ಹೊಸ ವರುಷದ ಸ್ವಾಗತಕ್ಕೆ ವಿಶ್ವ ವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿರುವುದರಿಂದ ಹಂಪಿ ಸುತ್ತಮುತ್ತಲ ಹೋಟೆಲ್‌, ರೆಸಾರ್ಚ್‌ಗಳು ಫುಲ್‌ ರಶ್‌ ಆಗಿವೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಡಿ.31) : ಹೊಸ ವರುಷದ ಸ್ವಾಗತಕ್ಕೆ ವಿಶ್ವ ವಿಖ್ಯಾತ ಹಂಪಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿರುವುದರಿಂದ ಹಂಪಿ ಸುತ್ತಮುತ್ತಲ ಹೋಟೆಲ್‌, ರೆಸಾರ್ಚ್‌ಗಳು ಫುಲ್‌ ರಶ್‌ ಆಗಿವೆ. ಹಂಪಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಹೊಸ ವರ್ಷದ ಸ್ವಾಗತಕ್ಕೆ ಬರುತ್ತಿದ್ದು, ಈಗಾಗಲೇ ಡಿ. 27ರಿಂದ ಜ.2ರ ವರೆಗೆ ಹೊಸಪೇಟೆ, ಹಂಪಿ, ಕಮಲಾಪುರ ಸುತ್ತಮುತ್ತಲ ಹೋಟೆಲ್‌, ರೆಸಾರ್ಚ್‌ಗಳು ಬುಕ್‌ ಆಗಿವೆ.

ಹಂಪಿಗೆ ಪ್ರವಾಸಿಗರ ದಂಡು:

ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಕಳೆದ ಡಿ.25ರಿಂದ ಹಂಪಿಗೆ ದಿನ ನಿತ್ಯ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಬರುತ್ತಿದ್ದಾರೆ. ಹೊಸ ವರ್ಷಕ್ಕೆ 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.

Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ

ವೀಕೆಂಡ್‌ನಲ್ಲಿ ಹೊಸ ವರುಷ:

ಈ ಬಾರಿ ಹೊಸ ವರ್ಷ ವೀಕೆಂಡ್‌ನಲ್ಲೇ ಬರುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲೂ ಬೆಂಗಳೂರು, ಮೈಸೂರಿನಿಂದ ಟೆಕ್ಕಿಗಳು ಹಂಪಿಯತ್ತ ಮುಖ ಮಾಡಿದ್ದಾರೆ. ನಗರದ ಪ್ರಮುಖ ಹೋಟೆಲ್‌ಗಳ ರೂಮ್‌ಗಳು ಬುಕ್‌ ಆಗಿವೆ. ಮುಂಚಿತವಾಗಿ ಹೋಟೆಲ್‌ಗಳು ಬುಕ್‌ ಆಗಿರುವುದರಿಂದ ಹೋಟೆಲ್‌ಗಳಲ್ಲಿ ಪಾರ್ಟಿಗೆ ಭರದ ಸಿದ್ಧತೆಯೂ ನಡೆದಿದೆ.

ಹಂಪಿ, ದರೋಜಿ ಕರಡಿಧಾಮ, ವಾಜಪೇಯಿ ಜೂಲಾಜಿಕಲ್‌ ಪಾರ್ಕ್ ಸೇರಿದಂತೆ ತುಂಗಭದ್ರಾ ಜಲಾಶಯ, ಹುಲಿಗಿ, ಆನೆಗೊಂದಿಯ ಅಂಜನಾದ್ರಿ ಬೆಟ್ಟವೀಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ದಿಲ್ಲಿ, ಹರಿಯಾಣ, ಗುಜರಾತ, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಕುಟುಂಬ ಸಮೇತ ಹಂಪಿಗೆ ಬರುತ್ತಿದ್ದಾರೆ.

