Asianet Suvarna News Asianet Suvarna News

ಉಡುಪಿ ಪುರ ಪ್ರವೇಶಿಸಿದ ಈಶಪ್ರಿಯ ತೀರ್ಥರು

ಜ.18ರಂದು ಕೃಷ್ಣಮಠದಲ್ಲಿ ಕೃಷ್ಣನ ಪೂಜೆಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಕಳೆದಾರು ತಿಂಗಳಿಂದ ದೇಶದ ನಾನಾ ಕಡೆಯ ಪುಣ್ಯ ತೀರ್ಥ ಕ್ಷೇತ್ರಗಳ ಸಂದರ್ಶನ ನಡೆಸಿ, ಬುಧವಾರ ಉಡುಪಿಗೆ ಆಗಮಿಸಿದ್ದಾರೆ. ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಉಡುಪಿ ಪುರಪ್ರವೇಶ ಮೆರವಣಿಗೆಯು ಬುಧವಾರ ಸರಳ, ಸುಂದರ, ಸಂಪ್ರದಾಯಬದ್ಧವಾಗಿ ನಡೆಯಿತು.

traditional rituals done in udupi pejawara mutt
Author
Bangalore, First Published Jan 9, 2020, 12:59 PM IST

ಉಡುಪಿ(ಜ.09): ಭಾವಿ ಪರ್ಯಾಯೋತ್ಸವವನ್ನು ನಡೆಸಲಿರುವ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಉಡುಪಿ ಪುರಪ್ರವೇಶ ಮೆರವಣಿಗೆಯು ಬುಧವಾರ ಸರಳ, ಸುಂದರ, ಸಂಪ್ರದಾಯಬದ್ಧವಾಗಿ ನಡೆಯಿತು.

ಜ.18ರಂದು ಕೃಷ್ಣಮಠದಲ್ಲಿ ಕೃಷ್ಣನ ಪೂಜೆಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಕಳೆದಾರು ತಿಂಗಳಿಂದ ದೇಶದ ನಾನಾ ಕಡೆಯ ಪುಣ್ಯ ತೀರ್ಥ ಕ್ಷೇತ್ರಗಳ ಸಂದರ್ಶನ ನಡೆಸಿ, ಬುಧವಾರ ಉಡುಪಿಗೆ ಆಗಮಿಸಿದ್ದಾರೆ.

ಸಿದ್ದು, ಎಚ್‌ಡಿಕೆ ಆರಿಸಿದ್ದ 7 ಲಕ್ಷ ಮಂದಿಗೆ ಮನೆ ಇಲ್ಲ!

ನಗರದ ಹೊರಭಾಗದ ಜೋಡುಕಟ್ಟೆಗೆ ಮಧ್ಯಾಹ್ನ 2.40ಕ್ಕೆ ಆಗಮಿಸಿದ ಶ್ರೀಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ವಸತಿ ಸಚಿವ ವಿ.ಸೋಮಣ್ಣ ಹಾರ ಹಾಕಿ ಸ್ವಾಗತಿಸಿದ್ದಾರೆ. ನಂತರ ಶ್ರೀಗಳು ಜೋಡುಕಟ್ಟೆಯಲ್ಲಿರುವ ಗೋಪುರದಲ್ಲಿ ತಮ್ಮ ಮಠದ ಪಟ್ಟದ ದೇವರು ಕಾಳಿಯಮರ್ಧನನಿಗೆ ಪೂಜೆ ಸಲ್ಲಿಸಿದರು.

