Asianet Suvarna News Asianet Suvarna News

ಕೊರೋನಾ ಆತಂಕ: ಕಿರಾಣಿ ಅಂಗಡಿಗಳಿಗೆ ಬೀಗಮುದ್ರೆ

ಮಾಸ್ಕ್‌ ಧರಿಸದೇ ವ್ಯಾಪಾರದಲ್ಲಿ ತೊಡಗಿದ್ದ 3 ಕಿರಾಣಿ ಅಂಗಡಿಗೆ ಬೀಗಮುದ್ರೆ| ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರ ಗ್ರಾಮ| ಕನ್ನಡಪ್ರಭ ವರದಿಗೆ ಎಚ್ಚೆತ್ತ ಗ್ರಾಮ ಪಂಚಾಯಿತಿ, ತಾಲೂಕಾಡಳಿತ| ಮಾಸ್ಕ್‌ ಧರಿಸದೇ ಕಿರಾಣಿ, ತರಕಾರಿ ಖರೀದಿಗೆ ಮುಗಿಬೀಳುತ್ತಿದ್ದ ಜನತೆ|

Three Shops Seal for Violation LockDown order in Ron in Gadag district
Author
Bengaluru, First Published Apr 18, 2020, 8:57 AM IST

ಪಿ.ಎಸ್‌.ಪಾಟೀಲ

ರೋಣ(ಏ.18): ಕೊರೋನಾ ಮಾಹಾಮಾರಿ ತಡೆಗೆ ಜಾರಿಗೊಳಿಸಿದ ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮತ್ತು ಗ್ರಾಹಕರಲ್ಲಿ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್‌ ಧರಿಸದೇ ವ್ಯಾಪಾರದಲ್ಲಿ ತೊಡಗಿದ್ದರಿಂದ ತಾಲೂಕಿನ ಹುಲ್ಲೂರ ಗ್ರಾಮದ 3 ಕಿರಾಣಿ ಅಂಗಡಿಗಳಿಗೆ ಸ್ಥಳೀಯ ಗ್ರಾಪಂ ಬೀಗ ಮುದ್ರೆ(ಸೀಲ್‌) ಜಡಿದು, ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿದ್ದಾರೆ.

‘ಕನ್ನಡಪ್ರಭ’ ಮಾ. 17ರಂದು ‘ಹುಲ್ಲೂರಲ್ಲಿ ಲಾಕ್‌ಡೌನ್‌ ನಿಯಮಕ್ಕೆ ಡೋಂಟ್‌ಕೇರ್‌’ ಎಂದು ಸಚಿತ್ರ ವರದಿ ಪ್ರಕಟಿಸಿ ಅಲ್ಲಿನ ಅವಾಂತರ ತೆರೆದಿಟ್ಟಿತ್ತು. ಈ ವರದಿಗೆ ಸ್ಪಂದಿಸಿದ ಸ್ಥಳೀಯ ಗ್ರಾಪಂ ಮತ್ತು ಗ್ರಾಪಂ ಮಟ್ಟದ ಕೊರೋನಾ ನಿಯಂತ್ರಣ ಟಾಸ್ಕ್‌ ಪೋರ್ಸ್‌ ಸಮಿತಿ ಶುಕ್ರವಾರ ಗ್ರಾಮದಾದ್ಯಂತ ಸಂಚರಿಸಿ ಕೊರೋನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ, ಮಾಸ್ಕ್‌ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತು.