ಹಂಪಿಯಲ್ಲಿ ಡಿ.31ರ ಸೂರ್ಯಾಸ್ತಮಾನ ವೀಕ್ಷಣೆಯಿಂದ ಸೂರ್ಯೋದಯ ವೀಕ್ಷಣೆಯ ಪ್ಲಾನ್‌ನೊಂದಿಗೆ ಪ್ರವಾಸಿಗರ ದಂಡು ಬರುತ್ತಿದೆ. ಹಾಗಾಗಿ ಪೊಲೀಸರು ಕೂಡ ಈಗಾಗಲೇ ಟ್ರಾಫಿಕ್‌ ಜಾಮ್‌ ತಪ್ಪಿಸಲು ಪ್ಲಾನ್‌ ರೂಪಿಸಿದ್ದಾರೆ.

ಸ್ಮಾರಕಗಳ ವೀಕ್ಷಣೆ:

ವಿಜಯನಗರದ ರಾಜಧಾನಿ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅದರಲ್ಲೂ ಈ ತಾಣಗಳ ಎದುರು ಫೋಟೋಗಳನ್ನು ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಲ್ಲಿನತೇರು, ಕಮಲ ಮಹಲ್‌, ಮಹಾನವಮಿ ದಿಬ್ಬ, ಆನೆಲಾಯ ಸೇರಿದಂತೆ ವಿವಿಧ ಸ್ಮಾರಕಗಳ ಎದುರು ಸೆಲ್ಫಿ ತೆಗೆದುಕೊಂಡು ಪ್ರವಾಸಿಗರು ಹರಿಬಿಡುವುದು ಖಯಾಲಿ ಆಗಿದೆ.

ಹಂಪಿಯ ತುಂಗಭದ್ರಾ ನದಿಯ ಸುತ್ತ ಪೊಲೀಸರು ಹಾಗು ಹೋಂ ಗಾರ್ಡ್‌ಗಳು ಪಹರೆ ಕಾಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಪೊಲೀಸರು ಎಲ್ಲ ರೀತಿಯ ತಯಾರಿಯೂ ನಡೆಸಿದ್ದಾರೆ. ನದಿಯ ಆಳದಲ್ಲಿ ಈಜಲು ಇಳಿಯದಂತೆ ನಿಗಾ ವಹಿಸಲಾಗಿದೆ.

ಕೇಕ್‌ ಭರಾಟೆ:

ಹೊಸ ವರುಷದ ಸ್ವಾಗತಕ್ಕೆ ಕೇಕ್‌ಗಳ ಭರಾಟೆಯೂ ಜೋರಾಗಿ ನಡೆಯಲಿದೆ. ಕಮಲಾಪುರ, ಹೊಸಪೇಟೆಯ ಬೇಕರಿಗಳಲ್ಲಿ ಈಗಾಗಲೇ ಆರ್ಡರ್‌ಗಳನ್ನು ಕೊಡಲಾಗಿದೆ. ಹೋಟೆಲ್‌, ರೆಸಾರ್ಚ್‌ಗಳಲ್ಲಿ ಕೇಕ್‌ಗಳನ್ನು ಕತ್ತರಿಸುವ ಕಾರ್ಯ ನಡೆಯಲಿದೆ.

ಹಂಪಿ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಯುವಕರು

ಹಂಪಿಯಲ್ಲಿ ಹೊಸ ವರ್ಷದ ಆಚರಣೆಗೆ ಬಂದಿದ್ದೇವೆ. ಹಂಪಿ ಪ್ರವಾಸಿಗರ ಸ್ವರ್ಗವಾಗಿ ಪರಿಣಮಿಸುತ್ತಿದೆ. ಹಾಗಾಗಿ ಈ ವರ್ಷ ಈ ಕಡೆಗೆ ಬಂದಿದ್ದೇವೆ. ಸ್ಮಾರಕಗಳ ಬಳಿ ಫೋಟೋ ಕ್ಲಿಕ್ಕಿಸಿಕೊಂಡರೆ, ಅದಕ್ಕಿಂತಲೂ ದೊಡ್ಡ ಸ್ಮರಣಿಕೆ ಬೇರೊಂದಿಲ್ಲ.

ಸಾಗರಕುಮಾರ, ನವೀನ್‌ ಪ್ರವಾಸಿಗರು.