ಕರಾವಳಿ ಹಿರಿಮೆಯ ಹುಲಿ ವೇಷ ಈಗ ಜಗತ್ಪ್ರಸಿದ್ಧ: ಸಂಸದ ನಳಿನ್ ಕುಮಾರ್
ಕರಾವಳಿಗೆ ಸೀಮಿತವಾಗಿದ್ದ ಹುಲಿವೇಷ ಈಗ ದೇಶ-ವಿದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿರುವುದು ತುಳುನಾಡಿನ ಹಿರಿಮೆಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು (ಅ.22): ಕರಾವಳಿಗೆ ಸೀಮಿತವಾಗಿದ್ದ ಹುಲಿವೇಷ ಈಗ ದೇಶ-ವಿದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿರುವುದು ತುಳುನಾಡಿನ ಹಿರಿಮೆಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಇಲ್ಲಿನ ಕೇಂದ್ರ ಮೈದಾನದಲ್ಲಿ ದ್ವಿತೀಯ ವರ್ಷದ ‘ಕುಡ್ಲ ಪಿಲಿ ಪರ್ಬ-2023’ ಸ್ಪರ್ಧಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಹುಲಿವೇಷಕ್ಕೆ ತನ್ನದೇ ಆದ ಚೌಕಟ್ಟಿದ್ದು, ಹುಲಿವೇಷ ಸ್ಪರ್ಧೆಯಿಂದ ಮತ್ತಷ್ಟು ಯುವ ಸಮುದಾಯವನ್ನು ಈ ಕಲೆಗೆ ಆಕರ್ಷಿಸಿದ್ದಲ್ಲದೆ, ಎಲ್ಲ ಹುಲಿವೇಷ ತಂಡಗಳನ್ನು ಒಟ್ಟು ಮಾಡಿದ ಗೌರವವೂ ಈ ಸ್ಪರ್ಧೆಗೆ ಸಲ್ಲುತ್ತದೆ.
ತುಳುನಾಡಿನ ಆಚರಣೆಗಳು ಭಕ್ತಿ, ನಂಬಿಕೆಯೊಂದಿಗಿರುವ ಕಾರಣ ದೇವರ, ದೈವಗಳ ಚಿಂತನೆಯನ್ನು ನಮ್ಮ ಹಿರಿಯರು ಕೊಟ್ಟರು. ಸಂಕಷ್ಟ ಬಂದಾಗ ಹುಲಿವೇಷ ಹಾಕುವ ಹರಕೆ ಹೇಳುತ್ತಿದ್ದರು. ಇಂತಹ ಕಲೆಗೆ ಸ್ಪರ್ಧಾತ್ಮಕ ಮನೋಭಾವ ಕೊಟ್ಟು ಪ್ರೋತ್ಸಾಹಿಸಿದ ಕುಡ್ಲ ಪಿಲಿಪರ್ಬದ ರೂವಾರಿ, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯವನ್ನು ಸಂಸದರು ಶ್ಲಾಘಿಸಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಪಿಲಿಪರ್ಬ ತುಳುನಾಡಿನ ಗತವೈಭವದ ಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನಿತಾ ಪೂಜಾರಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಕಾರ್ಯದರ್ಶಿ ಉದಯ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಮುಖಂಡ ನಿತಿನ್ ಕುಮಾರ್, ಮುಖಂಡರಾದ ಹರಿಕೃಷ್ಣ ಬಂಟ್ವಾಳ, ನರೇಶ್ ಶೆಣೈ, ತೀರ್ಪುಗಾರರಾದ ಕಮಲಾಕ್ಷ ಬಜಿಲಕೇರಿ, ನವನೀತ ಶೆಟ್ಟಿ ಕದ್ರಿ, ಕೆ.ಕೆ. ಪೇಜಾವರ, ಪಿ.ಎಸ್. ವೆಂಕಟೇಶ್ ಭಟ್, ರೋಹನ್ ತೊಕ್ಕೊಟ್ಟು, ನವೀನ್ ಕುಮಾರ್ ಮತ್ತಿತರರಿದ್ದರು.
ಮೋದಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು: ಸಚಿವ ಎಚ್.ಕೆ. ಪಾಟೀಲ್
ನಿತೇಶ್ ಎಕ್ಕಾರು ಮತ್ತು ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆ ಬಳಿಕ ಪಿಲಿಪರ್ಬ-2023 ಸ್ಪರ್ಧಾಕೂಟದ ಮೊದಲ ತಂಡವಾಗಿ ಶಿವಶಕ್ತಿ ಟೈಗರ್ಸ್ ಕುಂಜತ್ತೂರು, ಮಂಜೇಶ್ವರ ತಂಡ ಪ್ರದರ್ಶನ ನೀಡಿತು. ಸುಮಾರು 15 ಹುಲಿ ವೇಷ ತಂಡಗಳಿಂದ ದಿನಪೂರ್ತಿ ಪ್ರದರ್ಶನ ಏರ್ಪಟ್ಟಿತು.