ಬೆಂಗಳೂರು : ಬಿಸಿಲ ಬೇಗೆ, ಅಂತರ್ಜಲ ಕೊರತೆಗೆ ಟೊಮೆಟೋ ಇಳುವರಿ ಕುಸಿದಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ಹಿಂದೆ ಕೆ.ಜಿ. 10 - 15 ದರದಲ್ಲಿ ಮಾರಾಟವಾಗುತ್ತಿದ್ದ ಟೊಮೆಟೋ ಸದ್ಯ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 35 - 40 ನಿಗದಿಯಾಗಿದೆ.

ಚಿಲ್ಲರೆ ಮಾರಾಟಗಾರರು ಗುಣಮಟ್ಟ ಆಧರಿಸಿ ಕೆ.ಜಿ.ಗೆ 40 ರಿಂದ 60 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ಮದುವೆ ಸೀಸನ್ ಇರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ಟೊಮೆಟೋಗೆ ಭಾರಿ ಬೇಡಿಕೆ ಇದೆ. ಇದರೊಂದಿಗೆ ಇಳುವರಿ ನೆಲಕಚ್ಚಿ ಆವಕವೂ ತಗ್ಗಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಬೆಲೆ ಹೆಚ್ಚಿಸಿದ್ದಾರೆ. 

ಕಳೆದ ಮೂರು ತಿಂಗಳಲ್ಲಿ ಟೊಮೆಟೋ ಧಾರಣೆ ಮೂರು ಪಟ್ಟು ಹೆಚ್ಚಿದೆ. ಮಾರ್ಚ್ ಆರಂಭದಲ್ಲಿ 1 ಕೆ.ಜಿ ಟೊಮೆಟೋಗೆ ಸರಾಸರಿ 10 ಧಾರಣೆ ಇತ್ತು. ಮಾರ್ಚ್-ಏಪ್ರಿಲ್‌ನಲ್ಲಿ 20 ರಿಂದ  40 ಕ್ಕೆ ಏರಿಕೆಯಾಯಿತು. ಸದ್ಯ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಕೆ.ಜಿ. 35 ಕ್ಕೂ ಹೆಚ್ಚಿನ ಬೆಲೆ ಇದ್ದರೆ, ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ತುಮಕೂರು ಹಾಗೂ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬರುವ ಟೊಮೆಟೋದಲ್ಲಿ ಶೇ.70  ರಷ್ಟನ್ನು ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶಗಳಿಗೆ ವಹಿವಾಟು ಮಾಡಲಾಗುತ್ತಿದೆ. ತುಮಕೂರು, ಕೋಲಾರ, ಬೆಂಗಳೂರು ಎಪಿಎಂಸಿಗೆ ಬರುತ್ತಿದ್ದ ಟೊಮೆಟೋ ಪ್ರಮಾಣ ಕುಸಿದಿದೆ. ಜನವರಿಯಲ್ಲಿ ಚಳಿಗೆ ಇಳುವರಿ ಕುಸಿದು 70  ರವರೆಗೆ ಏರಿಕೆ ಕಂಡಿತ್ತು. ಇದೀಗ ಪುನಃ ಟೊಮೆಟೋ ಬೆಲೆ ಹೆಚ್ಚಳದಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಕೋಲಾರ-ಆವಕ ಪ್ರಮಾಣ ಇಳಿಕೆ: ಏಷ್ಯಾದ ಬೃಹತ್ ಮಾರುಕಟ್ಟೆ ಕೋಲಾರದ ಎಪಿಎಂಸಿಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಹೊರೆಯ ರಾಜ್ಯಗಳಿಂದ ಒಂದು ವರ್ಷದಲ್ಲಿ 4.5ರಿಂದ 5.5 ಲಕ್ಷ ಮೆಟ್ರಿಕ್ ಟನ್ ಟೊಮೆಟೋ ಬರುತ್ತದೆ. ಇದೀಗ ಶೇ.30 ರಷ್ಟು ಆವಕ ಕಡಿಮೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ 20  ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಿರೀಕ್ಷೆ ಇತ್ತು. ಸದ್ಯ 12 ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೋ ಬೆಳೆಯಲಾಗುತ್ತಿದೆ. ಕೋಲಾರ ಎಪಿಎಂಸಿಯಲ್ಲಿ 15 ಕೆ.ಜಿ. ತೂಕದ ಟೊಮೆಟೋ ಬಾಕ್ಸ್ 500 - 600 ಕ್ಕೆ ಮಾರಾಟವಾಗುತ್ತಿದೆ. 

