ಬಳ್ಳಾರಿ(ನ.15): ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರವ ವಿಶ್ವವಿಖ್ಯಾತ ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಆದರೆ, ಕೋವಿಡ್‌ ಒರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ದಿನಕ್ಕೆ ಬರೀ 2000 ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ತೀವ್ರ ನಿರಾಸೆಯಾಗಿದೆ. 

ಹಬ್ಬ ಹಾಗೂ ವೀಕೆಂಡ್‌ ಇರುವುದರಿಂದ ಹೆಚ್ಚಿನ‌ ಪ್ರವಾಸಿಗರು ಆಗಮನವಾದರೂ 2000 ಟಿಕೆಟ್ ಬಳಿಕ ಸಾಫ್ಟವೇರ್ ಸ್ಥಗಿತಗೊಂಡಿದೆ. ಕಲ್ಲಿನತೇರು, ವಿಜಯ ವಿಠ್ಠಲ, ಕಮಲ್‌ ಮಹಲ್, ಆನೆಲಾಯ ಸೇರಿ ಪ್ರಮುಖ ಸ್ಮಾರಕಗಳ ವೀಕ್ಷಣೆ ಇಲ್ಲದೇ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ.

ಹಂಪಿ ವೀಕ್ಷಣೆಗೆ ದಿನಕ್ಕೆ ಬರೀ 2000 ಜನರಿಗೆ ಟಿಕೆಟ್‌..!

ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ದಿನಕ್ಕೆ‌ ಬರೀ 2000 ಜನರಿಗೆ ಮಾತ್ರ ಟಿಕೆಟ್ ನೀಡುತ್ತಿದೆ. ಬೆಂಗಳೂರು ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳದಿಂದ ಆಗಮಿಸುವ ಪ್ರವಾಸಿಗರು ಪ್ರಮುಖ ಸ್ಮಾರಕಗಳ‌ ದರ್ಶನ ಇಲ್ಲದೇ ಮರಳುವಂತಾಗಿದೆ. ಲಾಕ್‌ಡೌನ್ ಸಡಿಲಿಕೆಯಾದರೂ ಭಾರತೀಯ ಪುರಾತತ್ವ ಇಲಾಖೆ ಟಿಕೆಟ್ ನೀಡಿಕೆ ನಿಯಮದಲ್ಲಿ ಸಡಿಲಿಕೆ ಮಾಡಿಲ್ಲ. ಇದರಿಂದ ಪ್ರವಾಸಿಗರು ನಿರಾಸೆ ಅನುಭವಿಸುವಂತಾಗಿದೆ. ದೂರದೂರಿಂದ ಬಂದವರು ಪ್ರಮುಖ ಸ್ಮಾರಕ ನೋಡಲಾಗದೇ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.