ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಫೆ.13): ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದು, ಪ್ರವಾಸಿಗರು ಮತ್ತೆ ಪರದಾಡುವಂತಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ವಾಣಿಜ್ಯ ಚಟುವಟಿಕೆ ಕುರಿತ ಪ್ರಕರಣ ವಿಚಾರಣೆ ಹಂತದಲ್ಲಿರುವ ಹಿನ್ನೆಲೆಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಂಪಿಯ ಜನತಾ ಪ್ಲಾಟ್‌ ಸೇರಿದಂತೆ ಬಸ್‌ ನಿಲ್ದಾಣ, ಪಾರ್ಕಿಂಗ್‌ ಸ್ಥಳಗಳಲ್ಲಿನ ವಾಣಿಜ್ಯ ಚಟುವಟಿಕೆಯನ್ನು ಶುಕ್ರ​ವಾ​ರ​ದಿಂದ ಸಂಪೂರ್ಣ ಬಂದ್‌ ಮಾಡಿಸಿದೆ. ಹೀಗಾಗಿ ಹಂಪಿಯ ಸ್ಮಾರಕಗಳ ಗುಚ್ಛ ವೀಕ್ಷಣೆ ಜತೆಗೆ ಜಾಲಿ ಮೂಡ್‌ನಲ್ಲಿ ಬಟ್ಟೆ, ಜ್ಯುವೇ​ಲ​ರಿ, ತರೇವಾರಿ ವಸ್ತುಗಳನ್ನು ಖರೀದಿಸುತ್ತಿದ್ದ ಪ್ರವಾಸಿಗರಿಗೆ ಈಗ ಬರೀ ಸ್ಮಾರಕಗಳನ್ನು ವೀಕ್ಷಿಸಿ ಮರಳುವಂತಾಗಿದೆ.

ವ್ಯಾಪಾರಕ್ಕೆ ಹೆಸರುವಾಸಿ:

ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಅರೇಬಿಯಾ, ಪರ್ಶಿಯಾ, ಚೀನಾದಿಂದಲೂ ಹಂಪಿಗೆ ವ್ಯಾಪಾರಕ್ಕೆ ಬಂದ ಕುರುಹುಗಳಿವೆ. ಹೀಗಾಗಿ ಹಂಪಿಯಲ್ಲಿ ಏನಾದರೂ ಖರೀದಿಸಬೇಕು ಎಂಬ ಮನೋಭಾವದೊಂದಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈಗ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹಂಪಿಯಲ್ಲಿನ ವಾಣಿಜ್ಯ ಚಟುವಟಿಕೆ ಬಂದ್‌ ಮಾಡಲಾಗಿದ್ದು, ಗೂಡಂಗಡಿ, ಬೀದಿಬದಿ ವ್ಯಾಪಾರಿಗಳು ಕೊರೋನಾ ಸಂಕಷ್ಟ ಕಾಲದಲ್ಲಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.

ಹಂಪಿ ಸ್ಮಾರಕಗಳ ಬಳಿ ಮತ್ತೆ ಡ್ರೋಣ್‌ ಕ್ಯಾಮೆರಾ ಹಾರಾಟ

ನೈಜ ಸ್ಥಿತಿ:

ಹಂಪಿಯನ್ನು ನೈಜ ಸ್ಥಿತಿಯಲ್ಲಿ ಕಾಪಾಡಬೇಕೆಂಬ ಯುನೆಸ್ಕೊ ಸಲಹೆ ಮೇರೆಗೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತಗಳು ಹಂಪಿಯ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿವೆ. ಆದರೆ, ಪ್ರವಾಸೋದ್ಯಮ ಬೆಳವಣಿಗೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೃಷ್ಟಿಯಾಗುವ ಉದ್ಯೋಗಕ್ಕೆ ಕೊಡಲಿಪೆಟ್ಟು ನೀಡಿದಂತಾಗಿದೆ ಎಂಬುದು ಪ್ರಜ್ಞಾವಂತರ ಅಂಬೋಣ.

ಬರೀ 72 ಮನೆಗಳಿಗೆ ಪರವಾನಗಿ:

ಹಂಪಿಯ ಜನತಾ ಪ್ಲಾಟ್‌ನಲ್ಲಿರುವ 72 ಮನೆಗಳ ಜನರು ಮಾತ್ರ ಹಂಪಿಯಲ್ಲಿನ ತಮ್ಮ ಮನೆಗಳಲ್ಲಿ ವಾಸ ಮಾಡಬಹುದು. ಆದರೆ, ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ವ್ಯಾಪಾರ-ವಹಿವಾಟಿಗಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದ ಜನ ಈಗ ಗಂಟುಮೂಟೆ ಕಟ್ಟುವಂತಾಗಿದೆ.

