ಚಿಕ್ಕಮಗಳೂರು(ಜೂ.15): ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ಮೇಲೆ ಕವಿದಿದ್ದ ಕಾರ್ಮೋಡಗಳು 82 ದಿನಗಳ ಬಳಿಕ ಸರಿದಿವೆ. ಗಿರಿಪ್ರದೇಶದಲ್ಲಿ ಪ್ರವಾಸಿಗರ ಕಾರು ಬಾರು ಶುರುವಾಗಿದೆ. ಭಾನುವಾರ ಒಂದೇ ದಿನ ಗಿರಿಯಲ್ಲಿ ಪ್ರವಾಸಿಗರ 313 ಕಾರುಗಳು, 178 ಬೈಕುಗಳು, 4 ವ್ಯಾನ್‌ಗಳು ಓಡಾಡಿವೆ.

ಕೊರೋನಾ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಹೊಟೇಲ್‌, ಲಾಡ್ಜ್‌, ಹೋಂ ಸ್ಟೇ, ರೆಸಾರ್ಟ್‌ಗಳು ಮುಚ್ಚಲಾಗಿದ್ದವು. ದೇವಾಲಯಗಳಲ್ಲಿ ಪ್ರವೇಶ ನಿಷೇಧ ಮಾಡಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು.

ಲಾಕ್‌ ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಹೊಟೇಲ್‌, ಹೋಂ ಸ್ಟೇ, ರೆಸಾರ್ಟ್‌ಗಳು ಓಪನ್‌ ಆಗಿವೆ. ಜೂ.8ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರಿಂದಾಗಿ ದೇವಾಲಯಗಳ ಕೇಂದ್ರಿಕೃತ ಪ್ರವಾಸಿ ತಾಣಗಳಲ್ಲಿ ಮತ್ತೆ ಜನರ ಓಡಾಟ ಆರಂಭವಾಗಿದೆ. ಲಾಕ್‌ಡೌನ್‌ ಸಡಿಲಿಕೆಯ ನಂತರ ಇದೇ ಪ್ರಥಮ ಬಾರಿಗೆ ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರದಂದು ಜಿಲ್ಲೆಗೆ ಪ್ರವಾಸಿಗರು ಆಗಮಿಸಿ ಗಿರಿ ಪ್ರದೇಶಗಳಲ್ಲಿ ಎಂಜಾಯ್‌ ಮಾಡಿದರು.

ಅಚ್ಚುಮೆಚ್ಚು:

ಮುಂಗಾರು ಮಳೆಯ ಆರಂಭದಲ್ಲಿ ಗಿರಿಪ್ರದೇಶದಲ್ಲಿ ಓಡಾಡುವುದು ಹೆಚ್ಚು ಮಂದಿ ಪ್ರವಾಸಿಗರು ಇಷ್ಟಪಡುತ್ತಾರೆ. ಕಾರಣ, ಬೆಳ್ಳಂಬೆಳಿಗ್ಗೆ ಮೋಡಗಳು, ಬೆಟ್ಟಗಳನ್ನು ಆವರಿಸಿಕೊಂಡಿರುತ್ತವೆ. ಆಗಾಗ ತುಂತುರು ಮಳೆ, ಬಿಡುವು ಕೊಟ್ಟಾಗ ಕಣ್ಣ ಮುಂದೆ ಹಾದು ಹೋಗುವ ಮಂಜು. ಗಿರಿಯಲ್ಲಿ ನಿಂತು ಈ ಸೊಬಗನ್ನು ಅನುಭವಿಸಬೇಕು. ಈ ವಾತಾವರಣದಲ್ಲಿ ನಿಂತು ಹಲವು ಮಂದಿ ಎಂಜಾಯ್‌ ಮಾಡಿದ್ದಾರೆ. ಇಲ್ಲಿ ಮತ್ತೆ ಮತ್ತೆ ಬರಲು ಇಷ್ಟಪಡುತ್ತಾರೆ. ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದಂತೆ ಮುಂಗಾರು ಮಳೆ ಆರಂಭವಾಗಿದೆ. ಮಳೆಗಾಲದಲ್ಲಿ ಗಿರಿಯಲ್ಲಿ ಪ್ರವಾಸ ಮಾಡುವವರು ಬರಲು ಆರಂಭಿಸಿದ್ದಾರೆ. ಬಿಕೋ ಎನ್ನುತ್ತಿದ್ದ ಪ್ರವಾಸಿ ತಾಣಗಳಲ್ಲಿ ಮತ್ತೆ ಪ್ರವಾಸಿಗರು ಓಡಾಡುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ

