ಟೊಯೋಟಾ ಮತ್ತೊಮ್ಮೆ ಲಾಕ್‌ಔಟ್ : ಕರ್ತವ್ಯಕ್ಕೆ ಹಾಜರಾಗದ ಕಾರ್ಮಿಕರು
ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ ಆಡಳಿತ ಮಂಡಳಿ ಮತ್ತೊಮ್ಮೆ ಲಾಕ್‌ಔಟ್ ಘೋಷಣೆ ಮಾಡಿದೆ.
ರಾಮನಗರ (ನ.24): ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಮುಷ್ಕರ ಮುಂದುವರೆಸಿದ್ದು, ಕಂಪನಿಯಲ್ಲಿ ಉತ್ಪಾದನಾ ಚಟುವಟಿಕೆಗೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ ಆಡಳಿತ ಮಂಡಳಿ ಮತ್ತೊಮ್ಮೆ ಲಾಕ್‌ಔಟ್ ಘೋಷಣೆ ಮಾಡಿದೆ.
ಕಂಪನಿಯ 39 ನೌಕರರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಹಾಗೂ ಅಧಿಕ ಕಾರ್ಯಭಾರದ ಒತ್ತಡ ತಡೆಯುವಂತೆ ಒತ್ತಾಯಿಸಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ಕಾರ್ಮಿಕರು ನಡೆಸುತ್ತಿರುವ ಮುಷ್ಕರ 16ನೇ ದಿನಕ್ಕೆ ಕಾಲಿಟ್ಟಿದೆ. ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘದ ನಡುವೆ ಸಂಧಾನ ಸಭೆಯೂ ಮುರಿದು ಬಿದ್ದಿತ್ತು.
ಟೊಯೋಟ-ಕಿರ್ಲೋಸ್ಕರ್ ಬಿಕ್ಕಟ್ಟು; ಮುಷ್ಕರ ನಿಷೇಧ, ಲಾಕ್‌ಔಟ್ ತೆರವು ...
ಆದರೆ, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಆಡಳಿತ ಮಂಡಳಿ ಲಾಕ್‌ಔಟ್ ತೆರವುಗೊಳಿಸಿ ಕಂಪನಿ ಪುನಾರಂಭಗೊಂಡಿತ್ತು. ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಅವಕಾಶ ನೀಡುತ್ತಿಲ್ಲ. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಮುಷ್ಕರ ಮುಂದುವರೆಸಿದ್ದರು. ಸರ್ಕಾರದ ಸೂಚನೆಯಂತೆ ಕಂಪನಿ ಪುನಾರಂಭಗೊಂಡ ನಾಲ್ಕು ದಿನಗಳಲ್ಲಿ ಮೊದಲ ಪಾಳಿಯಲ್ಲಿ 1399 ಕಾರ್ಮಿಕರ ಪೈಕಿ 20ರಿಂದ 28 ಮಂದಿ, ಎರಡನೇ ಪಾಳಿಯಲ್ಲಿ 1538 ಪೈಕಿ 12ರಿಂದ 64 ಮಂದಿ ಹಾಜರಾದರೆ, ಜನರಲ್ ಶಿಫ್ಟ್‌ನಲ್ಲಿ 440 ಕಾರ್ಮಿಕರ ಪೈಕಿ 17ರಿಂದ 219 ಮಂದಿ ಮಾತ್ರ ಹಾಜರಾಗಿದ್ದಾರೆ.
ಕಂಪನಿಯಲ್ಲಿ ಉತ್ಪಾದನಾ ಚಟುವಟಿಕೆ ನಡೆಯಬೇಕಾದರೆ ಕನಿಷ್ಠ ಶೇಕಡ 90ರಷ್ಟುಕಾರ್ಮಿಕರು ಕೆಲಸದಲ್ಲಿ ತೊಡಗಬೇಕು. ಆದರೆ, ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಅಕ್ರಮವಾಗಿ ಮುಷ್ಕರದಲ್ಲಿ ತೊಡಗಿರುವ ಕಾರಣ ಕಂಪೆನಿಯ ಕಾನೂನು ಹಾಗೂ ಸೇವಾ ನಿಯಮಗಳಿಗೆ ಬದ್ಧರಾಗಿರುವುದಾಗಿ ಅಂಡರ್ ಟೇಕಿಂಗ್ ಒಪ್ಪಿ ಬರುವವರನ್ನು ಕೆಲಸಕ್ಕೆ ತೆಗೆದುಕೊಳ್ಳಲಿದೆ ಎಂದು ಕಂಪೆನಿ ಆಡಳಿತ ಮಂಡಳಿ ತಿಳಿಸಿದೆ.