ಊಟ, ತಿಂಡಿಗೂ ಪರದಾಟ:

ಹಂಪಿಗೆ ಆಗಮಿಸುವ ಪ್ರವಾಸಿಗರು ಈಗ ಕುಡಿಯುವ ನೀರು, ಊಟ, ತಿಂಡಿಗೂ ಪರದಾಡುವಂತಾಗಿದೆ. ಹಂಪಿಯ ಪುರಂದರದಾಸರ ಆರಾಧನೆ ಮಹೋತ್ಸವದ ನಿಮಿತ್ತ ಪುರಂದರ ಮಂಟಪದ ಬಳಿ ಆಗಮಿಸಿದ್ದ ಜನ ವಿಠ್ಠಲ ದೇಗುಲದ ಬಳಿ ಕುಡಿಯುವ ನೀರು ದೊರೆಯದೇ ಪರದಾಡಿದ್ದಾರೆ. ಈಗ ಹಂಪಿಯ ರಥಬೀದಿ ಪ್ರದೇಶ, ಬಸ್‌ ನಿಲ್ದಾಣ, ಪಾರ್ಕಿಂಗ್‌ ಸ್ಥಳ ಸೇರಿದಂತೆ ಹಂಪಿಯಲ್ಲಿನ ಎಲ್ಲಾ ಗೂಡಂಗಡಿಗಳು ಬಂದ್‌ ಆಗಿರುವುದರಿಂದ ಊಟ, ತಿಂಡಿ, ಕುಡಿಯುವ ನೀರಿಗೂ ಪ್ರವಾಸಿಗರು ಪರದಾಡುವಂತಾಗಿದೆ.

ಹಂಪಿ ಶ್ರದ್ಧಾ ಕೇಂದ್ರದ ಜತೆಗೆ ಪ್ರವಾಸೋದ್ಯಮ ಕೇಂದ್ರ ಆಗಿರುವುದರಿಂದ ಲಾಕ್‌ಡೌನ್‌ ಬಳಿಕ ಮನೆಯಲ್ಲೂ ಕುಳಿತುಕೊಳ್ಳಲು ಆಗದೇ ದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಯತ್ತ ಧಾವಿಸುತ್ತಿದ್ದಾರೆ. ಹಂಪಿಯ ಚರಿತ್ರೆ ಹೇಳುತ್ತಾ, ಸಣ್ಣಪುಟ್ಟವ್ಯಾಪಾರ ಮಾಡಿಕೊಂಡು ಅದರಲ್ಲೇ ಬದುಕುಕಟ್ಟಿಕೊಂಡಿದ್ದ ಜನರಿಗೆ ಈಗ ಪ್ರಾಧಿಕಾರದ ಅಧಿಕಾರಿಗಳ ಆದೇಶದಿಂದ ಬರ ಸಿಡಿಲು ಬಡಿದಂತಾಗಿದೆ.

ರಥಬೀದಿಯಿಂದ ತೆರವು:

ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯ ಸಾಲುಮಂಟಪದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು 2009-10ರಲ್ಲಿ ತೆರವುಗೊಳಿಸಲಾಗಿದೆ. ಹೊಸ ಹಂಪಿ ಗ್ರಾಮದಲ್ಲಿ ಮನೆಗಳನ್ನು ಜನ ಕಟ್ಟಿಕೊಂಡು ಈಗ ವಾಸಮಾಡುತ್ತಿದ್ದಾರೆ. ಆದರೆ, ವಾಣಿಜ್ಯ ಚಟುವಟಿಕೆಗೆ ಜಾಗ ಗುರುತಿಸಿದ್ದರೂ ಇದುವರೆಗೆ ವ್ಯಾಪಾರ-ವಹಿವಾಟು ಇನ್ನೂ ನಡೆದಿಲ್ಲ. ಏತನ್ಮಧ್ಯೆ, ಜಿಲ್ಲಾಡಳಿತ ಅಂಗಡಿಗಳನ್ನು ಬಂದ್‌ ಮಾಡಿಸಿದೆ ಎಂಬುದು ಸ್ಥಳೀಯರ ಅಂಬೋಣವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ಸಹಜ ಸ್ಥಿತಿಯಲ್ಲಿ ಕಾಪಾಡಲು ಹೇಳಿದೆ. ಹೀಗಾಗಿ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಲೋಚಿಸಲಾಗಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರಭಾರ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದ್ದಾರೆ. 

ಹಂಪಿ ಒಂದು ಜೀವಂತ ಪರಂಪರೆಯಾಗಿದೆ. ಹಂಪಿಯ ಸ್ಮಾರಕಗಳನ್ನು ಉಳಿಸುವ ಜತೆಗೆ ತಲಾತಲಾಂತರದಿಂದ ಅಲ್ಲೇ ವಾಸವಾಗಿರುವ ಜನರನ್ನು ಉಳಿಸಬೇಕಿದೆ. ಹೂ, ಹಣ್ಣು, ಕಾಯಿ ಸೇರಿದಂತೆ ಸಣ್ಣಪುಟ್ಟವ್ಯಾಪಾರ ಮಾಡುವವರನ್ನು ಉಳಿಸಿ, ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಕಮಲಾಪುರದ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ಹೇಳಿದ್ದಾರೆ.