Asianet Suvarna News Asianet Suvarna News

ದೂದಸಾಗರ: ರೈಲು ಹಳಿ ಮೇಲಿನ ಮಣ್ಣು ತೆರವು, ಪ್ರಯಾಣಿಕರು ಸುರಕ್ಷಿತ

* ಬರೋಬ್ಬರಿ 22 ಗಂಟೆ ನಿರಂತರ ಕಾರ್ಯಾಚರಣೆ
* ದೂದಸಾಗರ ಬಳಿ 2 ಕಡೆ ಭೂಕುಸಿತವಾಗಿತ್ತು
* ಲೋಂಡಾ ನಿಲ್ದಾಣದಲ್ಲಿ ಸಿಲುಕಿದ್ದ 107 ಪ್ರಯಾಣಿಕರು ಸುರಕ್ಷಿತ
 

Track Cleared and Rubble Removed Near Dudhsagar grg
Author
Bengaluru, First Published Jul 25, 2021, 10:51 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಜು.25): ಮಳೆಯಿಂದ ನೈರುತ್ಯ ವಲಯದ ವ್ಯಾಪ್ತಿಯ ದೂದಸಾಗರ ಬಳಿ ಎರಡು ಕಡೆ ಭೂಕುಸಿತವಾಗಿ ಹಳಿ ಮೇಲೆ ಬಿದ್ದಿದ್ದ ಮಣ್ಣನ್ನು ಶನಿವಾರ ಬೆಳಗ್ಗೆವರೆಗೂ ಕಾರ್ಯಚರಣೆ ನಡೆಸಿ ತೆರವುಗೊಳಿಸಲಾಗಿದೆ.

ರೈಲು ಸಂಚರಿಸಲು ದಾರಿ ಸುಗಮವಾಗಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಶನಿವಾರ ಕೂಡ ಕೆಲ ರೈಲುಗಳ ಸಂಚಾರ ರದ್ದುಪಡಿಸಿದೆ. ಈ ನಡುವೆ ಭೂಕುಸಿತದಿಂದ ಲೋಂಡಾ ರೈಲ್ವೆ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದ 107 ಪ್ರಯಾಣಿಕರು ಸುರಕ್ಷಿತವಾಗಿ ಶನಿವಾರ ಬೆಳಗ್ಗೆ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. 

ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ದೂದಸಾಗರ- ಸೋನಾಲಿಮ್‌, ದೂದಸಾಗರ -ಕಾರನ್‌ಜೋಲ್‌ ಬಳಿ ಗುಡ್ಡ ಕುಸಿದಿತ್ತು. ಹಳಿ, ರೈಲಿನ ಮೇಲೆಯೇ ಗುಡ್ಡದ ಮಣ್ಣೆಲ್ಲ ಕುಸಿದಿತ್ತು. ಇದರಿಂದಾಗಿ ಮಂಗಳೂರು- ಮುಂಬೈ ರೈಲು ಹಳಿ ಕೂಡ ತಪ್ಪಿತ್ತು. ಈ ರೈಲಿನ ಪ್ರಯಾಣಿಕರನ್ನು ಮಡಗಾಂವ್‌ಗೆ ಕಳುಹಿಸಲಾಗಿತ್ತು. ಇನ್ನು ನಿಜಾಮವುದ್ದೀನ್‌- ವಾಸ್ಕೋಡಿಗಾಮಾ ರೈಲು ಮುಂದೆ ಸಂಚರಿಸಲಾಗದೇ ಲೋಂಡಾ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು.

Track Cleared and Rubble Removed Near Dudhsagar grg

2 ಹಿಟಾಚಿ, 17ಕ್ಕೂ ಅಧಿಕ ಟ್ರ್ಯಾಕ್ಮನ್‌, 50ಕ್ಕೂ ಅಧಿಕ ಕಾರ್ಮಿಕರು ಸುಮಾರು 22 ಗಂಟೆ ಕಾಲ ನಿರಂತರ ಕಾರ್ಯಾಚರಣೆ ಮಾಡಿ ಹಳಿ, ಸುರಂಗದಲ್ಲಿನ ಮಣ್ಣು, ಕಲ್ಲುಗಳನ್ನು ತೆರವು ಕಾರ್ಯಾಚರಣೆ ನಡೆಸಿದರು. ಇನ್ನು ಹಳಿ ತಪ್ಪಿದ್ದ ಎಂಜಿನ್‌ ಹಾಗೂ ಎರಡು ಬೋಗಿಗಳನ್ನು ಮರಳಿ ಹಳಿ ಮೇಲೆ ತರಲಾಗಿದೆ. ಈ ಹಳಿ ಇದೀಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಆದರೂ ಇನ್ನೆರಡ್ಮೂರು ದಿನ ಕಾಲ ಇಲ್ಲಿ 10 ಕಿಮೀ ಸ್ಪೀಡ್‌ನಲ್ಲೇ ರೈಲು ಸಂಚರಿಬೇಕೆಂದು ಸೂಚಿಸಲಾಗಿದೆ.