ಮಾರುಕಟ್ಟೆಯಲ್ಲಿ ಒಂದು ಕೆ.ಜಿ. 30 - 40 ನಿಗದಿಯಾಗಿದೆ ಎಂದು ಕೋಲಾರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು. ಕಳೆದ ಒಂದೂವರೆ ವರ್ಷದಿಂದ ಟೊಮೆಟೋ ಬೆಳೆಗಾರರು ನಷ್ಟ ಅನುಭವಿಸಿದ್ದರು. ಕೆ.ಜಿ.ಗೆ 5 ರಿಂದ 8 ರವರೆಗೆ ಮಾರಾಟಗೊಂಡಿತ್ತು. 2017 ರಲ್ಲಿ ಸಾಧಾರಣ ಮಳೆಯಾದ್ದರಿಂದ ಅಧಿಕ ರೈತರು ಟೊಮೆಟೋ ಬೆಳೆದರು. 2018 ರಲ್ಲಿ ಮಳೆ, ಬರ ಹಾಗೂ ಅಂತರ್ಜಲ ಕೊರತೆಯಿಂದ ಬಿತ್ತನೆಗೆ ರೈತರು ಮುಂದಾಗಲಿಲ್ಲ. 

ಈಗ ಕೋಲಾರದಲ್ಲಿ ಮಳೆ ಬಿದ್ದಿರುವುದರಿಂದ ರೈತರು ಬಿತ್ತನೆ ಮಾಡಿದ್ದಾರೆ. ಹೊಸ ಬೆಳೆ ಬರುವವರೆಗೂ ದರ ಹೆಚ್ಚಿರಲಿದೆ. ರೈತರು ಧಾರಣೆ ಏರಿಕೆ ದಾಖಲಿಸಿದ್ದನ್ನು ಕಂಡು ಲಾಭದ ನಿರೀಕ್ಷೆಯಲ್ಲಿ ಬಿತ್ತನೆ ಮಾಡಬಾರದು. ಪರ್ಯಾಯ ಬೆಳೆಗಳನ್ನು ಬೆಳೆಯುವಲ್ಲಿ ಆಸಕ್ತಿ ತೋರಬೇಕು ಎನ್ನುತಾರೆ ಕೃಷ್ಣಮೂರ್ತಿ. 

ಬೆಂಗಳೂರು ನಗರ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 20 - 22 ಕೆ.ಜಿ. ತೂಕದ ಬಾಕ್ಸ್ 700 - 900  ನಿಗದಿಯಾಗಿದೆ. ನಾಸಿಕ್‌ನಿಂದ ಬರುತ್ತಿ ರುವ ಟೊಮೆಟೋ ಗುಣಮಟ್ಟವೂ ಉತ್ತಮವಾಗಿಲ್ಲ. ಸ್ಥಳೀಯವಾಗಿ ಬರುತ್ತಿದ್ದ ಟೊಮೆಟೋ ಪ್ರಮಾಣ ಶೇ.40 ರಷ್ಟು ಇಳಿಕೆಯಾಗಿದೆ. ಎಪಿಎಂಸಿಗೆ ಕೋ ಲಾರ, ಚಿಂತಾಮಣಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾ ಪುರ, ಮಾಲೂರು, ಮಾಗಡಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ಪ್ರದೇಶಗಳಿಂದ ಟೊಮೆಟೋ ಬರು ತ್ತದೆ. ಹೆಚ್ಚಿನ ಮಳೆ ಪರಿಣಾಮ ಬೆಳೆ ನೆಲಕಚ್ಚಿದ್ದರೆ, ಕೆಲವೆಡೆ ನೀರಿನ ಅಭಾವದಿಂದ ಬೆಳೆ ಹಾಳಾಗಿದೆ ಎಂದು ಎಪಿಎಂಸಿ ಮಾರುಕಟ್ಟೆಯ ಚಂದ್ರಶೇಖರ್ ಮಾಹಿತಿ ನೀಡಿದರು.