3 ತಿಂಗಳಿಂದ ನಡೆಸುತ್ತಿದ್ದ ಹೋರಾಟ ಕೈಬಿಟ್ಟ ಟೊಯೋಟಾ ಕಾರ್ಮಿಕರು
ಮುಷ್ಕರವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ ಟಿಕೆಎಂ ನೌಕರರ ಸಂಘ| ಬದಲಾದ ಸ್ವರೂಪದಲ್ಲಿ ಹೋರಾಟ ಮುಂದುವರರಿಕೆ| ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಮರಳಿದ 3,350 ನೌಕರರ ಪೈಕಿ ಬಹುತೇಕ ಸದಸ್ಯರು| ಕಳೆದ ಮೂರು ತಿಂಗಳಿಗೂ ಹೆಚ್ಚಿನ ಕಾಲ ಮುಷ್ಕರ ನಿರತರಾಗಿದ್ದ ನೌಕರರ ಕುಟುಂಬಗಳಿಗೆ ಆರ್ಥಿಕವಾಗಿ ತೊಂದರೆ|
ರಾಮನಗರ(ಮಾ.03): ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ನೌಕರರು ತಮ್ಮ ಮುಷ್ಕರವನ್ನು ಅಧಿಕೃತವಾಗಿ ಕೈಬಿಟ್ಟಿದ್ದಾರೆ ಎಂದು ಕಂಪನಿಯ ವಕ್ತಾರರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ ಟಿಕೆಎಂ ನೌಕರರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕರೆ ಬದಲಾದ ಸ್ವರೂಪದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟಿಕೆಎಂ ನೌಕರರ ಸಂಘವು ಮುಷ್ಕರವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ 3,350 ನೌಕರರ ಪೈಕಿ ಬಹುತೇಕ ಸದಸ್ಯರು ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಮರಳಿದ್ದಾರೆ. ಆದರೆ ಕಾರ್ಮಿಕರ ಸಂಘದ ಮುಷ್ಕರ ಇಂದು ಅಧಿಕೃತವಾಗಿ ಕೊನೆಗೊಂಡಿದೆ. ಎಲ್ಲ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಕರ್ನಾಟಕ ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ಟಿಕೆಎಂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಟೊಯೊಟಾ ಕಾರ್ಮಿಕರ ಪ್ರತಿಭಟನೆ: ಕವರ್ ಸ್ಟೋರಿಯಲ್ಲಿ ಬಯಲಾಯ್ತು ಎಕ್ಸ್‌ಕ್ಲೂಸಿವ್ ವಿಚಾರ
ಇದೇ ಮಾ. 5ರೊಳಗೆ ಕೆಲಸಕ್ಕೆ ಮರಳಬೇಕು ಮತ್ತು ಭವಿಷ್ಯದಲ್ಲಿ ಪರಸ್ಪರ ನಂಬಿಕೆಯ ಆಧಾರದ ಮೇಲೆ ಮತ್ತು ಪರಸ್ಪರ ತಿಳುವಳಿಕೆಯ ನಿಯಮಗಳನ್ನು ಗೌರವಿಸುವಂತೆ ಇತರ ಎಲ್ಲಾ ಸದಸ್ಯರಿಗೆ ಕಂಪನಿಯು ಅಂತಿಮ ಮನವಿಯನ್ನೂ ಸಹ ನೀಡಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಟಿಕೆಎಂ ಇತಿಹಾಸದುದ್ದಕ್ಕೂ, ಜನಸ್ನೇಹಿ ಸಂಸ್ಕೃತಿ ಮತ್ತು ಅಭಿವೃದ್ಧಿಯ ಬದ್ಧತೆಗೆ ಮನ್ನಣೆಯನ್ನು ನೀಡಿದೆ. ಈ ಮೌಲ್ಯವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಟಿಕೆಎಂ ಸಹಕಾರ, ವಿಶ್ವಾಸ, ಶಿಸ್ತು ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮೌಲ್ಯವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಲಿದೆ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳಿಗೂ ಹೆಚ್ಚಿನ ಕಾಲ ಮುಷ್ಕರ ನಿರತರಾಗಿದ್ದ ನೌಕರರ ಕುಟುಂಬಗಳಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಜೀವನ ನಿರ್ವಹಣೆಗೆ ತೊಂದರೆಯಾಗಿರುವುದರಿಂದ ಎಲ್ಲರೂ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಮೇನೇಜ್‌ಮೆಂಟ್ ವಿರುದ್ಧ ಸಂಘದ ಹೋರಾಟ ಬದಲಾದ ಸ್ವರೂಪದಲ್ಲಿ ಮುಂದುವರೆಯಲಿದೆ. ಉಪವಾಸ ಸತ್ಯಾಗ್ರಹ, ಧರಣಿ ಇತ್ಯಾದಿಗಳು ಮುಂದುವರೆಯಲಿದೆ. ರೊಟೇಷನ್ ಆಧಾರದಲ್ಲಿ ಕಾರ್ಮಿಕರು ಈ ಬದಲಾದ ಸ್ವರೂಪದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ವಿರುದ್ಧ ಟಿಕೆಎಂ ನೌಕರರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕೆರೆ ಅಸಮಾಧಾನ ಹೊರಹಾಕಿದ್ದಾರೆ. ಶಾಸಕರು ಯಾವ ಸಮಸ್ಯೆಯನ್ನು ಬಗೆಹರಿಸಿಲ್ಲ. ಹೋರಾಟ ಮುರಿಯಲು ಅವರು ಷಡ್ಯಂತ್ರ ರೂಪಿಸಿದ್ದಾರೆ. ಕಂಪನಿಯ ಹಣದ ಆಮೀಷಕ್ಕೆ ಅವರು ಒಳಗಾಗಿದ್ದಾರೆ ಎಂದು ಪ್ರಸನ್ನ ದೂರಿದ್ದಾರೆ. ಕಾರ್ಮಿಕ ಸಂಘದವರು ತಮ್ಮನ್ನು ಭೇಟಿಯಾಗಿದ್ದರು ಎಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಂಘದ ಪದಾಧಿಕಾರಿಗಳ್ಯಾರು ಅವರನ್ನು ಭೇಟಿಯಾಗಿಲ್ಲ. ಕಾರ್ಯಕಾರಿಣಿಯಲ್ಲಿ ಮೆನೇಜ್‌ಮೆಂಟ್ ಪರ ಇರುವ ಕೆಲವರನ್ನು ಶಾಸಕರು ಕರೆಸಿಕೊಂಡು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ನಾವ್ಯಾರು ಅವರನ್ನು ಭೇಟಿಯಾಗಿಲ್ಲ. ಅವರಿಂದ ನಮಗೂ ಯಾವ ಮಾಹಿತಿಯೂ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕ ಎ.ಮಂಜುನಾಥ್ ಅವರು ಕಾರ್ಮಿಕರ ಹೋರಾಟವನ್ನು ಮುರಿಯುವ ಷಡ್ಯಂತ್ರ ಮಾಡಿದ್ದಾರೆ, ಕಾರ್ಮಿಕ ವಿರೋಧಿಯಾಗಿ ಅವರು ನಡೆದುಕೊಂಡಿದ್ದಾರೆ ಎಂದು ಅವರು ಪುನಃ ದೂರಿದ್ದಾರೆ.