಮಿಸಿ ಜೀವನ ನಡೆಸುತ್ತಿದ್ದರು. ಅಲ್ಲದೇ ತಮ್ಮ ಸಮುದಾಯದ ಹಲವರಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿದ್ದರು. ಭಿಕ್ಷಾಟನೆ ಮತ್ತು ಇತರ ಚಟುವಟಿಕೆಗಳನ್ನು ಬಿಟ್ಟು ಕುರಿ, ಮೇಕೆ, ಕೋಳಿ ಸಾಕಣಿಗೆ ಅಗತ್ಯವಿರುವ ತರಬೇತಿಯನ್ನು ನೀಡುತ್ತಿದ್ದರು. ಆ ಮೂಲಕ ಸ್ಥಿರ ಆದಾಯ ತೋರಿಸುತ್ತಿದ್ದರು. ಪೇ ಇಟ್ ಫಾರ್ವರ್ಡ್ ಮಾದರಿಯಲ್ಲಿ ಹಲವರಿಗೆ ಪ್ರಾಣಿಗಳನ್ನು ನೀಡುವ ಮೂಲಕ ಹಲವರಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದರು. ಅವರ ಈ ಸಾಧನೆಯನ್ನು ಗುರುತಿಸಿದ ಸಂಸ್ಥೆ, ಅರುಂಧತಿ ಅವರಿಗೆ ಸ್ವಾವಲಂಬಿ ಕೃಷಿ ಆಧರಿಸಿ ಪ್ರಶಸ್ತಿ ನೀಡಿತ್ತು.

ಬಡವರಿಗೆ, ತನ್ನದೇ ಸಮುದಾಯವರಿಗೆ ನೆರವಿನ ಹಸ್ತಾ!

ನಾವು ಗಂಡಾಗಿ ಹುಟ್ಟಿ, ಹೆಣ್ಣಾಗಿ ಇರ್ತೇವೆ. ನಮಗೆ ಬೇರೆ ಕೆಲಸ ಕೊಡುವುದಿಲ್ಲ. ಕೈಕಾಲು ನೆಟ್ಟಗೆ ಇದೆ, ನಿಮಗೆ ದುಡಿಯಲು ಏನು ಸಮಸ್ಯೆ ಅಂತ ಹಲವರು ಪ್ರಶ್ನೆ ಮಾಡ್ತಾರೆ. ಆದರೆ ಕೆಲಸ ಕೊಡಿ ಎಂದರೆ ಯಾರು ಮುಂದೆ ಬರುವುದಿಲ್ಲ. ಕೆಲಸ ಮಾಡಿ ಅಂತ ಕೇಳೋದಕ್ಕೆ ಚೆಂದ, ಆದರೆ ಕೆಲಸ ಕೊಡಿ ಅಂತ ಕೇಳಿದರೆ ರಿಯಲ್ ಫ್ಯಾಕ್ಟ್ ಹೊರ ಬರುತ್ತದೆ. ಆದ್ದರಿಂದ ಸ್ವಾವಲಂಬಿ ಜೀವನ ನಡೆಸುವುದು ಹೇಗೆ ಅಂತ ನಾನೇ ಮಾಡಿತೊರಿಸಲು ಮುಂದಾದೆ. ಹೈನುಗಾರಿಕೆ, ಕೃಷಿ, ಕುರಿ, ಕೋಳಿ ಸಾಗಾಣಿಕೆ ಮಾಡಲು ಆರಂಭ ಮಾಡಿ ಯಶಸ್ವಿಯಾಗಿದ್ದೇನೆ. ಯೂಟ್ಯೂಬ್‌ನಲ್ಲಿ ನೋಡಿ ಇದನ್ನು ಮಾಡಲು ಪ್ರೇರಣೆ ಸಿಕ್ತು, ನನ್ನ ಬಳಿ ಇದ್ದ ಚಿನ್ನ ಮಾರಾಟ ಮಾಡಿ, ಕೃಷಿ ಆರಂಭ ಮಾಡಿದೆ. ಒಮ್ಮೆ ನನ್ನ ಬಳಿ ಇದ್ದ 50 ಮೇಕೆಗಳನ್ನು ಕಳ್ಳತನ ಮಾಡಿದ್ದರು. ಪೊಲೀಸರಿಂದ ಯಾವುದೇ ನೆರವು ಕೂಡ ಸಿಗಲಿಲ್ಲ. ಕುಟುಂಬ, ಸ್ನೇಹಿತರ ಬೆಂಬಲ ಸಿಗಲಿಲ್ಲ. ಏಕಾಂಗಿಯಾಗಿ ಮತ್ತೆ ಕೃಷಿ ಆರಂಭ ಮಾಡಿದೆ. ಮಹಿಳಾ ನಿಗಮದವರು ಲೋನ್ ಕೊಟ್ಟು ನೆರವು ನೀಡಿದರು, ಸಿಟಿಟಿವಿ ಕ್ಯಾಮೆರಾ ಅಳವಡಿಸಿದ್ದೇನೆ. ಆ ಬಳಿಕ ಓರ್ವ ಸ್ನೇಹಿತೆ ಕೂಡ ಇದಕ್ಕೆ ಸಾಥ್ ನೀಡಲು. 10 ಕುರಿಗಳನ್ನು ಶುರು ಮಾಡಿ 50 ಕುರಿಗಳನ್ನು ಮಾಡಿದ್ದೇವೆ. 2022ರಿಂದ ಆರಂಭವಾದ ಕೃಷಿಯಿಂದ ಬೇರೆ ಅವರು ಬೆಳೆಯಬೇಕು ಅಂತ, ಎರಡು ಮೇಕೆ, 50 ಕೋಳಿ ನೀಡಲು ಶುರು ಮಾಡಿದೆ. ಇದಕ್ಕೆ ಅವರು ಹಣವನ್ನು ನೀಡುವಂತೆ ಇಲ್ಲ, ಆದರೆ ಅವರು ಅದರಲ್ಲಿ ದೊಡ್ಡದು ಮಾಡಿದ ಬಳಿಕ ಎರಡು ಮೇಕೆಗಳನ್ನು ಮತ್ತೊಬ್ಬರಿಗೆ ಉಚಿತವಾಗಿ ನೀಡಲು ಆಗ್ರಿಮೆಂಟ್ ಮಾಡುತ್ತಿದ್ದೇವು. ಇದರಂತೆ ಒಂದು ಗ್ರೂಪ್ ಮಾಡಿಕೊಂಡು ಈ ಕೆಲಸವನ್ನು ಮುಂದುವರಿಸಿದ್ದೇವೆ ಎಂದು ಸಂದರ್ಶನದಲ್ಲಿ ಅರುಂಧತಿ ತಿಳಿಸಿದ್ದರು.