ಹೂವಿನಹಡಗಲಿ(ಏ.18): ತಾಲೂಕಿನ ಸೋವೇನಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಯುವಕರು ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಸೋವೇನಹಳ್ಳಿ ಗ್ರಾಮದ ಎಂ. ಸುರೇಶ (25), ಪಿ. ಮಾರುತಿ (23) ಹಾಗೂ ಹಂಪಸಾಗರ ಗ್ರಾಮದ ಪಿ. ಫಕ್ರುದ್ದೀನ್‌ (25) ಮೃತರಾಗಿದ್ದಾರೆ. ಮೃತ ಫಕ್ರುದ್ದೀನ್‌ ಹಂಪಸಾಗರದಿಂದ ಸೋವೇನಹಳ್ಳಿ ಗ್ರಾಮದ ಮಾಬುಸಾಬ್‌ ಎಂಬ ಸಂಬಂಧಿಕರ ಮನೆಗೆ ಶುಕ್ರವಾರ ಬೆಳಗ್ಗೆ ಬಂದಿದ್ದಾನೆ. 

ಕಲಬುರಗಿಯಿಂದ ಬಂದ ಪೊಲೀಸ್‌ ಪೇದೆಗೆ ಕೆಮ್ಮು-ಜ್ವರ: ಆತಂಕದಲ್ಲಿ ಗ್ರಾಮಸ್ಥರು!

ಮಧ್ಯಾಹ್ನದ ವೇಳೆಗೆ 4 ಜನ ಯುವಕರು, ನದಿಗೆ ಸ್ನಾನಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಈಜು ಬಾರದ ಫಕ್ರುದ್ದೀನ್‌ ನೀರಿನಲ್ಲಿ ಮುಳುಗುತ್ತಿರುವಾಗ, ಮಾರುತಿ, ಸುರೇಶ ರಕ್ಷಣೆಗೆ ಹೋಗಿದ್ದರು. ಅವರು ಕೂಡಾ ನೀರು ಪಾಲಾಗಿದ್ದಾರೆ. ಉಳಿದ ಮಾಬುಸಾಬ್‌ ದಡದಲ್ಲಿ ನಿಂತು ಜನರನ್ನು ರಕ್ಷಣೆಗಾಗಿ ಕೂಗಾಡಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್‌ ವಿಜಯಕುಮಾರ, ಸಿಪಿಐ ಮಹಾಂತೇಶ ಕೂನಬೇವು, ತಾಪಂ ಇಒ ಯು.ಎಚ್‌. ಸೋಮಶೇಖರ ಮತ್ತು ಅಗ್ನಿಶಾಮಕ ಸಿಬ್ಬಂದಿಯ ನೇತೃತ್ವದಲ್ಲಿ ಶವ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.