Asianet Suvarna News Asianet Suvarna News

ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ, ಟೈಮ್ ಖರಾಬ್ ಇದ್ರೆ ಚಟ್ಟ

• ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ
• ಜಲಪಾತದ ತುತ್ತತುದಿ ಮೇಲೆ ನಿಂತು ಫೋಟೋಗೆ ಪೋಸ್
• ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಭೇಟಿ

tourists posed to selfie In danger Places at Gokak Water Falls rb
Author
Bengaluru, First Published Jul 10, 2022, 5:33 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಜುಲೈ.10)
: ಕಳೆದ ಹತ್ತು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕುಂಭ ದ್ರೋಣ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಸಪ್ತನದಿಗಳಲ್ಲಿಯೂ ಒಳಹರಿವು ಹೆಚ್ಚಳವಾಗಿದೆ.‌ 

ಬೆಳಗಾವಿ ಸುತ್ತಮುತ್ತ ಹಲವು ಜಲಪಾತಗಳಿದ್ದು ಎಲ್ಲಾ ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತಿವೆ. ಭಾರತದ ನಯಾಗರ ಜಲಪಾತ ಅಂತಾನೇ ಹೆಸರುವಾಸಿಯಾಗಿರುವ ಗೋಕಾಕ ಜಲಪಾತದಲ್ಲೂ ನಯನಮನೋಹರ ದೃಶ್ಯ ಸೃಷ್ಟಿಯಾಗಿದೆ. ಹೀಗಾಗಿ ಗೋಕಾಕ್ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ. ಮೈದುಂಬಿ ಧುಮ್ಮುಕ್ಕುವ ಗೋಕಾಕ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಬರುತ್ತಿರುವ ಪ್ರವಾಸಿಗರ ಹುಚ್ಚಾಟವ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. 

Belagavi: ನೋಡುಗರ ಕಣ್ಮನ ಸೆಳೆಯುತ್ತಿವೆ ನಯನಮನೋಹರ ಜಲಪಾತಗಳು

ಗೋಕಾಕ ಜಲಪಾತದಲ್ಲಿ ಕಲ್ಲು ಹಾಸಿಗೆ ಮೇಲಿಂದ 171 ಅಡಿ ಆಳಕ್ಕೆ ನೀರು ಧುಮ್ಮುಕ್ಕುತ್ತದೆ. ಇಲ್ಲಿ ಭೇಟಿ ನೀಡಿದ ಕೆಲ ಪ್ರವಾಸಿಗರು ಬಂಡೆಯ ಮೇಲೇರಿ ಜಲಪಾತದ ತುತ್ತತುದಿಗೆ ಹೋಗುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಫೋಟೋಗೆ ಪೋಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇಂದು ಭಾನುವಾರ ಹಿನ್ನೆಲೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು. ಈ ಹಿಂದೆ ಗೋಕಾಕ ಜಲಪಾತ ತುದಿಗೆ ಹೋಗಿ ಕಾಲು ಜಾರಿ ಬಿದ್ದು ಕೆಲ ಪ್ರವಾಸಿಗರು ಮೃತಪಟ್ಟ ಪ್ರಕರಣಗಳು ನಡೆದಿದ್ದವು. 

ಇತ್ತೀಚೆಗಷ್ಟೇ ಯುವಕನೋರ್ವ ಫಾಲ್ಸ್ ಬಳಿ ತೆರಳಲು ಹೋಗಿ ದೊಡ್ಡ ಬಂಡೆಗಳ ಮಧ್ಯೆ ಆಳದಲ್ಲಿ ಬಿದ್ದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದ. ಇಷ್ಟಾದರೂ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದರು‌. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ವಿಸ್ತೃತ ವರದಿ ಪ್ರಸಾರ ಆಗಿತ್ತು. ಗೋಕಾಕ್ ಜಲಪಾತ ಬಳಿ ಪ್ರವಾಸಿಗರ ಹುಚ್ಚಾಟದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ನಲ್ಲಿ ಬೆಳಗ್ಗೆ ವರದಿ ಪ್ರಸಾರ ಆಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಬಕ್ರೀದ್ ಹಿನ್ನೆಲೆ ಭದ್ರತೆ ಪರಿಶೀಲನೆಗೆ ಗೋಕಾಕ್‌ಗೆ ತೆರಳಿದ್ದ ಬೆಳಗಾವಿ ಎಸ್‌ಪಿ ಡಾ. ಸಂಜೀವ್ ಪಾಟೀಲ ಖುದ್ದು ಗೋಕಾಕ ಜಲಪಾತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.  ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಗೋಕಾಕ್ ಗ್ರಾಮೀಣ ಪೊಲೀಸರನ್ನು ಜಲಪಾತ ಬಳಿ ನಿಯೋಜಿಸಿದ್ದಾರೆ. ಜಲಪಾತ ಬಳಿ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಕ್ರೈಮ್ ಸೀನ್ ಟೇಪ್ ಕಟ್ಟಿದ್ದಾರೆ. ದೂರದಿಂದಲೇ ಜಲಪಾತ ವೀಕ್ಷಿಸುವಂತೆ ಪ್ರವಾಸಿಗರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. 

