Asianet Suvarna News Asianet Suvarna News

ಟೊಮ್ಯಾಟೊ ಬೆಲೆ ಕುಸಿತ, ಬೇಸತ್ತು ರಸ್ತೆಗೆ ಸುರಿದ ಕೋಟೆನಾಡಿನ ಅನ್ನದಾತ

ನೂರಾರು ಕನಸುಗಳನ್ನು ಹೊತ್ತು ಸಾಲ ಸೂಲ‌ ಮಾಡಿ ಹಾಕಿದ ಬೆಳೆಗೆ ಮಾರುಕಟ್ಟೆಯಲ್ಲಿಯೂ ಬೆಲೆ‌ ಸಿಗ್ತಿಲ್ಲ. ಹಾಕಿದ ಬಂಡವಾಳವೂ ಸಿಗದೇ ಟೊಮ್ಯಾಟೊ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕ್ತಿದ್ದಾನೆ ಕೋಟೆನಾಡಿನ ಅನ್ನದಾತ.

tomato price fall chitradurga farmers dump tomatoes on roads gow
Author
Bengaluru, First Published Aug 7, 2022, 5:35 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಆ.7): ನೂರಾರು ಕನಸುಗಳನ್ನು ಹೊತ್ತು ಸಾಲ ಸೂಲ‌ ಮಾಡಿ ಹಾಕಿದ ಬೆಳೆಗೆ ಮಾರುಕಟ್ಟೆಯಲ್ಲಿಯೂ ಬೆಲೆ‌ ಸಿಗ್ತಿಲ್ಲ. ಹಾಕಿದ ಬಂಡವಾಳವೂ ಸಿಗದೇ ಟೊಮ್ಯಾಟೊ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕ್ತಿದ್ದಾನೆ ಕೋಟೆನಾಡಿನ ಅನ್ನದಾತ. ಕಷ್ಟಪಟ್ಟು ಸಾಲ ಸೂಲ ಮಾಡಿ ಬೆಳೆದಿದ್ದ ಟೊಮ್ಯಾಟೊ ಬೆಳೆಯನ್ನು ಹೆದ್ದಾರಿಗೆ ಸುರಿದಿರೋ ಅನ್ನದಾತ. ಮತ್ತೊಂದೆಡೆ ಹಾಕಿರೋ ಬಂಡಾವಳ ಕೂಡ ಸಿಗ್ತಿಲ್ಲವಲ್ಲ ಎಂದು ಬೇಸರದಿಂದ ಮೇಕೆ, ಕುರಿಗಳಿಗೆ ತಿನ್ನಲು ಬಿಟ್ಟಿರೋ ರೈತ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲೂಕಿನ ಚಿಕ್ಕಮ್ಮನಹಳ್ಳಿ, ಕೆಳಗಳಹಟ್ಟಿ ಗ್ರಾಮದ ಬಳಿ. ಕಳೆದ ಒಂದು ವಾರದಿಂದಲೂ ಟೊಮ್ಯಾಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ. ಜಮೀನಿನಲ್ಲಿ ಹಾಕಿದ ಬೆಳೆಯನ್ನು ಮಾರುಕಟ್ಟೆಗೆ ಮಾರಲು ತೆಗೆದುಕೊಂಡು ಹೋದ್ರೆ, ಅಲ್ಲಿ ಒಂದು ಬಾಕ್ಸ್ ಕೇವಲ 10-20 ರೂ ಗಳನ್ನು ಕೇಳ್ತಿರೋದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ಇದ್ರಿಂದಾಗಿ ಎಷ್ಟೋ ಆಸೆಗಳನ್ನು ಕಟ್ಟಿಕೊಂಡು, ಸಾಲ ಸೂಲ ಮಾಡಿ ಬೆಳೆದಿದ್ದ ಬೆಳೆಗೆ ಸೂಕ್ತ ಬೆಲೆ ಸಿಗ್ತಿಲ್ಲವಲ್ಲ ಎಂಬ ಬೇಸರದಿಂದ ಮನನೊಂದು ರಸ್ತೆಗಳಿಗೆ ಟೊಮ್ಯಾಟೊ ರಾಶಿ ರಾಶಿ ಸುರಿಯುತ್ತಿದ್ದಾರೆ.

