ಸಾಲು ಸಾಲು ರಜೆ: ಹಂಪಿಗೆ ಹರಿದು ಬಂದ ಪ್ರವಾಸಿಗರ ದಂಡು..!
ಮೂರು ದಿನದಲ್ಲಿ 8 ಸಾವಿರ ಟೂರಿಸ್ಟ್| ಸ್ಮಾರಕಗಳ ಸೊಬಗು ಸವಿದ ಪ್ರವಾಸಿಗರು| ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಬಳಿ ಕೊರೋನಾ ಬಗ್ಗೆ ಅರಿವು ಮೂಡಿಸಲಾಗುತ್ತಿದೆ| ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿ ಹೇಳಲಾಗುತ್ತಿದೆ|
ಹೊಸಪೇಟೆ(ನ.02): ಈದ್ ಮಿಲಾದ್, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ನಿಮಿತ್ತ ರಜೆ ಹಾಗೂ ಭಾನುವಾರ ವೀಕೆಂಡ್ ಜತೆಗೆ ಕನ್ನಡ ರಾಜ್ಯೋತ್ಸವ ಇದ್ದುದ್ದರಿಂದ ಕಳೆದ ಮೂರು ದಿನಗಳಿಂದ ಹಂಪಿಗೆ ಎಂಟು ಸಾವಿರ ಪ್ರವಾಸಿಗರು ಹರಿದು ಬಂದಿದ್ದಾರೆ.
ಅದರಲ್ಲೂ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಪ್ರವಾಸಿಗರು ಹರಿದು ಬಂದಿದ್ದಾರೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ವೀಕ್ಷಣೆಗೆ ಶನಿವಾರ ಎರಡು ಸಾವಿರ ಜನ ಬಂದಿದ್ದು, ಭಾನುವಾರ ಮೂರು ಸಾವಿರ ಜನ ಹರಿದು ಬಂದಿದ್ದಾರೆ.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ ಮಂಟಪ, ಕಡಲೆ ಕಾಳು ಗಣೇಶ ಮಂಟಪ, ಶ್ರೀ ಕೃಷ್ಣ ದೇಗುಲ, ಹಜಾರ ರಾಮ ದೇಗುಲ, ಆನೆಲಾಯ, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನತೇರು, ಪುರಂದರ ಮಂಟಪ, ವರಾಹ ದೇಗುಲ, ರಾಮ, ಲಕ್ಷ್ಮಣ ದೇಗುಲ, ಸುಗ್ರೀವ ಗುಹೆ ಸೇರಿದಂತೆ ನಾನಾ ದೇಗುಲ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮಾರ್ಗದರ್ಶಕರಿಂದ ಮಾಹಿತಿ ಪಡೆದರು. ಬಿರುಬಿಸಿಲನ್ನು ಲೆಕ್ಕಿಸದೇ ಪ್ರವಾಸಿಗರು ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿ ಪ್ರವಾಸೋದ್ಯಮ ಚೇತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಹೋಟೆಲ್ ಉದ್ಯಮ ಸೇರಿದಂತೆ ಆಟೋ, ಟ್ಯಾಕ್ಸಿ ಚಾಲಕರಿಗೂ ಉದ್ಯೋಗ ದೊರಕಿದಂತಾಗಿದೆ. ಕೊರೋನಾದಿಂದ ಸಂಕಷ್ಟದಲ್ಲಿದ್ದ ಆಟೋ ಚಾಲಕರು, ಗೈಡ್‌ಗಳು ಹಾಗೂ ವ್ಯಾಪಾರಿಗಳಿಗೂ ಪ್ರವಾಸೋದ್ಯಮದಿಂದ ಅನುಕೂಲವಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಪರ್ಕ ತರಗತಿ ರದ್ದು
ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಬಳಿ ಕೊರೋನಾ ಬಗ್ಗೆ ಅರಿವು ಕೂಡ ಮೂಡಿಸಲಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿ ಹೇಳಲಾಗುತ್ತಿದೆ.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲು ಸಹಕಾರಿಯಾಗಿದೆ ಎನ್ನುತ್ತಾರೆ ಹಂಪಿ ನಿವಾಸಿ ಬಸವರಾಜ್.
ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬೆಂಗಳೂರಿನಿಂದ ಬಂದಿದ್ದೇವೆ. ವೀಕೆಂಡ್ ಹಿನ್ನೆಲೆ ಬಂದಿದ್ದೇವೆ. ಫ್ರೆಂಡ್ಸ್ ಜತೆ ಬೈಕ್‌ನಲ್ಲಿ ಬಂದಿರುವೆ. ಎಂಟು ಜನರ ತಂಡ ಬಂದಿದ್ದೇವೆ ಎಂದು ಪ್ರವಾಸಿ ಯಶಸ್ ತಿಳಿಸಿದ್ದಾರೆ.