ಭವ್ಯ ಮೆರವಣಿಗೆ:

ಬಳಿಕ ಪುರಪ್ರವೇಶ ಮೆರವಣಿಗೆ ಆರಂಭವಾಯಿತು. ಶ್ರೀಗಳು ಗೋಪುರದ ಮುಂಭಾಗದ ಎತ್ತರದ ಕಟ್ಟೆಯ ಮೇಲೆ ಆಸೀನರಾಗಿ ಮೆರವಣಿಗೆಯ ವೈಭವವನ್ನು ವೀಕ್ಷಿಸಿದರು. ವಿಶೇಷವಾಗಿ ಈ ಮೆರವಣಿಗೆಯಲ್ಲಿ ಅದಮಾರು ಶಿಕ್ಷಣ ಸಂಸ್ಥೆಗಳಾದ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಅದಮಾರು ಪೂರ್ಣಪ್ರಜ್ಞ ಕಾಲೇಜು, ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜುಗಳ 3500 ವಿದ್ಯಾರ್ಥಿಗಳು ಅತ್ಯಂತ ಶಿಸ್ತುಬದ್ಧವಾಗಿ ಭಾಗವಹಿಸಿದ್ದರು.

ಪರಿಸರಪೂರಕ ಆಚರಣೆ:

ಎರಡು ವರ್ಷಗಳ ಪರ್ಯಾಯೋತ್ಸವವನ್ನು ಪರಿಸರಪೂರಕವಾಗಿ ನಡೆಸಬೇಕು ಎಂಬ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ, ವಿದ್ಯಾರ್ಥಿಗಳು ಮಳೆ ಕೊಯ್ಲು ಮಾಡುವ, ಗಿಡಗಳನ್ನು ನೆಡುವ, ಮರಗಳನ್ನು ಉಳಿಸುವ, ಪ್ಲಾಸ್ಟಿಕ್‌ ನಿಷೇಧಿಸುವ ಸಂದೇಶಗಳುಳ್ಳ ಭಿತ್ತಿಪತ್ರವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು.

ಮೆರವಣಿಗೆಯು ಜೋಡುಕಟ್ಟೆಯಿಂದ ಹೊರಟು, ಕೋರ್ಟ್‌ ರಸ್ತೆಯಲ್ಲಿ ಸಾಗಿ, ತ್ರಿವೇಣಿ ವೃತ್ತ, ಐಡಿಯಲ್‌ ವೃತ್ತಗಳನ್ನು ಹಾದು, ತೆಂಕಪೇಟೆಯ ಮೂಲಕ ರಥಬೀದಿಗೆ ತಲುಪಿತು. ಅಲ್ಲಿ ಶ್ರೀಗಳು ಕೃಷ್ಣಮಠಕ್ಕೆ ತೆರಳಿ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದರು. ನಂತರ ಅಲ್ಲಿಂದ 5.55ರ ಮುಹೂರ್ತದಲ್ಲಿ ತಮ್ಮ ಪಟ್ಟದ ದೇವರೊಂದಿಗೆ ಅದಮಾರು ಮಠವನ್ನು ಪ್ರವೇಶಿಸಿದ್ದಾರೆ.

ಕಾಂಗ್ರೆಸ್‌ಗೆ ಅಮಿತ್‌ ಶಾ ಅವ್ರನ್ನು ತಡೆಯೋಕಾಗಲ್ಲ: ಬೊಮ್ಮಾಯಿ

ಈ ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್‌, ಉಪವಿಭಾಗಾಧಿಕಾರಿ ರಾಜು, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಮತ್ತು ವಿನಯಕುಮಾರ ಸೊರಕೆ ಭಾಗವಹಿಸಿದ್ದರು.

ಶ್ರೀಕೃಷ್ಣ ಸೇವಾ ಬಳಗದ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ಪುರಪ್ರವೇಶ - ಪರ್ಯಾಯ ಮೆರವಣಿಗೆಯ ಸಂಚಾಲಕ ಯಶಪಾಲ್‌ ಸುವರ್ಣ, ಗೋವಿಂದರಾಜ ಭಟ್‌, ಸುಬ್ರಹ್ಮಣ್ಯ ಭಟ್‌ ಮುಂತಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಕಾಲ್ನಡಿಗೆಯಲ್ಲಿ ಬಂದ ಶ್ರೀಗಳು

