ಕೊರೋನ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಮಾಚ್‌ರ್‍ 31ರವರೆಗೆ ವಿದೇಶಿ ಪ್ರವಾಸಿ ಹಡಗುಗಳು ಮಂಗಳೂರು ಬಂದರು ಪ್ರವೇಶಿಸುವುದಕ್ಕೆ ಎನ್‌ಎಂಪಿಟಿ ಅನುಮತಿ ನಿರಾಕರಿಸಿದೆ. 

ಮಂಗಳೂರು(ಮಾ.08): ಕೊರೋನ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಮಾಚ್‌ರ್‍ 31ರವರೆಗೆ ವಿದೇಶಿ ಪ್ರವಾಸಿ ಹಡಗುಗಳು ಮಂಗಳೂರು ಬಂದರು ಪ್ರವೇಶಿಸುವುದಕ್ಕೆ ಎನ್‌ಎಂಪಿಟಿ ಅನುಮತಿ ನಿರಾಕರಿಸಿದೆ.

ಕೊರೋನಾ ವೈರಸ್‌ ದೇಶಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ವಿದೇಶಿ ಹಡಗುಗಳು ಭಾರತೀಯ ಬಂದರಿಗೆ ಬಾರದಂತೆ ತಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಆದೇಶ ಪಾಲನೆಗೆ ಎನ್‌ಎಂಪಿಟಿ ಮುಂದಾಗಿದೆ. ವಿದೇಶಿ ಐಶಾರಾಮಿ ಹಡಗು ‘ಎಂಎಸ್‌ಸಿ ಲಿರಿಕಾ’ ಶನಿವಾರ ನವಮಂಗಳೂರು ಬಂದರಿಗೆ ಆಗಮಿಸಬೇಕಿತ್ತು. ಆದರೆ ಸಂಬಂಧಪಟ್ಟಅಧಿಕಾರಿಗಳಿಗೆ ಎನ್‌ಎಂಪಿಟಿ ಈಗಾಗಲೇ ಸಂದೇಶ ರವಾನಿಸಿದ್ದರಿಂದ ವಿದೇಶಿ ಹಡಗು ಮಂಗಳೂರಿನತ್ತ ಆಗಮಿಸಿಲ್ಲ.

ಸಿಟಿ ಲೈಫ್‌ ಮೇಲೂ ಕೊರೋನಾ ಕರಿನೆರೆಳು

ಈ ಪ್ರವಾಸಿ ಋುತುಮಾನ ನವೆಂಬರ್‌ 4ರಂದು ಆರಂಭವಾಗಿದ್ದು, ಇದುವರೆಗೆ 13 ಪ್ರವಾಸಿ ಹಡಗುಗಳು ನವಮಂಗಳೂರು ಬಂದರಿಗೆ ಆಗಮಿಸಿದ್ದು, ಸಾವಿರಾರು ಪ್ರವಾಸಿಗರು ಮಂಗಳೂರು ನಗರ ವೀಕ್ಷಣೆ ಮಾಡಿದ್ದಾರೆ. ಕೊನೆಯದಾಗಿ ಫೆ.18ರಂದು ಕೋಸ್ಟಾವಿಕ್ಟೋರಿಯಾ ಎಂಬ ಹಡಗು 1,800 ಪ್ರಯಾಣಿಕರು ಮತ್ತು 800 ಸಿಬ್ಬಂದಿಗಳೊಂದಿಗೆ ಮಂಗಳೂರು ಬಂದರಿಗೆ ಬಂದಿತ್ತು.

ಭಾರತದಲ್ಲಿ ಮೊದಲ ಕೊರೋನ ವೈರಸ್‌ ಪ್ರಕರಣ ಪತ್ತೆಯಾದ ಬಳಿಕ ನವಮಂಗಳೂರು ಬಂದರಿಗೆ ಹಡಗಿನ ಮೂಲಕ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಸ್ಕ್ರೀನಿಂಗ್‌ ಪರೀಕ್ಷೆಗೆ ಒಳಪಡಿಸಿಯೇ ನಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿದೇಶಿ ಹಡಗುಗಳ ಬಂದರು ಪ್ರವೇಶವನ್ನೇ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಪರಿಸ್ಥಿತಿ ಎದುರಿಸಲು ಸನ್ನದ್ಧ

ಕೊರೋನಾ ಶಂಕಿತ ಪ್ರಕರಣಗಳು ಇತರ ಜಿಲ್ಲೆಗಳಲ್ಲಿ ಕಂಡುಬಂದರೂ ಮಂಗಳೂರಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಆದರೂ ಸಂಭಾವ್ಯ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧವಾಗಿದೆ. ನಗರದ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆಯನ್ನೂ ಮಾಡಿ ಸನ್ನದ್ಧವಾಗಿದೆ. ಕೊರೋನಾ ತಡೆಗಟ್ಟುವ ಮಾಸ್ಕ್‌ ಮತ್ತಿತರ ಸಾಮಗ್ರಿಗಳ ಕೊರತೆ ಇಲ್ಲ. ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ಪರೀಕ್ಷೆ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.