ಬೆಂಗಳೂರು [ಸೆ.17]:  ಮಾದಕ ವಸ್ತು ಮಾರಾಟ ಹಾಗೂ ದ್ವಿಚಕ್ರ ವಾಹನ ಕಳ್ಳತನ ಸೇರಿ ವಿವಿಧ 51 ಅಪರಾಧ ಪ್ರಕರಣಗಳನ್ನು ಬೇಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಅಂತಾರಾಜ್ಯ ಕಳ್ಳರು ಸೇರಿ 21 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 90.20 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರದ 47 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪ್ರೇಯಸಿಯ ಜತೆ ಸುತ್ತಾಡಲು ಆಂಧ್ರಪ್ರದೇಶದ ಕಡಪ ಮೂಲದ ಯುವಕರ ಜತೆ ಸೇರಿ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಐವರು ಕೋರಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿವೇಕನಗರದ ಗುಣಶೇಖರ್‌ ಅಲಿಯಾಸ್‌ ಕುಟ್ಟಿ(21), ಆಂಧ್ರಪ್ರದೇಶದ ಕಡಪ ಜಿಲ್ಲೆಯ ಹೆನ್ರಿ ಮೈಕಲ್‌ (25), ದಂಡು ಅಜಿಕ್‌ ಕುಮಾರ್‌ (20), ಗಾಯಮ್‌ ಪಂಚಾಲಯ್ಯ(20) ಮತ್ತು ಪೊಲುಕುಂಟ ಮಹೇಶ್ವರ ರೆಡ್ಡಿ (25) ಬಂಧಿತರು. ಆರೋಪಿಗಳಿಂದ 16 ಬುಲೆಟ್‌, 2 ಕೆಟಿಎಂ ಬೈಕ್‌ ಸೇರಿ ಒಟ್ಟು 22 ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗುಣಶೇಖರ್‌ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅಜಿತ್‌ ಕುಮಾರ್‌, ಗುಣಶೇಖರ್‌ ಸ್ನೇಹಿತರಾಗಿದ್ದರು. ಈ ಮೊದಲೇ ಅಜಿತ್‌ ವಿರುದ್ಧ ಮೈಕೋ ಲೇಔಟ್‌, ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. ಐಷಾರಾಮಿ ಜೀವನ ನಡೆಸಲು ಹಾಗೂ ಪ್ರೇಯಸಿ ಜತೆ ಸುತ್ತಾಡಲು ಗುಣಶೇಖರ್‌, ಅಜಿತ್‌ ಜತೆ ಕಳವು ಕೃತ್ಯಕ್ಕೆ ಇಳಿದಿದ್ದ. ಕೆಲ ತಿಂಗಳ ಹಿಂದೆ ಅಜಿತ್‌ ಕಡಪ ಜಿಲ್ಲೆಗೆ ಹೋಗಿ ಉಳಿದುಕೊಂಡಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿಗಳು ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸುತ್ತಿದ್ದ ಬುಲೆಟ್‌, ಕೆಟಿಎಂ ಹಾಗೂ ಇತರೆ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಪ್ರಕರಣದಲ್ಲಿ ಮೋಜು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಯ ಹತ್ತು ಪ್ರಕರಣಗಳು ಬೆಳಕಿಗೆ ಬಂದಿವೆ.

ಇನ್ನು ಆಡುಗೋಡಿ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಇಶಾಪಂತ್‌ ತಿಳಿಸಿದ್ದಾರೆ.

ಒಡಿಶಾದಿಂದ ಮಾದಕ ವಸ್ತು ತರುತ್ತಿದ್ದರು!

ಒಡಿಶಾದಿಂದ ಗಾಂಜಾ ಮತ್ತು ಎಂಡಿಎಂಎ ಪುಡಿ ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಏಳು ಅಂತಾರಾಜ್ಯ ಆರೋಪಿಗಳನ್ನು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಲಕ್ಷ್ಮಣ್‌ ಚೇರುಡು(22), ಸಾಯಿ ಚರಣ್‌(24), ಸುಜೀತ್‌ (26), ಡಾಮ್‌ನಿಕ್‌ (22), ಸುದೀಶ್‌ (26), ಸಾಹಿಲ್‌ (21), ಸಜನ್‌ದಾಸ್‌ (24) ಬಂಧಿತರು. ಆರೋಪಿಗಳಿಂದ 11 ಲಕ್ಷ ರು. ಮೌಲ್ಯದ 22.5 ಕೆ.ಜಿ. ಗಾಂಜಾ, 50 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.

ಆರೋಪಿಗಳು ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ರೈಲು ಮತ್ತು ಬಸ್‌ ಮೂಲಕ ಗಾಂಜಾ ತರುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.