ವರುಣನ ಅಬ್ಬರಕ್ಕೆ ಭೂಕುಸಿತ: ಹಳಿ ತಪ್ಪಿದ ರೈಲು, ಪ್ರಯಾಣಿಕರ ಪರದಾಟ

ಪ್ರಯಾಣಿಕರು ಸುರಕ್ಷಿತ:

ಈ ನಡುವೆ ನಿಜಾಮುದ್ದೀನ್‌ - ವಾಸ್ಕೋಡಿಗಾಮಾ ರೈಲಿಗೆ ಬಂದಿದ್ದ 887 ಪ್ರಯಾಣಿಕರು ಲೋಂಡಾದಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಪ್ರಯಾಣದ ವೆಚ್ಚ ಮರುಪಾವತಿ ಮಾಡಿ ಬೆಳಗಾವಿಗೆ ಕಳುಹಿಸಲಾಗಿತ್ತು. ಕೆಲವರು ಬೆಳಗಾವಿಗೆ ತೆರಳಿದ್ದರೆ, ಕೆಲವರು ವೈಯಕ್ತಿಕ ಸಾರಿಗೆ ಮೂಲಕ ತಮ್ಮ ಸ್ಥಳಿಗಳಿಗೆ ತೆರಳಿದ್ದರು. ಇನ್ನು ಕೆಲವರು ಲೋಂಡಾ ನಿಲ್ದಾಣದಲ್ಲೇ ಉಳಿದಿದ್ದರು. ಇವರೊಂದಿಗೆ ಈ ನಿಲ್ದಾಣದಿಂದ ವಾಸ್ಕೋಡಿಗಾಮಾ- ನಿಜಾವುದ್ದೀನ್‌, ಕೊಲ್ಲಾಪುರ ತಿರುಪತಿ ಎಕ್ಸ್‌ಪ್ರೆಸ್‌ ರೈಲಿಗೆ ತೆರಳಲು ಬಂದು ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಸಿಲುಕಿದ್ದರು. ಒಟ್ಟು 107 ಪ್ರಯಾಣಿಕರು ನಿಲ್ದಾಣ¨ಲ್ಲಿ ಸಿಲುಕಿದ್ದರು. ಹುಬ್ಬಳ್ಳಿಗೆ ಬರಲು ಅಳ್ನಾವರ, ಲೋಂಡಾ ಮಧ್ಯೆ ಹಳಿ ಮೇಲೆ ನೀರು ಹರಿಯುತ್ತಿದ್ದರಿಂದ ಸಾಧ್ಯವಾಗಿರಲಿಲ್ಲ. ಇವರೆಲ್ಲರಿಗೂ ರಾತ್ರಿ ಊಟದ ವ್ಯವಸ್ಥೆಯನ್ನೂ ರೈಲ್ವೆ ಇಲಾಖೆಯೇ ಮಾಡಿತ್ತು. ಹಳಿ ಮೇಲಿನ ನೀರು ಇಳಿಮುಖವಾದ ಬಳಿಕ ಅಂದರೆ ಶನಿವಾರ ಬೆಳಗ್ಗೆ ಈ ಪ್ರಯಾಣಿಕರಿಗೆ ವಿಶೇಷ ರೈಲಿನ ಮೂಲಕ ಹುಬ್ಬಳ್ಳಿಗೆ ಕರೆತರಲಾಯಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ತಮ್ಮ ಊರುಗಳನ್ನು ತಲುಪಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿ ಅನೀಶ ಹೆಗಡೆ ತಿಳಿಸುತ್ತಾರೆ.

ರೈಲು ಸಂಚಾರ ರದ್ದು:

ಭೂಕುಸಿತದ ಕಾರಣದಿಂದಾಗಿ ಹುಬ್ಬಳ್ಳಿ- ದಾದರ ಎಕ್ಸ್‌ಪ್ರೆಸ್‌, ಯಶವಂತಪುರ- ವಾಸ್ಕೋ ಡಿಗಾಮಾ, ವಾಸ್ಕೋಡಿಗಾಮಾ- ನಿಜಾಮವುದ್ದೀನ ಎಕ್ಸ್‌ಪ್ರೆಸ್‌, ಮಿರಜ್‌- ಬೆಂಗಳೂರು, ವಾಸ್ಕೋ ಡಿಗಾಮಾ- ಕಾಚೆಗುಡಾ ಸೇರಿದಂತೆ ಏಳು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇನ್ನೂ 3 ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. 2 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.
 

Follow Us:
Download App:
  • android
  • ios