ಕೋವಿಡ್‌ ವಿರುದ್ಧ ಹೋರಾಟ: ತೋಂಟದಾರ್ಯ ಮಠದಿಂದ 10 ಲಕ್ಷ ರು. ಚೆಕ್‌

ಮೇ 3 ಲಾಕ್‌ಡೌನ್‌ ಅವಧಿ ಮುಗಿಯುವ ವರೆಗೂ ಈ 3 ಅಂಗಡಿಗಳನ್ನು ತೆರೆಯುವಂತಿಲ್ಲ. ಮೇ 3ರ ಬಳಿಕ ಗ್ರಾಪಂ ಪರವಾನಗಿ ಪಡೆದು ಅಂಗಡಿ ತೆರೆಯಬೇಕೆಂದು ಕಿರಾಣಿ ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿದ್ದಾರೆ. ಜತೆಗೆ ಗ್ರಾಮದಲ್ಲಿ ಇನ್ನುಳಿದ ಕಿರಾಣಿ ಅಂಗಡಿಗಳಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಖರೀದಿಸಬೇಕು. ಯಾರಾದರೂ ಅಸಡ್ಡೆ ತೋರಿಸಿದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಿಡಿಒ ದಯಾನಂದ ಅಡವಿ ತಾಕೀತು ಮಾಡಿದರು.

ಲಾಠಿ ಹಿಡಿದ ಪಿಡಿಒ, ಆಶಾಗಳು:

ಅನಾವಶ್ಯಕವಾಗಿ ಮನೆಯಿಂದ ಹೊರ ಬರುವ ಜನರನ್ನು ಚದುರಿಸಲು ಪೊಲೀಸರೊಂದಿಗೆ ಪಿಡಿಒ ದಯಾನಂದ ಅಡವಿ ಮತ್ತು ಆರೋಗ್ಯ ಇಲಾಖೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಲಾಠಿ ಹಿಡಿದು ಬೀದಿಗಿಳಿದರು. ಗ್ರಾಮದ ಪ್ರತಿಯೊಂದು ಓಣಿ, ಬಡಾವಣೆ, ಕಾಲೋನಿ ಸುತ್ತಿ ಜನರಲ್ಲಿ ಜಾಗೃತಿ ಮೂಡಿಸಿದರು.

‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ವರದಿ ವಾಸ್ತವತೆಯಿಂದ ಕೂಡಿದ್ದು, ಈ ಪತ್ರಿಕೆಯನ್ನು ಹಿಡಿದುಕೊಂಡೇ ಗ್ರಾಮದಾದ್ಯಂತ ಸಂಚರಿಸಿ, ಜನರಿಗೆ ಪತ್ರಿಕೆಯಲ್ಲಿ ಬಂದಿರುವ ವರದಿ ತೋರಿಸಿಯೇ ಲಾಕ್‌ಡೌನ್‌ ನಿಯಮ ಪಾಲಿಸುವಂತೆ ತಾಕೀತು ಮಾಡಲಾಗಿದೆ. ಹೊರ ರಾಜ್ಯದಿಂದ ಬಂದವರು ಅವಧಿಗೂ ಮುನ್ನ ಕ್ವಾರಂಟೈನ ಉಲ್ಲಂಘಿಸಿದಲ್ಲಿ ಮತ್ತು ಸಾರ್ವಜನಿಕರು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದಲ್ಲಿ, ಅಂಥವರನ್ನು ಬೇರೆಡೆ ಸ್ಥಳಾಂತರಿಸಿ ಕ್ವಾರಂಟೈನಲ್ಲಿ ಇಡಲಾಗುವುದು ಎಂದು ಪಿಡಿಒ ದಯಾನಂದ ಅಡವಿ ತಿಳಿಸಿದರು.

ಹುಲ್ಲೂರ ಗ್ರಾಮದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್‌ ಧರಿಸದೇ ಜನತೆ ಕಿರಾಣಿ, ತರಕಾರಿ ಖರೀದಿಗೆ ಮುಗಿಬೀಳುತ್ತಿರುವ ಕುರಿತು, ಜನತೆ ಗುಂಪುಗುಂಪಾಗಿ ಗುಡಿ, ಗುಂಡಾರಗಳಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಕುರಿತು, ಹೊರ ರಾಜ್ಯದಿಂದ ಬಂದವರು ಕ್ವಾರಂಟೈನಲ್ಲಿರದೇ ಎಲ್ಲೆಂದರಲ್ಲಿ ಸುತ್ತಾಡಿ ಆತಂಕ ಮೂಡಿಸಿದ್ದರು.
 

Follow Us:
Download App:
  • android
  • ios