Tomato ದರ ಕುಸಿತ: ಜಾನುವಾರುಗಳಿಗೆ ಮೇವಾದ ಬೆಳೆ!
ಕಳೆದ ಕೆಲ ತಿಂಗಳುಗಳ ಹಿಂದೆ ಗಗನ ಮುಖಿಯಾಗಿದ್ದ ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ (ಅ.22): ಕಳೆದ ಕೆಲ ತಿಂಗಳುಗಳ ಹಿಂದೆ ಗಗನ ಮುಖಿಯಾಗಿದ್ದ ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಉತ್ತಮ ಬೆಲೆ ನಿರೀಕ್ಷಿಸಿ ಮಾರುಕಟ್ಟೆಗೆ ಟೊಮೆಟೋ ತರುವ ಜಿಲ್ಲೆಯ ರೈತರಿಗೆ ಬೆಲೆ ಕುಸಿತದಿಂದ ಹಾಕಿದ್ದ ಬಂಡವಾಳವೂ ಕೈಗೆ ಎಟುಕದ ಸ್ಥಿತಿ ಉಂಟಾಗಿದೆ. ಟೊಮೆಟೋ ಉತ್ಪಾದನೆ ಹೆಚ್ಚಾಗಿರುವ ಕಾರಣ ಟೊಮೆಟೊ ದರ ತೀವ್ರ ಕುಸಿತಕಂಡಿದೆ. ಹಗಲು-ರಾತ್ರಿ ಕಷ್ಟಪಟ್ಟು ಬೆಳೆದ ಟೊಮೆಟೊಗೆ 3 ಕಾಸಿನ ಬೆಲೆ ಇಲ್ಲದ ಕಾರಣ ಟೊಮೆಟೊ ತೋಟವನ್ನು ಕುರಿ, ಮೇಕೆ, ಹಸುಗಳು ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಿವೆ.
ಹಸು, ಕುರಿಗಳಿಗೆ ಮೇವು: ಹುಲುಸಾಗಿ ಬೆಳೆದು ನಿಂತಿರುವ ಟೊಮೆಟೊ ತೋಟಗಳು, ಟೊಮೆಟೊ ಕೀಳದೇ ಗಿಡದಲ್ಲೇ ನಳನಳಿಸುತ್ತಿರುವ ಹಣ್ಣುಗಳು, ಗ್ರಾಹಕರ ಹೊಟ್ಟೆ ಸೇರಬೇಕಿದ್ದ ಟೊಮೆಟೊ ಈಗ ಕುರಿಗಳ ಹಸಿವು ನೀಗಿಸುತ್ತಿರುವ ದೃಶ್ಯಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ವೆ ಸಾಮಾನ್ಯವಾಗಿದೆ. ಮಾರುಕಟ್ಟೆಯಲ್ಲಿ ಈಗ 15 ಕೆಜಿಯ ಟೊಮೆಟೊ ಬಾಕ್ಸ್ 50 ರುಪಾಯಿಗಳಿಗೆ ಬಿಕರಿಯಾಗುತ್ತಿದೆ. ಇದರಿಂದ ಟೊಮೆಟೊ ಕೀಳುವ ಕೂಲಿಯೂ ಬರುವುಲ್ಲ ಎನ್ನುವುದು ಬೆಳೆಗಾರರ ನೋವು.
ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ: ಸಂಸದ ಪ್ರಜ್ವಲ್ ರೇವಣ್ಣ
ಜುಲೈನಲ್ಲಿ ಟೊಮೇಟೊ ಕೆಜಿಗೆ 150ರಿಂದ 200 ರೂ.ವರೆಗೂ ಮಾರಾಟವಾಗುತ್ತಿತ್ತು. ಆದರೆ ಆಗಸ್ಟ್‌ನಲ್ಲಿ ಟೊಮೆಟೋ ಧಾರಣೆ 40- 20 ರೂ. ಮೇಲೆ ಏರಿಕೆಯೇ ಆಗಿಲ್ಲ. ಸದ್ಯ ತರಕಾರಿ ಮಾರುಕಟ್ಟೆಯಲ್ಲಿ 8 ರಿಂದ 10 ರು. ಇದೆ. ಆದರೆ ರೈತರಿಗೆ ಸಿಗುವುದು ಬಿಡಿಗಾಸು ಮಾತ್ರ.
ಬೆಡಿಕೆಗಿಂತ ಹೆಚ್ಚು ಫಸಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಥೇಚ್ಚವಾಗಿ ಟೊಮೆಟೋ ಬೆಳೆಯಲಾಗುತ್ತದೆ. ಚಿಕ್ಕಬಳ್ಳಾಪುರ-ಚಿಂತಾಮಣಿ, ಬಾಗೇಪಲ್ಲಿ ಕೋಲಾರದ ಟೊಮೆಟೋ ಮಾರುಕಟ್ಟೆಯಿಂದ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಿಗೂ ಟೊಮೆಟೋ ರಫ್ತು ಮಾಡಲಾಗುತ್ತದೆ. ಟೊಮೆಟೋ ಬೆಲೆ ಭಾರಿ ಏರಿಕೆ ಕಂಡ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಬಿತ್ತನೆ ಮಾಡಿದ್ದರು.ಈಗ ಫಸಲು ಬರಲಾಭಿಸಿದೆ. ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಟೊಮೆಟೋ ಫಸಲು ಇರುವ ಕಾರಣ ದರ ಕುಸಿತಕ್ಕೆ ಕಾರಣವಾಗಿದೆ.
ಜೂನ್ ಮಧ್ಯ ಭಾಗದಿಂದ ಜುಲೈ ಅಂತ್ಯದವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುತ್ತಿದ್ದ ಟೊಮೇಟೊ ಪ್ರಮಾಣ ತುಂಬಾ ಕಡಿಮೆ ಇತ್ತು. ಮತ್ತೊಂದೆಡೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ,ನಾಗಪುರ್, ತಮಿಳುನಾಡು, ಕೇರಳ ಸೇರಿ ಹೊರ ರಾಜ್ಯಗಳಲ್ಲಿ ಟೊಮೆಟೋಗೆ ಬೇಡಿಕೆ ಹೆಚ್ಚಿತ್ತು. ಹೊರ ರಾಜ್ಯಗಳ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಖರೀದಿಸಿ ಹೋಗುತ್ತಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೋ ಸಿಗುವುದು ಕಷ್ಟವಾಗಿತ್ತು. ಇದರಿಂದ ಟೊಮೆಟೊ ಬೆಲೆ ಗಗನಕ್ಕೇರಿತ್ತು.
ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ
ಬೇಡಿಕೆಗಿಂತ ಹೆಚ್ಚು ಉತ್ಪಾದನೆ: ನಮ್ಮ ರೈತರೇ ಹಾಗೆ ಬೆಲೆ ಬಂತು ಎಂದು ದಿಢೀರನೇ ಎಲ್ಲರೂ ಒಂದೇ ಬೆಳೆಯನ್ನೇ ಬೆಳೆಯುತ್ತಾರೆ. ಇದರಿಂದ ಈಗ ಕಣ್ಣು ಹಾಯಿಸಿದ ಕಡೆ ಟೊಮೆಟೊ ಬೆಳೆದು ನಿಂತಿದೆ. ಈಗ ಟೊಮೆಟೊ ಸೀಜನ್ ಆಗಿರುವ ಕಾರಣ ಎಲ್ಲೆಡೆ ಸ್ಥಳೀಯವಾಗಿ ಟೊಮೆಟೊ ಬೆಳೆದಿದ್ದಾರೆ. ಇದರಿಂದ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಟೊಮೆಟೊಗೆ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.