Asianet Suvarna News Asianet Suvarna News

Chikkamagaluru Utsav: ಕಾಫಿನಾಡಲ್ಲಿ ಚಿಕ್ಕ​ಮ​ಗ​ಳೂರು ಹಬ್ಬ ಚಾಲ​ನೆ​ಗೆ ಕ್ಷಣ​ಗ​ಣ​ನೆ

ಪಶ್ಚಿಮಘಟ್ಟದ ಸಾಲಿನ ಮಡಿಲಲ್ಲಿ ಸದಾ ನಸುನಗುತಾ, ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಕಾಫಿಯ, ಪ್ರಕೃತಿ ಮಾತೆಯ, ಜೀವ ನದಿಗಳ ತವರೂರಲ್ಲಿ ಇಂದಿನಿಂದ (ಜ.18) ಐದು ದಿನಗಳ ಕಾಲ ಚಿಕ್ಕಮಗಳೂರು ಹಬ್ಬ ಕಳೆಗಟ್ಟಲಿದೆ.

Time is counting down for Chikkamagalur festival rav
Author
First Published Jan 18, 2023, 12:01 PM IST

ಚಿಕ್ಕಮಗಳೂರು (ಜ.18) : ಪಶ್ಚಿಮಘಟ್ಟದ ಸಾಲಿನ ಮಡಿಲಲ್ಲಿ ಸದಾ ನಸುನಗುತಾ, ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಕಾಫಿಯ, ಪ್ರಕೃತಿ ಮಾತೆಯ, ಜೀವ ನದಿಗಳ ತವರೂರಲ್ಲಿ ಇಂದಿನಿಂದ (ಜ.18) ಐದು ದಿನಗಳ ಕಾಲ ಚಿಕ್ಕಮಗಳೂರು ಹಬ್ಬ ಕಳೆಗಟ್ಟಲಿದೆ.

ಉತ್ಸವದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಪ್ರಮುಖ ರಸ್ತೆಗಳು, ನಗರದ ಹೃದಯ ಭಾಗದಲ್ಲಿರುವ ವೃತ್ತಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಜಗಮಗಿಸುತ್ತಿವೆ. ಬೆಳಕು ಸರಿದು ಕತ್ತಲು ಆವರಿಸುತ್ತಿದ್ದಂತೆ ವಿದ್ಯುತ್‌ ಬೆಳಕು ಅಂದ ಹೆಚ್ಚಿಸುತ್ತಿ​ವೆ. ಕೆ.ಎಂ. ರಸ್ತೆ, ಎಂ.ಜಿ. ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಆಜಾದ್‌ ಪಾರ್ಕ್, ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ವೃತ್ತ ಹೀಗೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ.

ಚಿಕ್ಕಮಗಳೂರು ಹಬ್ಬದ ಅಂಗವಾಗಿ ಚಿತ್ರಕಲಾ ಶಿಬಿರ, ಕಣ್ಮನ ಸೆಳೆಯುವ ಜಲಪಾತ-ಗಿರಿಶ್ರೇಣಿಗಳು

ಜಾನಪದ ಕಾರ್ಯಕ್ರಮಗಳನ್ನು ನಡೆಸಲು ಟೌನ್‌ ಕ್ಯಾಂಟಿನ್‌ ವೃತ್ತ, ಹನುಮಂತಪ್ಪ ವೃತ್ತದಲ್ಲಿ ಪ್ರತ್ಯೇಕ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಆಟದ ಮೈದಾನದ ಹೊರ ಭಾಗದಲ್ಲಿ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳನ್ನು ಹಾಕಲಾಗಿದೆ. ಒಳಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದೆ. ವಿಐಪಿಗಳಿಗಾಗಿ ಸುಮಾರು 2 ಸಾವಿರ ಆಸನ ವ್ಯವಸ್ಥೆ , ಸಾರ್ವಜನಿಕರಿಗೆ 10 ಸಾವಿರ ಚೇರ್‌ಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಹೂವಿನಲೋಕವೇ ಸೃಷ್ಟಿಯಾಗಿದೆ. ದೇಶ ವಿದೇಶಗಳ ವಿವಿಧ ಬಗೆಯ ಬಣ್ಣಗಳ ಹೂವುಗಳು ಕಣ್ಮನ ಸೆಳೆಯುತ್ತಿವೆ. 150ಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳನ್ನು ಇಡಲಾಗಿದೆ. ಇದರಲ್ಲಿ ದೇಶಿಯ ವೈವಿಧ್ಯಮಯ ಹೂವುಗಳು ಹಾಗೂ ವಿದೇಶಗಳ ಹೂ ಕುಂಡಗಳು ಕಂಗೊಳಿಸುತ್ತಿವೆ.

