ಜೇವರ್ಗಿ(ಸೆ.17): ಸುರಪುರದಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಕಾರು ತಾಲೂಕಿನ ಮುದವಾಳ (ಕೆ) ಕ್ರಾಸ್‌ ಹತ್ತಿರ ಭೀಕರ ರಸ್ತೆ ಅಪಘಾತಕೀಡಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿ, ಒಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಸಂಭವಿಸಿದೆ.

ಯಾದಗಿರಿ ಜಿಲ್ಲೆಯ ಸುರಪುರದಿಂದ ಕಲಬುರಗಿ ನಗರಕ್ಕೆ ತೆರಳುತ್ತಿದ್ದಾಗ ಕಲಬುರ್ಗಿ ಜಿಲ್ಲೆಗೆ ಸ್ವಾಗತ ಕೋರುವ ಕಮಾನ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಚಾಲಕ ರಮೇಶ (40), ಅನೀತಾ(42), ಅನೀತಾ ಅವರ ಪುತ್ರ ಹೇಮಂತ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಲಬುರಗಿ: ಪ್ರವಾಹದಲ್ಲಿ ಕೊಚ್ಚಿ ಹೋದ ತಹಸೀಲ್ದಾರ್‌

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನೀತಾ ಅವರ ಪತಿ ಸಂತೋಷಕುಮಾರ ರಾಜಲಬಂಡಾ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಸಗರನಾಡು ಅನುದಾನಿತ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳು ನಾಲ್ವರು ಮೂಲತ: ಸುರಪುರ ಪಟ್ಟಣದ ಜಲಾಲ ಮೋಹಲಾ ನಿವಾಸಿಗಳೆಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ತಾಯಪ್ಪ ದೊಡ್ಡಮನಿ, ಜೇವರ್ಗಿ ಸಿಪಿಐ ರಮೇಶ ರೊಟ್ಟಿ, ಕಲಬುರಗಿ  ಮಹಿಳಾ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಿದ್ಧರಾಮೇಶ ಗಡೇದ್‌ ಜೇವರ್ಗಿ ಠಾಣೆಯ ಪಿಎಸ್‌ಐ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.