ಮುಂಡರಗಿ: ಹಣ ಕೊಡುವ ವಿಚಾರ, ಟೋಲ್‌ನಾಕಾ ಸಿಬ್ಬಂದಿ ಜೊತೆ ವಾಹನ ಸವಾರರ ಮಾರಾಮಾರಿ
ಹತ್ತಿರ ಹೊಡೆದಾಟ, 2 ಪ್ರತ್ಯೇಕ ಪ್ರಕರಣ ದಾಖಲು| ಹಲ್ಲೆ ಮಾಡಿರುವ ಟೋಲ್‌ನಾಕಾ ಉಸ್ತುವಾರಿ, ಸಿಬ್ಬಂದಿ ಪರಾರಿ| ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಇರುವ ಟೋಲ್‌ನಾಕಾ ಬಳಿ ನಡೆದ ಘಟನೆ|
ಮುಂಡರಗಿ(ಜು. 01): ಭಾನುವಾರ ಸಂಜೆ ತಾಲೂಕಿನ ಕೊರ್ಲಹಳ್ಳಿ ಬಳಿ ಇರುವ ಟೋಲ್‌ನಾಕಾ ಹತ್ತಿರ ಟೋಲ್‌ಗೆ ಹಣ ಕೊಡುವ ವಿಚಾರವಾಗಿ ಟೋಲ್‌ನಾಕಾ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಎರಡು ಪ್ರತ್ಯೇಕ ಮಾರಾಮಾರಿ ನಡೆದಿದ್ದು, ಈ ಕುರಿತು ಪ್ರಕರಣಗಳು ದಾಖಲಾಗಿವೆ.
ಮಾಬುಸಾಬ್ ಬಾಬಾಜಾನ್ ಹವಾಲ್ದಾರ್ ಎಂಬವರು ಶಿಂಗಟಾಲೂರಿನಿಂದ ಮುಂಡರಗಿಗೆ ಕಾರಿನಲ್ಲಿ ಬರುವಾಗ ನಾನು ಈ ರಸ್ತೆಯಲ್ಲಿ ಪ್ರತಿದಿನ ನಾಲ್ಕೈದು ಬಾರಿ ಓಡಾಡುತ್ತಿದ್ದು, ನನಗೆ ತಿಂಗಳ ಪಾಸ್ ನೀಡುವಂತೆ ಟೋಲ್‌ನಾಕಾ ಉಸ್ತುವಾರಿ ಮದರಸಾಬ್ ಸಿಂಗನಮಲ್ಲಿ ಎಂಬುವವರನ್ನು ಕೇಳಿಕೊಂಡಿದ್ದಾರೆ. ಈ ಕುರಿತು ಮಾತಿಗೆ ಮಾತು ಬೆಳೆದು ಟೋಲ್‌ನಾಕಾ ಉಸ್ತುವಾರಿ ಮದರಸಾಬ್ ಸಿಂಗನಮಲ್ಲಿ ಹಾಗೂ ಸಿಬ್ಬಂದಿ ಚೇತನ್ ಎಂಬವರು ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರ ಹಿಡಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಬುಸಾಬ್ ಹವಾಲ್ದಾರ್ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
'ಜನತೆಯ ಹಿತ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ'
ಇದೇ ಟೋಲ್ ನಾಕಾದಲ್ಲಿ ಭಾನುವಾರ ರಾತ್ರಿಯೇ ಜರುಗಿದ ಮತ್ತೊಂದು ಪ್ರಕರಣದಲ್ಲಿ ಶಿವಕುಮಾರ ಡೊಳ್ಳಿನ, ಮಾರುತಿ ಪಲ್ಲೇದ ಹಾಗೂ ನಿಂಗಪ್ಪ ಪಲ್ಲೇದ ಎನ್ನುವವರು ಕಾರಿನಲ್ಲಿ ಕೊರ್ಲಹಳ್ಳಿಯಿಂದ ಮುಂಡರಗಿ ಕಡೆಗೆ ಬರುವಾಗ ಟೋಲ್‌ನಾಕಾ ಸಿಬ್ಬಂದಿ ಶುಲ್ಕ ಪಾವತಿಸುವಂತೆ ಕೇಳಿಕೊಂಡಿದ್ದಾರೆ. ನಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಇರುವುದಾಗಿ ಹೇಳಿದ್ದಾರೆ. ನಮಗೆ ಅದೆಲ್ಲ ಗೊತ್ತಿಲ್ಲ, ನೀವು ನಗದು ಪಾವತಿಸಬೇಕು ಎಂದು ಟೋಲ್‌ನಾಕಾ ಸಿಬ್ಬಂದಿ ತಿಳಿಸಿದ್ದು, 100ಗಳನ್ನು ನೀಡಲಾಗಿದೆ. ಇದೇ ವಿಷಯಕ್ಕೆ ಅಲ್ಲಿಯ ಉಸ್ತುವಾರಿ ಮದರಸಾಬ್ ಸಿಂಗನಮಲ್ಲಿ ಹಾಗೂ ಸಿಬ್ಬಂದಿ ವಿನಾಯಕ, ಚೇತನ, ಶಬ್ಬೀರ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದರು. ಮದರಸಾಬ್ ಹಾಗೂ ಮತ್ತಿತರರು ನಿಂಗಪ್ಪ ಪಲ್ಲೇದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಶಿವಕುಮಾರ ಡೊಳ್ಳಿನ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.
ಹಲ್ಲೆ ಮಾಡಿರುವ ಟೋಲ್‌ನಾಕಾ ಉಸ್ತುವಾರಿ, ಸಿಬ್ಬಂದಿ ಪರಾರಿಯಾಗಿದ್ದಾರೆ. ಈ ಕುರಿತಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಪಿಎಸ್‌ಐ ಚಂದ್ರಪ್ಪ ಈಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.