ಬೆಂಗಳೂರು (ಏ. 02): ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‍ಡೌನ್ ಹಾಗೂ ನೈಟ್ ಕರ್ಫ್ಯೂ ಇಲ್ಲ. ಶಾಲೆಗಳನ್ನು ಭೌತಿಕವಾಗಿ ನಡೆಸದಿರಲು ನಿರ್ಧರಿಸಲಾಗಿದೆ. ಲಾಕ್‍ಡೌನ್ ಇಲ್ಲದಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ನಿಯಂತ್ರಣ ಸಂಬಂಧ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸಭೆ ನಡೆಸಿದ್ದು, ರಾಜ್ಯದ ಪರವಾಗಿ ಸಿಎಸ್ ರವಿಕುಮಾರ್ ಭಾಗಿಯಾಗಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಪರಿಸ್ಥಿತಿ ಕುರಿತು ರವಿಕುಮಾರ್ ವಿವರಣೆ ನೀಡಿದ್ದಾರೆ. ಈ ಸಭೆ ಬಳಿಕ ಡಿಜಿಪಿ ಪ್ರವೀಣ್ ಸೂದ್, ಗೃಹ ಕಾರ್ಯದರ್ಶಿಗಳು ಮತ್ತು ಕೊರೊನಾಗೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮಾಹಿತಿ ಪಡೆದುಕೊಂಡರು.

ಸರ್ಕಾರಿ ನೌಕರರ ಕೊರೋನಾ ವೆಚ್ಚ ಪಾವತಿಗೆ ಮುಂದಾದ ಸರ್ಕಾರ

ಜನ ಹೆಚ್ಚು ಇರುವ ಕಡೆ ಲಸಿಕೆ ಹಾಕಲು ನಿರ್ಧರಿಸಿದ್ದು, ಕೈಗಾರಿಕೆ, ಐಟಿ ಸಂಸ್ಥೆಗಳಿಗೆ ಹೋಗಿ ಲಸಿಕೆ ಹಾಕಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ಜಾತ್ರೆ, ಧಾರ್ಮಿಕ ಉತ್ಸವಗಳನ್ನು ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ತೆರೆದಿರುವುದು ಬೇಡ ಎಂದು ತಿರ್ಮಾನಿಸಲಾಗಿದೆ.  6-9 ತರಗತಿಗಳನ್ನು ಹದಿನೈದು ದಿನ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು, ಮೈಸೂರು, ಕಲಬುರ್ಗಿ, ಬೀದರ್ ಸೇರಿ ಹಲವು ಕಡೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಬೆಡ್ ನಿಗದಿ ಮಾಡಲು ನಿರ್ಧರಿಸಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ, ನಿಯಮಗಳ ಬಿಗಿ ಪಾಲನೆ ಮಾಡಬೇಕು. ಮಾಸ್ಕ್ ದಂಡ ಕ್ರಮ ಜಾರಿಯಲ್ಲಿದೆ ಎಂದರು. ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಹಬ್ಬುತ್ತಿರುವ ಕೊರೋನಾ ಸೋಂಕು ನಿವಾರಿಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಅದು ಏಪ್ರಿಲ್ 20ರವರೆಗೆ ಅನ್ವಯವಾಗಲಿದೆ, ಎಂದಿದ್ದಾರೆ.