ಪಟ್ಟದ ದೇವರನ್ನು ಪಲ್ಲಕ್ಕಿಯನ್ನು ಎದುರಿನಲ್ಲಿಟ್ಟು ಶ್ರೀಗಳು ಅದರ ಹಿಂದೆ ಮೆರವಣಿಗೆಯಲ್ಲಿ ಸಾಗಿ ಬಂದರು. ಈ ಹಿಂದಿನ ಪರ್ಯಾಯೋತ್ಸವಗಳಲ್ಲಿ ಪುರಪ್ರವೇಶ ಮಾಡುವ ಶ್ರೀಗಳು ತೆರೆದ ಅಲಂಕೃತ ವಾಹನಗಳನ್ನು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದರು. ಆದರೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಭಕ್ತರ ಒತ್ತಾಯದ ಹೊರತಾಗಿಯೂ, ಜನರ ನಡುವೆ ಕಾಲ್ನಡಿಗೆಯಲ್ಲಿಯೇ ಮೆರವಣಿಗೆಯಲ್ಲಿ ಬಂದು ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದರು.

ಬೀಳ್ಕೊಟ್ಟಹಿರಿಯ ಶ್ರೀಗಳು

ದೇಶ ಸಂಚಾರ ಮುಗಿಸಿ ಬಂದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿಗೆ ಬರುವ ಮೊದಲು ಪಡುಬಿದ್ರಿ ಸಮೀಪದ ಅದಮಾರು ಮೂಲಮಠದಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಬುಧವಾರ ಹಿರಿಯ ಶ್ರೀಗಳಾದ ಶ್ರೀವಿಶ್ವಪ್ರಿಯ ತೀರ್ಥರು ತಮ್ಮ ಶಿಷ್ಯರನ್ನು ಉಡುಪಿಗೆ ತೆರಳುವಾಗ ಸಾಂಪ್ರದಾಯಿಕವಾಗಿ ಮಂಗಳವಾದ್ಯ ಘೋಷಗಳೊಂದಿಗೆ ಮುಖ್ಯರಸ್ತೆಯವರೆಗೆ ಮೆರವಣಿಗೆಯಲ್ಲಿ ಬೀಳ್ಕೊಟ್ಟರು. ಈ ಮೆರವಣಿಗೆಯಲ್ಲಿ ಶ್ರೀಮಠದ ನೂರಾರು ಭಕ್ತರು ಭಾಗವಹಿಸಿದ್ದರು.

ಸಡಗರದ ಮೆರವಣಿಗೆ

ಮೆರವಣಿಗೆಯಲ್ಲಿ ಶ್ರೀಮಠದ ಬಿರುದಾವಳಿಗಳು, ಒಂದು ಕುದುರೆ, 3 ಒಂಟೆಗಳು, ವೇದಘೋಷ, ಪೂರ್ಣಕುಂಭಗಳು, ಚಿಲಿಪಿಲಿ ಗೊಂಬೆ, ಹುಲಿವೇಷ, ದಾಂಡಿಯಾ, ಚಂಡೆ ಕೋಲಾಟ, ಕಂಗೀಲು, ತಾಲೀಮು, ಪಂಚವಾದ್ಯ, ಗಣೇಶ ನೃತ್ಯ, ಲಾವಣಿ, ಗರ್ಭಾ ನೃತ್ಯ, ಭಾಂಗ್ರಾ ನೃತ್ಯ, ಗೂಮರ್‌, ಮುಖವಾಡಗಳು, ನೃತ್ಯ ಭಜನೆ, ಕಂಸಾಳೆ, ಕಥಕ್ಕಳಿ, ಬಂಗಾಳಿ ನೃತ್ಯ, ಮಣಿಪುರಿ ನೃತ್ಯ, ಕೃಷ್ಣ ಗೋಪಿಕೆಯರು, ಕುಡುಬಿ ನೃತ್ಯ, ಕೊಂಬು ನಾಗಸ್ವರ, ನಡೆಚಪ್ಪರ, ಸ್ಯಾಕ್ಯಫೋನ್‌ಗಳು ಗಮನಸೆಳೆದವು.

Follow Us:
Download App:
  • android
  • ios