ಮೆರವಣಿಗೆ ಉದ್ಘಾಟನೆ:

ಜಿಲ್ಲಾ ಉತ್ಸವಕ್ಕೆ ಮೆರುಗು ನೀಡಲು ರಾಜ್ಯದ ವಿವಿಧೆಡೆಯಿಂದ ಈಗಾಗಲೇ ಕಲಾ ತಂಡಗಳು ಚಿಕ್ಕಮಗಳೂರಿಗೆ ಆಗಮಿಸಿದ್ದು, ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಬೆಳಗ್ಗೆಯಿಂದ ತಾಲೀಮು ನಡೆಸಿದರು. ಉತ್ಸವಕ್ಕೆ ಚಾಲನೆ ನೀಡುವ ಮುನ್ನ ಕಲಾ ತಂಡಗಳಿಂದ ನಗರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ವೃತ್ತದಿಂದ ಹೊರಡುವ ಮೆರವಣಿಗೆಯಲ್ಲಿ ಶಾಲಾ, ಕಾಲೇಜುಗಳ 5 ಸಾವಿರ ವಿದ್ಯಾರ್ಥಿಗಳು, 4 ಸಾವಿರ ಕಲಾವಿದರು, ಆಳ್ವಾಸ್‌ ಸಂಸ್ಥೆಯ ಕಲಾ ತಂಡಗಳು ಸೇರಿದಂತೆ ಸುಮಾರು 10 ಸಾವಿರ ಜನರು ಭಾಗವಹಿಸಲಿದ್ದಾರೆ, ಮಧ್ಯಾಹ್ನ 3.30ಕ್ಕೆ ಈ ಮೆರವಣಿಗೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್‌ ಉದ್ಘಾಟಿಸಲಿದ್ದಾರೆ.

ಕನ್ನಡಾಂಬೆಗೆ ಸಿಎಂ ಪುಷ್ಪಾರ್ಚನೆ: ವಿವಿಧ ಗಣ್ಯರ ಉಪ​ಸ್ಥಿ​ತಿ

ಮೆರವಣಿಗೆ ಹನುಮಂತಪ್ಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಕನ್ನಡಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮುನ್ನಡೆಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಮೆರವಣಿಗೆ ಮುಂದೆ ಸಾಗಿ ಸಂಜೆ 6.30ಕ್ಕೆ ಜಿಲ್ಲಾ ಆಟದ ಮೈದಾನ ತಲುಪಲಿದೆ.ಬಳಿಕ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಜಿಲ್ಲಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ವಿಧಾನ ಪರಿಷತ್ತು ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಉಪಸ್ಥಿತಿ ಇರಲಿದ್ದು, ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾಪರಿಷತ್ತು ಸದಸ್ಯರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿರುವ 50ಕ್ಕೂ ಹೆಚ್ಚು ಜಾನಪದ ತಂಡಗಳಿಂದ ಕಲಾ ವೈಭವಯುತ ಕಾರ್ಯಕ್ರಮ ಜರುಗಲಿದೆ.

Chikkamagaluru: ಕಾಫಿನಾಡಿನ ಮಾದರಿ ಪೊಲೀಸ್ ಸ್ಟೇಷನ್: ಮಲ್ಲಂದೂರು ಠಾಣೆ ರಾಜ್ಯಕ್ಕೆ ಮಾದರಿ

ಜಿಲ್ಲಾ ಉತ್ಸವದ ಅಂಗವಾಗಿ ಎಐಟಿ ಕಾಲೇಜಿನ ಮೈದಾನದಲ್ಲಿ ಜ್ಞಾನವೈಭವ ಮೇಳವನ್ನು ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆಯಲಿವೆ. ಒಟ್ಟಾರೆ, ಜಿಲ್ಲಾ ಉತ್ಸವ ಯಶಸ್ವಿ ಆಗಲಿ ಎಂಬುದು ಜನರ ಆಶಯವಾಗಿದೆ.

Follow Us:
Download App:
  • android
  • ios