ಇನ್ನೂ ಜಿಲ್ಲೆಯ ಅನ್ನದಾತರಿಗೆ ಇಷ್ಟೆಲ್ಲಾ ಅನಾನುಕೂಲ ಆಗ್ತಿದ್ರು ಯಾವೊಬ್ಬ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅವರ ಕಷ್ಟ ಕೇಳದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 5 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯೋದಕ್ಕೆ 8 ಲಕ್ಷ ಹಣ ಖರ್ಚು ಮಾಡಿದ್ದೀವಿ. ಬ್ಯಾಂಕ್ ಗಳಲ್ಲಿ ಸಾಲ ಸೂಲ ಮಾಡಿ ಹಣ ತಂದು ಜಮೀನಿನಲ್ಲಿ ಬೆಳೆ ಬೆಳೆಯೋದಕ್ಕೆ ಹಾಕಿದ್ದೀವಿ ಆದ್ರೆ ಟೊಮ್ಯಾಟೊ ಬೆಲೆ ಕುಸಿತದಿಂದ ರೈತರಿಗೆ ತುಂಬಾ ಸಂಕಷ್ಟ ಎದುರಾಗಿದೆ. ಕೂಲಿ ಕೆಲಸಕ್ಕೆ ಬರುವ ರೈತರಿಗೆ ಕೊಡುವಷ್ಟು ಟೊಮ್ಯಾಟೊ ಬೆಳೆಗೆ ಬೆಲೆ ಸಿಗ್ತಿಲ್ಲ. ಇನ್ನೂ ಮಾನ್ಯ ಘನವೆತ್ತ ಕೃಷಿ ಸಚಿವರು ಚಿತ್ರದುರ್ಗ ಉಸ್ತುವಾರಿ ಸಚಿವರೇ ಆಗಿದ್ರು ಯಾವುದೇ ಪ್ರಯೋಜನವಿಲ್ಲ ಎಂತಾರೆ ರೈತರು.

Koppal: ಟೊಮೆಟೊ ಬೆಲೆ ಕುಸಿತ: ರಸ್ತೆಗೆ ಸುರಿದು ರೈತರ ಆಕ್ರೋಶ

ಜೊತೆಗೆ ಇದೇ ರೀತಿ ಅನ್ನದಾತನನ್ನು ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಯಾರೂ ಕೂಡ ಜಮೀನಿನಲ್ಲಿ ಉಳುಮೆ ಮಾಡೋದಕ್ಕೆ ಮುಂದೆ ಬರಲ್ಲ. ಆದ್ದರಿಂದ ಕೂಡಲೇ ಸರ್ಕಾರ ರೈತರಿಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕಿದೆ. ಇದರೊಂದಿಗೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿದ್ರೆ ಈ ರೀತಿ ಯಾವುದೇ ಸಮಸ್ಯೆ ಎದುರಾಗಲ್ಲ ಎಂದು ತಮ್ಮ ಅಳಲು ಹೇಳಿಕೊಂಡರು.

ಬೆಲೆ ಕುಸಿತ, ರಸ್ತೆಗೆ ಟೊಮೆಟೊ ಸುರುವಿ ಪ್ರತಿಭಟಿಸಿದ ಬೆಳೆಗಾರರು

ಒಟ್ನಲ್ಲಿ ಯಾವುದಾದ್ರು ಒಂದು ಬೆಳೆ ಹಾಕಿ ಇರೋ ಜಮೀನಲ್ಲಿ ಅಲ್ಪ ಸ್ವಲ್ಪ ಲಾಭ ಪಡೆಯೋಣ ಅಂತ ರೈತರು ಕನಸು ಕಾಣ್ತಿದ್ರೆ. ಇತ್ತ ಸರ್ಕಾರಗಳು ಅನ್ನದಾತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸದೇ ಅವರನ್ನು ನಿರ್ಲಕ್ಷ್ಯ ಮಾಡ್ತಿರೋದು ಖಂಡನೀಯ. ಆದ್ದರಿಂದ ಕೂಡಲೇ ಮಾನ್ಯ ಕೃಷಿ ಸಚಿವರೇ ಸ್ವಲ್ಪ ನೋಡಿ ಸ್ವಾಮಿ ನಿಮ್ಮದೇ ಉಸ್ತುವಾರಿ ಜಿಲ್ಲೆಯ ಅನ್ನದಾತರ ಗೋಳನ್ನ, ಅವರಿಗೆ ಪರಿಹಾರ ಆದ್ರು ಒದಗಿಸಿ ಸ್ವಾಮಿ ಎಂಬುದು ನಮ್ಮ ಕಳಕಳಿ‌.

Follow Us:
Download App:
  • android
  • ios