Asianet Suvarna News Asianet Suvarna News

Kolar ನಾಟಿ ಟೊಮೆಟೋ ಬೆಲೆ ಭಾರೀ ಜಿಗಿತ! ಐತಿಹಾಸಿಕ ಬಂಪರ್

  • ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎನಿಸಿಕೊಂಡಿರುವ ಕೋಲಾರ ಎಪಿಎಂಸಿ
  • ಕೋಲಾರ ಎಪಿಎಂಸಿಯಲ್ಲಿ ಟೊಮೆಟೋಗೆ ಐತಿಹಾಸಿಕ ಬಂಪರ್‌ ಬೆಲೆ ಬಂದಿದೆ
Tomato prices rise in kolar Market Due To  heavy rain snr
Author
Bengaluru, First Published Nov 21, 2021, 7:08 AM IST

 ಕೋಲಾರ (ನ.21): ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ (Tomato Market) ಎನಿಸಿಕೊಂಡಿರುವ ಕೋಲಾರ (Kolar APMC) ಎಪಿಎಂಸಿಯಲ್ಲಿ ಟೊಮೆಟೋಗೆ ಐತಿಹಾಸಿಕ ಬಂಪರ್‌ ಬೆಲೆ (Bumper Price) ಬಂದಿದೆ. ಶನಿವಾರ 1 ಕೇಜಿ ಟೊಮೆಟೋ (Tomato)  125 ರು.ಕ್ಕೆ ಮಾರಾಟವಾಗುವ ಮೂಲಕ ದಾಖಲೆ (Record) ಸೃಷ್ಟಿಸಿದೆ.ನಾಟಿ, ಸೀಡ್ಸ್‌ ತಳಿಯ ಟೊಮೆಟೋಗೆ ಉತ್ತಮ ಬೆಲೆ ಬಂದಿದೆ. 15 ಕೇಜಿಯ ಒಂದು ಬಾಕ್ಸ್‌ (Box) ಟೊಮೆಟೋ 1900ಕ್ಕೆ ಮಾರಾಟವಾಗಿದೆ. ಈ ತಳಿಯ ಟೊಮೆಟೋವನ್ನು 1 ವಾರ ಕೆಡದಂತೆ ಇಡಬಹುದು. ಅಲ್ಲದೆ ಬಹು ದೂರದವರೆಗೂ ಸಾಗಿಸಬಹುದು. ಇನ್ನು ಸಾಮಾನ್ಯ ಟೊಮೆಟೋ ಕೇಜಿಗೆ ಎಪಿಎಂಸಿಯಲ್ಲಿ ಕೇಜಿಗೆ 46 ರು.ನಂತೆ ಮಾರಾಟವಾಗುತ್ತಿವೆ. ಅಂಗಡಿಗಳಲ್ಲಿ .80ರಿಂದ 120 ರು. ಗೆ ಮಾರಲಾಗುತ್ತಿದೆ.

ಇಲ್ಲಿನ ಎಪಿಎಂಸಿಯಲ್ಲಿ (APMC)  ಮಾರಾಟವಾಗುತ್ತಿರುವ ಬೆಲೆ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ. ಬಂಗಾಳ ಕೊಲ್ಲಿಯಲ್ಲಿ (Bea Of Bengali) ವಾಯುಭಾರ ಕುಸಿತದಿಂದ ತಮಿಳು ನಾಡು (Tamilnadu) ಮತ್ತು ಆಂಧ್ರಪ್ರದೇಶ (andhra pradesh) ಹಾಗೂ ಕರ್ನಾಟಕದಲ್ಲಿ (Karnataka) ಮಳೆ ಸುರಿಯುತ್ತಿದೆ. ಇದರಿಂದ ಟೊಮೆಟೋ ಬೆಳೆಗೆ ಹಾನಿಯಾಗಿದೆ.

ಜೂನ್‌-ಜುಲೈನಲ್ಲಿ ಮಾರುಕಟ್ಟೆಗೆ ನಿತ್ಯ 18 ಸಾವಿರ ಕ್ವಿಂಟಾಲ್‌ ಟೊಮೆಟೋ ಬರುತ್ತಿತ್ತು. ಈ ವರ್ಷ ಕೇಸಿ ವ್ಯಾಲಿಯಿಂದ (KC Vally) ಕೆರೆಗಳು ತುಂಬಿದ್ದು, ಅಂತರ್ಜಲ ವೃದ್ಧಿಯಾಗಿ ಹೆಚ್ಚಿನ ರೈತರು ಟೊಮೆಟೋ ಬೆಳೆದಿದ್ದರಿಂದ ಪ್ರತಿದಿನ 34 ಸಾವಿರ ಕ್ವಿಂಟಾಲ್‌ ತರಲಾಗುತ್ತಿತ್ತು. ಆದರೆ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲ ಕಚ್ಚಿದ್ದು, ಕೇವಲ 4 ಸಾವಿರ ಟನ್‌ ಬರುತ್ತಿದೆ.

ಬೆಳೆ ಸಮೀಕ್ಷೆ ಮುಗಿದೊಡನೆ ಪರಿಹಾರ :  ಅಕಾಲಿಕ ಮಳೆಯಿಂದಾಗಿ(Untimely Rain ) ಬೆಳೆ ಕಳೆದುಕೊಂಡಿರುವ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ನಿಮ್ಮೊಂದಿಗೆ ಸರ್ಕಾರ ಸದಾ ಇರುತ್ತದೆ. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಕ್ಷಣ ವರದಿ ನೀಡುವಂತೆ ಸೂಚಿಸಿದ್ದೇನೆ. ಸಮೀಕ್ಷೆ ಮಾಡಿದ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌(BC Patil) ಹೇಳಿದ್ದಾರೆ. 

ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾದ ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಹೊಲಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಈಗಾಗಲೇ ಅಧಿಕಾರಿಗಳು ಹಾನಿ ಸಮೀಕ್ಷೆ(Survey) ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ (Karnataka) ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಈ ತಿಂಗಳಲ್ಲೇ ಸುಮಾರು 3.63 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದರು.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಹಾವೇರಿ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಭತ್ತ, ಮೆಕ್ಕೆಜೋಳ, ಬಾಳೆ ಬೆಳೆ ಅಪಾರ ಹಾನಿಯಾಗಿದೆ. ಜುಲೈನಿಂದ 10 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇನ್ನೂ ಮೂರು ದಿನದೊಳಗೆ ಬೆಳೆ ಹಾನಿ ವರದಿ ಬರಲಿದೆ. ವರದಿ ಬಂದ ಬಳಿಕ ಎನ್‌ಡಿಆರ್‌ಎಫ್‌(NDRF) ಅನುದಾನದಲ್ಲಿ ಪರಿಹಾರ(Compensation) ಬಿಡುಗಡೆ ಮಾಡುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಪರಿಹಾರ ಕೊಡಲಾಗುವುದು ಎಂದು ಕೃಷಿ ಸಚಿವ ಹೇಳಿದರು.

ಮಳೆಹಾನಿ ಪರಿಹಾರಕ್ಕೆ 130 ಕೋಟಿ ಬಿಡುಗಡೆ: ಅಶೋಕ್‌

ರಾಜ್ಯದ ಹಲವೆಡೆ ನಿರಂತರ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶದಲ್ಲಿ ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲು 130 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌(R Ashok) ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾಹ ಪೀಡಿತ ಸ್ಥಳಗಳಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿ ಪರಿಹಾರದ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಚುನಾವಣಾ ನೀತಿ ಸಂಹಿತೆಯಿಂದ ನಾವು ಸ್ಥಳ ಪರಿಶೀಲನೆಗೆ ಹೋಗಲಾಗುವುದಿಲ್ಲ. ಹೀಗಾಗಿ ಶಾಸಕರು, ಸಚಿವರನ್ನು ಕರೆದುಕೊಂಡು ಹೋಗದೆ ಅಧಿಕಾರಿಗಳ ತಂಡ ಹೋಗಿ ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅಗತ್ಯ ಇರುವ ಕಡೆ ತುರ್ತು ಪರಿಹಾರ ಕೈಗೊಳ್ಳಬೇಕು. ಮಳೆಯಿಂದಾಗಿ ಮನೆ ಬಿದ್ದಿದ್ದೆರ ತಕ್ಷಣ 10 ಸಾವಿರ ರು. ಪರಿಹಾರ ಬಿಡುಗಡೆ ಮಾಡಲು ಸೂಚಿಸಿದ್ದೇನೆ. ಎಲ್ಲಿಯೂ ಪರಿಹಾರ ಕಾರ್ಯ ವಿಳಂಬವಾಗುತ್ತಿಲ್ಲ. ಈಗಾಗಲೇ ಜಿಲ್ಲೆಗಳನ್ನು ಗುರುತಿಸಲಾಗಿದೆ. ರೈತರ ಖಾತೆಗೆ ಪರಿಹಾರದ ಹಣ ಹೋಗುತ್ತದೆ. ಯಾವ ಬೆಳೆಗೆ ಎಷ್ಟುಪರಿಹಾರ ಎಂಬುದರ ಬಗ್ಗೆ ಈಗಾಗಲೇ ಬೆಲೆ ನಿಗದಿಯಾಗಿದೆ. ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು.

ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌(SDRF) ಅಡಿ ಹಣ ಬಿಡುಗಡೆ ಮಾಡಲಾಗುವುದು. ಎನ್‌ಡಿಆರ್‌ಎಫ್‌ನಿಂದ 13,519 ಕೋಟಿ ರು., ಎಸ್‌ಡಿಆರ್‌ಎಫ್‌ ಅಡಿ 2,922 ಕೋಟಿ ರು. ಬಿಡುಗಡೆಯಾಗಿದೆ. 1,51,429 ರೈತರಿಗೆ(Farmers) ಇನ್‌ಪುಟ್‌ ಸಬ್ಸಿಡಿ ನೀಡಲಾಗಿದೆ. ಅಕಾಲಿಕ ಮಳೆಯಿಂದಾಗಿ ರಾಜ್ಯದ ನಾನಾ ಕಡೆ ಅಪಾರ ಪ್ರಮಾಣದ ನಷ್ಟಉಂಟಾಗಿದೆ. ಮಳೆ ಹಾನಿ, ಬೆಳೆ ನಷ್ಟದ ಬಗ್ಗೆ ಸಮೀಕ್ಷೆಯಾಗುತ್ತಿದೆ. ಸಮೀಕ್ಷೆಯ ವರದಿ ಬಂದ ಬಳಿಕ ಕೇಂದ್ರಕ್ಕೆ ಮನವಿ ಮನವಿ ಮಾಡುತ್ತೇವೆ. ಪರಿಹಾರದ ನೆರವು ಬಗ್ಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಹಳೆ ಮೈಸೂರು ಬಾಗದಲ್ಲಿ ರಾಗಿ ಹಾನಿಯಾಗಿದ್ದು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಹಾಸನ, ಮೈಸೂರು, ಮಂಡ್ಯದಲ್ಲಿ ರಾಗಿಗೆ ಹೆಚ್ಚು ಹಾನಿಯಾಗಿದೆ ಎಂದು ಇದೇ ವೇಳೆ ತಿಳಿಸಿದರು.

Follow Us:
Download App:
  • android
  • ios