ಗದಗ(ನ.18): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತರಾತುರಿಯಲ್ಲಿ ‘ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ’ದ ಘೋಷಣೆ ಮಾಡಿದ್ದಾರೆ. ಆದರೆ ಇದಕ್ಕೆ ಯಾವುದೇ ಗೊತ್ತು ಗುರಿಗಳಾಗಲಿ, ಸ್ಪಷ್ಟತೆಯಾಗಲಿ ಕಂಡುಬರುತ್ತಿಲ್ಲ. ಈ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನ ಘೋಷಿಸಿಲ್ಲ ಮತ್ತು ಬಿಡುಗಡೆ ಮಾಡಿಲ್ಲ ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀ ಹೇಳಿ​ದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿಗ​ಮ​ದ ಪ್ರಯೋಜನ ಯಾರಿಗೆ ? ಇದರ ಫಲಾನುಭವಿಗಳು ಯಾರು? ಎಂಬುದು ಸಂದಿಗ್ಧವಾಗಿದೆ. ಇತ್ತೀಚೆಗೆ ಚುನಾವಣೆಯ ಸಂದರ್ಭದಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದು ಗೊಲ್ಲ ಅಭಿವೃದ್ಧಿ ನಿಗಮವೊ? ಅಥವಾ ಕಾಡುಗೊಲ್ಲ ಅಭಿವೃದ್ಧಿ ನಿಗಮವೊ? ಎಂಬ ಸಂದೇಹ ಉಂಟಾಗಿ ಆ ಸಮುದಾಯದಲ್ಲಿ ಗೊಂದಲ ಮೂಡಿದೆ. ಅದೇ ರೀತಿ ಇದರ ಪ್ರಯೋಜನ ಯಾರಿಗೆ ? ಇದು ವೀರಶೈವರಿಗೊ? ಲಿಂಗಾಯತರಿಗೊ? ಅಥವಾ ವೀರಶೈವ -ಲಿಂಗಾಯತ ಎಂದು ಸ್ಪಷ್ಟವಾಗಿ ಪ್ರಮಾಣಪತ್ರ ಪಡೆದವರಿಗೊ? ಎಂಬುದು ತಿಳಿದಿಲ್ಲ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬಹಳಷ್ಟು ಲಿಂಗಾಯತರ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಲಿಂಗಾಯತ ಎಂದಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಪ್ರಯೋಜನ ಈ ಲಿಂಗಾಯತರಿಗೆ ದೊರೆಯಬಹುದೇ? ಎಂಬುದು ಸಂದೇಹಾಸ್ಪದ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಚಿಸಿದ ಈ ನಿಗಮ ಕುರಿತು ಸಾರ್ವಜನಿಕ ಚರ್ಚೆಯ ಅಗತ್ಯವಿದೆ ಎಂದಿದ್ದಾರೆ.

ಗದಗ ತೋಂಟದಾರ್ಯ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಈಗಾಗಲೇ ಅನೇಕ ನಿಗಮ-ಮಂಡಳಿ, ಅಕಾಡೆಮಿಗಳನ್ನು ಸರ್ಕಾರ ಸ್ಥಾಪಿಸಿದೆ. ಅನೇಕ ನಿಗಮ-ಮಂಡಳಿಗಳು ಅನುದಾನ ಕೊರತೆಯಿಂದ ನಲುಗುತ್ತಿವೆ. ಕೆಲ ನಿಗ​ಮ​ಗ​ಳು ಸರ್ಕಾರಕ್ಕೆ ಬಿಳೆಯಾನೆಯಂತಾಗಿವೆ. ಅವುಗಳ ನಿರ್ವಹಣೆಯೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ಅಭಿವೃದ್ಧಿ ನಿಗಮ ಲಿಂಗಾಯತರಿಗೆ ಎಷ್ಟು ಪ್ರಯೋಜನಕಾರಿಯಾದೀತು? ಎಂಬುದನ್ನು ಕಾದು ನೋಡಬೇಕಾಗಿದೆ ಎಂದಿದ್ದಾರೆ.

ಲಿಂಗಾಯತರು ಕರ್ನಾಟಕದಲ್ಲಿ ಬಹುಸಂಖ್ಯಾತ ಸಮುದಾಯವಾಗಿದ್ದು, ಅವರಿಗೆ ಹೆಚ್ಚಿನ ಮೀಸಲಾತಿಯ ಅವಶ್ಯಕತೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರ ಅಲ್ಲಿಯ ಬಹುಸಂಖ್ಯಾತ ಮರಾಠಾ ಸಮುದಾಯಕ್ಕೆ ಪ್ರತಿಶತ 16ರಷ್ಟು ಮೀಸಲಾತಿ ಘೋಷಿಸಿದಂತೆ ಲಿಂಗಾಯತರಿಗೆ ಮೀಸಲಾತಿ ಘೋಷಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.