ಜವಾಬ್ದಾರಿಯುತವಾಗಿ ವರ್ತಿಸಲು ಪ್ರವಾಸಿಗರಲ್ಲಿ SP ಮನವಿ
tourists posed to selfie In danger Places at Gokak Water Falls rb

ಇನ್ನು ಗೋಕಾಕ ಜಲಪಾತಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‌ಪಿ ಸಂಜೀವ ಪಾಟೀಲ್, 'ಪ್ರವಾಸಿಗರು ಗೋಕಾಕ್ ಜಲಪಾತದ ತುತ್ತತುದಿಗೆ ಹೋಗದಂತೆ ‌ನಿಗಾ ವಹಿಸಲಾಗಿದೆ.‌ ಕ್ರೈಂಸೀನ್ ಟೇಪ್, ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಜಲಪಾತ ಸಮೀಪ ಹೋಗದಂತೆ ಕ್ರಮ ವಹಿಸಲಾಗಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಸುರಕ್ಷತೆ ಕ್ರಮ ವಹಿಸಲಾಗುವುದು ಎಂದರು.

ಕಬ್ಬಿಣದ ಗ್ರಿಲ್ ಹಾಕಿಸುವಂತೆ ಡಿಸಿಯವರ ಗಮನಕ್ಕೆ ತರಲಾಗಿದೆ. ಪ್ರವಾಸಿಗರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು‌. ಗೊಡಚಿನಮಲ್ಕಿ ಸೇರಿ ಇತರೆ ಜಲಪಾತಗಳಲ್ಲಿ ಭದ್ರತೆಯ ವರದಿಯನ್ನು ತರಸಿಕೊಳ್ಳುತ್ತೇನೆ. ಬೆಳಗಾವಿ ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದು, ಹಲವು ಪ್ರವಾಸಿ ತಾಣಗಳಿವೆ. ಪ್ರವಾಸಿಗರು, ಸ್ಥಳೀಯರು ಪೊಲೀಸರಿಗೆ ಸಹಕಾರ ನೀಡಬೇಕು‌. ಪ್ರಾಣಹಾನಿ ಆಗದಂತೆ ವರ್ತನೆ ಇರಬೇಕು. ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ಜೊತೆಗೂ ಸಮನ್ವಯ ಸಾಧಿಸುತ್ತೇವೆ' ಎಂದು ತಿಳಿಸಿದ್ದಾರೆ.

ಧಾರಾಕಾರ ಮಳೆ ಹಿನ್ನೆಲೆ ಪಶ್ಚಿಮ ಘಟ್ಟದಲ್ಲಿರುವ ಜಾಂಬೋಟಿ, ಕಣಕುಂಬಿ, ಭೀಮಗಡ, ನಾಗರಗಾಳಿ ವನ್ಯಧಾಮದಲ್ಲಿಯೂ ಮಳೆಯ ಪ್ರಮಾಣ ಹೆಚ್ಚಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೇ ಬೆಳಗಾವಿಯಲ್ಲೂ ಕಳೆದ ಹತ್ತು ದಿನಗಳಿಂದ ಮಳೆಯಾಗುತ್ತಿದೆ. ಇನ್ನು ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ ಮಳೆ ಮುಂದುವರಿದಿದ್ದು ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿವೆ. ಜಲಪಾತ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ತಮ್ಮ ಸುರಕ್ಷತೆಯಲ್ಲಿ ತಾವಿದ್ದು ಜವಾಬ್ದಾರಿಯುತದಿಂದ ವರ್ತಿಸಲಿ.‌ ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ‌.

Follow Us:
Download App:
  • android
  • ios