ಸುಧಾರಿಸುತ್ತಿರುವ ಹೋಟೆಲ್‌ಗಳು

ಲಾಕ್‌ ಡೌನ್‌ನಿಂದ ಮುಚ್ಚಿದ್ದ ಹೋಟೆಲ್‌ಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿಧಾನಗತಿಯಲ್ಲಿ ವ್ಯಾಪಾರ ಶುರುವಾಗಿದೆ. ದಿನದಲ್ಲಿ 50 ರಿಂದ 60 ಸಾವಿರ ವ್ಯಾಪಾರವಾಗುತ್ತಿದ್ದ ಹೋಟೆಲ್‌ಗಳಲ್ಲಿ ಭಾನುವಾರ .10 ರಿಂದ .15 ಸಾವಿರ ಬಿಜಿನೆಸ್‌ ಆಗಿದೆ. ಅಂದರೆ, ಶೇ.40ರಷ್ಟುಮಾತ್ರ ವ್ಯಾಪಾರವಾಗಿದೆ.

ಇನ್ನು ಲಾಡ್ಜ್‌ಗಳು ಚೇತರಿಸಿಕೊಂಡಿಲ್ಲ. ಭಾನುವಾರದಂದು ಕೆಲವು ಲಾಡ್ಜ್‌ಗಳು ಪೂರ್ಣ ಪ್ರಮಾಣದಲ್ಲಿ ಖಾಲಿ ಖಾಲಿಯಾಗಿದ್ದರೆ, ಮತ್ತೆ ಕೆಲವು ಲಾಡ್ಜ್‌ಗಳ ರೂಂಗಳು ಶೇ.20 ರಷ್ಟುಭರ್ತಿಯಾಗಿದ್ದವು. ಹೋಂ ಸ್ಟೇಗಳಲ್ಲಿ ಬುಕ್ಕಿಂಗ್‌ ಆರಂಭಗೊಂಡಿದೆ. ಭಾನುವಾರ ಬಂದಿರುವ ಪ್ರವಾಸಿಗರಲ್ಲಿ ಹೆಚ್ಚಿನ ಮಂದಿ ಹೋಂ ಸ್ಟೇಯಲ್ಲಿ ತಂಗಿದ್ದರು. ಪ್ರವಾಸಿಗರನ್ನು ಕೇಂದ್ರೀಕೃತವಾಗಿರುವ ಹೋಟೆಲ್‌, ಲಾಡ್ಜ್‌, ಹೋಂ ಸ್ಟೇಗಳು ಸುಧರಿಸುತ್ತಿವೆ.

ಲಾಡ್‌ ಡೌನ್‌ ಘೋಷಣೆಯ ಮುನ್ನ ಶೃಂಗೇರಿ ಪೇಟೆಯಲ್ಲಿದ್ದ ವಾತಾವರಣ ಈಗಿಲ್ಲ, ಭಾನುವಾರದಂದು ಸುಮಾರು 500 ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೆಲವು ಹೊಟೇಲ್‌ಗಳು ತೆರೆದಿದ್ದರೂ ಜನರು ಇರಲಿಲ್ಲ, ಕೆಲವು ಹೊಟೇಲ್‌ಗಳು ಇನ್ನು ತೆರೆದುಕೊಂಡಿಲ್ಲ. ಪೇಟೆಯ ವಾತಾವರಣ ಬಿಕೋ ಎನ್ನುತ್ತಿವೆ.