ಸೋಂಕು ಇಲ್ಲದಿದ್ದರೂ ಮನೆ ಸೀಲ್ ಡೌನ್ : ಇದೆಂತಾ ವ್ಯವಸ್ಥೆ ?

ತಿಪಟೂರಿನ ಮನಯೊಂದರಲ್ಲಿ ಯಾವುದೇ ಕೊರೋನಾ ಸೋಂಕಿತರಿಲ್ಲದಿದ್ದರೂ ಸೀಲ್ ಡೌನ್ ಮಾಡಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದು ಔಷಧೋಪಚಾರ ನೀಡದೇ ನಿರ್ಲಕ್ಷಿಸಿದ ಘಟನೆ ನಡೆದಿದೆ. 

tiptur people Protest Against Health Department

ತಿಪಟೂರು (ಆ.14) :  ತಾಲೂಕಿನ ಹೊನ್ನವಳ್ಳಿ ಹೋಬಳಿ ಹರಚನಹಳ್ಳಿ ಗ್ರಾಮದ ಒಂದು ಕುಟುಂಬದವರಿಗೆ ಕೊರೋನಾ ಇದೆ ಎಂಬ ಭೀತಿ ಹುಟ್ಟಿಸಿದ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಬೇಜವಾಬ್ದಾರಿಯಿಂದ ಗ್ರಾಮಸ್ಥರು ತಿರುಗಿ ಬಿದ್ದಿದ್ದು, ಬೇಜವಾಬ್ದಾರಿ ಆರೋಗ್ಯಾಧಿಕಾರಿಯನ್ನು ಕೂಡಲೆ ಸಸ್ಪೆಂಡ್‌ ಮಾಡಬೇಕೆಂದು ಕಳೆದ 4-5ದಿನಗಳಿಂದ ನಿತ್ಯವೂ ಸಂಜೆ 5ರಿಂದ ರಾತ್ರಿ 12ರವರೆಗೆ ಧರಣಿ ನಡೆಸುತ್ತಿರುವ ಪ್ರಸಂಗ ನಡೆಯುತ್ತಿದೆ.

ಗ್ರಾಮದ ಕುಟುಂಬವೊಂದು 20ದಿನಗಳ ಹಿಂದೆ ಬೆಂಗಳೂರಿಂದ ಬಂದಿದ್ದು, ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಕೊರೋನಾ ಟೆಸ್ಟ್‌ ಮಾಡಿಸಿಕೊಂಡಾಗ ನೆಗೆಟಿವ್‌ ಬಂದಿದೆ. ಆದರೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದ್ದರು.

ಆದರೆ ಕ್ವಾರಂಟೈನ್‌ ಮುಗಿದ ನಂತರ ಆರೋಗ್ಯ ಇಲಾಖೆಯ ಗುರುಪ್ರಸಾದ್‌ ಎಂಬ ಅಧಿಕಾರಿ ಗ್ರಾಮದ ಇವರ ಮನೆಗೆ ಬಂದು ನಿಮ್ಮ ಮನೆಯೆ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಹೇಳಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರಲು ಹೇಳಿ ಯಾವುದೇ ಟೆಸ್ಟ್‌ ಮಾಡದೆ ಅಂದು ರಾತ್ರಿ 11 ಗಂಟೆಯವರೆಗೂ ಆಸ್ಪತ್ರೆಯಲ್ಲಿ ಒಬ್ಬರನ್ನೇ ಕೂರಿಸಿ ನಂತರ ಕೊನೇಹಳ್ಳಿ ಕೊರೋನಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕೊರೋನಾ ಗೆದ್ದ ಸಚಿವ ಆನಂದ ಸಿಂಗ್‌: ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದರ್ಶನ

ಯಾವುದೇ ಪಾಸಿಟಿವ್‌ ವರದಿ ಇಲ್ಲದಿದ್ದರೂ ಅಲ್ಲಿ ಇಡಲಾಗಿತ್ತು. ನಂತರ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಿತ್ತರವಾದ ತಕ್ಷಣ ಆಕೆಯನ್ನು ಡಿಸ್‌ಚಾರ್ಜ್ ಮಾಡಿ ಸುಮಾರು 15 ಕಿ.ಮೀ. ಇರುವ ಗ್ರಾಮಕ್ಕೆ ಸರ್ಕಾರಿ ವಾಹನದಲ್ಲಿ ಬಿಡದೆ ನಡೆದುಕೊಂಡು ಹೋಗಲು ತಿಳಿಸಲಾಗಿದೆ. ಆಕೆ ಹೇಗೋ ಬಂದು ಮನೆ ಸೇರಿದ್ದಾರೆ.

ಈ ವೇಳೆಗಾಗಲೆ ಮನೆಯನ್ನೂ ಸೀಲ್‌ಡೌನ್‌ ಮಾಡಲಾಗಿತ್ತು. ಸೀಲ್‌ಡೌನ್‌ ಮಾಡಿದ್ದರಿಂದ ಆಕೆ ಮನೆ ಒಳಗೆ ಹೋಗಲು ಸಾಧ್ಯವಾಗದೆ ರಾತ್ರಿಯೆಲ್ಲ ಮನೆ ಆಚೆಯೇ ಕಳೆದಿದ್ದಾರೆ. ಬೆಳಗಿನ ಜಾವ ಹೇಗೊ ಮನೆಯವರು ಒಳಗೆ ಕರೆದುಕೊಂಡಿದ್ದಾರೆ. ಆದರೆ ಸೀಲ್‌ಡೌನ್‌ ಮಾಡಿದ ಅಧಿಕಾರಿಗಳು ಮನೆಯವರಿಗೆ ಯಾವುದೇ ಸೌಲಭ್ಯ ನೀಡದ್ದನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದು ಒತ್ತಡ ಹಾಕಿದ್ದರೂ ಪ್ರಯೋಜನವಾಗಿಲ್ಲ.

ಅಲ್ಲದೆ ಗ್ರಾಮದವರು ಇವರಿಗೆ ಸಹಾಯ ಮಾಡಲೂ ಅಧಿಕಾರಿಗಳು ಬಿಡುತ್ತಿಲ್ಲ. ಹೀಗಾಗಿ ಕೊರೋನಾ ಮಹಾಮಾರಿಗಿಂತ ಆರೋಗ್ಯ ಸೇರಿದಂತೆ ಇತರೆ ಇಲಾಖೆಯವರ ಅಮಾನವೀಯ ವರ್ತನೆ ಗ್ರಾಮದವರಿಗೆ ತೀವ್ರ ಬೇಸರ ಉಂಟು ಮಾಡಿದೆ.

ಭಾರತದಲ್ಲಿ ಲಸಿಕೆ ಉತ್ಪಾದನೆಗೆ ರಷ್ಯಾ ತವಕ..!...

ಸೀಲ್‌ಡೌನ್‌ ಸಹ ತೆರವು ಮಾಡಿಲ್ಲ. ಒಬ್ಬ ಅಮಾಯಕ ಹೆಣ್ಣು ಮಗಳನ್ನು ಪಾಸಿಟಿವ್‌ ಇಲ್ಲದಿದ್ದರೂ ಪಾಸಿಟಿವ್‌ ಇದೆ ಎಂದು ಆಸ್ಪತ್ರೆಗೆ ಕರೆಸಿಕೊಂಡ ಅಧಿಕಾರಿಯನ್ನು ಮೊದಲು ಸಸ್ಪೆಂಡ್‌ ಮಾಡಿ ನಂತರ ಸೀಲ್‌ಡೌನ್‌ ಮಾಡಿದ್ದು ಏಕೆ? ಪಾಸಿಟಿವ್‌ ಇಲ್ಲದಿದ್ದರೂ ರೈತಕುಟುಂಬಕ್ಕೆ ಒಂದು ರೀತಿಯ ದಿಗ್ಬಂಧನ ಹಾಕಿರುವುದಾದರೂ ಏಕೆ? ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸುಖಾಸುಮ್ಮನೆ ಸೀಲ್‌ಡೌನ್‌ ಮಾಡಿರುವುದರಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೂ ನಷ್ಟ, ಇತ್ತ ಬಿತ್ತನೆ ಕಾಲದಲ್ಲಿ ರೈತ ಕುಟುಂಬಕ್ಕೂ ಕಷ್ಟವಾಗಿದೆ. ಹಾಗಾಗಿ ಕೋವಿಡ್‌ ಮುಖ್ಯಸ್ಥರಾದ ಉಪವಿಭಾಗಾಧಿಕಾರಿಗಳು ಘಟನೆ ನಡೆದು ಹತ್ತಾರು ದಿನಗಳಾದರೂ ಕ್ರಮಕೈಗೊಳ್ಳದಿರುವುದರಿಂದ ಜಿಲ್ಲಾಧಿಕಾರಿಗಳಾದರೂ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ, ಮನವಿಯನ್ನ ಗ್ರಾಮಸ್ಥರು ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios