ಕಲಬುರಗಿ: ಪ್ರವಾಹದಲ್ಲಿ ಕೊಚ್ಚಿ ಹೋದ ತಹಸೀಲ್ದಾರ್
ನೀರಲ್ಲಿ ಕೊಚ್ಚಿ ಹೋಗಿ ಮರವೇರಿಳಿತ ತಹಸೀಲ್ದಾರ್ ರಕ್ಷಣೆ| ಕಲಬುರಗಿ ಜಿಲ್ಲೆಯ ಚಿಂಚೋಳ್ಳಿಯ ಗಣಾಪೂರ ಗ್ರಾಮದಲ್ಲಿ ನಡೆದ ಘಟನೆ| ಹಳ್ಳದಲ್ಲಿರುವ ಮರವೇರಿ ಕುಳಿತ ತಹಸೀಲ್ದಾರ್ ಪಂಡಿತ ಬಿರಾದಾರ್| ತಹಸೀಲ್ದಾರ್ ಅವರನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ|
ಕಲಬುರಗಿ(ಸೆ.17): ಮಳೆ ಪ್ರವಾಹದಿಂದ ಕೂಡಿದ್ದ ಹಳ್ಳವೊಂದನ್ನು ದಾಟುತ್ತಿದ್ದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿನ ತಹಸೀಲ್ದಾರ್ ಅವರ ಕಾರು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳ್ಳಿಯ ಗಣಾಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಾರಿನಲ್ಲಿದ್ದ ತಹಸೀಲ್ದಾರ್ ಪಂಡಿತ ಬಿರಾದಾರ್ ಹಳ್ಳದಲ್ಲಿರುವ ಮರವೇರಿ ಕುಳಿತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದವರು ರಾತ್ರಿ ವೇಳೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಗಿದ್ದು ಏನು?
ತಹಸೀಲ್ದಾರ್ ಅವರು ಬುಧವಾರ ಚಿಂಚೋಳ್ಳಿಯಿಂದ ತಮ್ಮ ಸ್ವಂತ ಊರಾದ ಗಣಾಪೂರಕ್ಕೆ ಹೊರಟ್ಟಿದ್ದರು. ಕಳೆದ ಮೂರು ನಾಲ್ಕು ದಿನದಿಂದ ನಿರಂತರ ಮಳೆಯಾಗುತ್ತಿರುವ ಕಾರಣ ಹಳ್ಳದಲ್ಲಿನ ನೀರು ಬ್ರಿಜ್ ಮೇಲೆ ಹರಿಯುತ್ತಿತ್ತು. ಸ್ಥಳದಲ್ಲಿದ್ದ ಸ್ಥಳೀಯರು ತಹಸೀಲ್ದಾರ್ ಅವರಿಗೆ ಕಾರಿನಲ್ಲಿ ಬ್ರಿಜ್ ಮೇಲೆ ಹೋಗದಂತೆ ಹೇಳಿದ್ದಾರೆ. ಆದರೆ, ತಹಸೀಲ್ದಾರ್ ಅವರು ಆತ್ಮವಿಶ್ವಾಸದಿಂದ ಕಾರನ್ನು ಚಾಲನೆ ಮಾಡಿಕೊಂಡು ಬ್ರಿಜ್ ಮೇಲೆ ಹೋಗಿದ್ದಾರೆ. ಆದರೆ, ನೀರಿನ ರಭಸದಿಂದಾಗಿ ಬ್ರಿಜ್‌ನಲ್ಲಿ ಹೋಗುತ್ತಿರುವಾಗಲೇ ಕಾರು ಕೊಚ್ಚಿಹೋಗಿದೆ.
4 ವೈದ್ಯ ಕಾಲೇಜುಗಳಿಗೆ 8.2 ಕೋಟಿ ದಂಡ: ಹೈಕೋರ್ಟ್ ಮಹತ್ವದ ಆದೇಶ
ಈ ಘಟನೆ ಸಾಯಂಕಾಲ 6.30ರ ಸಮಯದಲ್ಲಿ ನಡೆದಿದೆ. ಸುಮಾರು 150 ಮೀ. ದೂರದಲ್ಲಿ ತಹಸೀಲ್ದಾರ್ ಅವರು ಮರವೇರಿ ಕುಳಿತಿದ್ದರು. ಈ ಬಗ್ಗೆ ಮೊಬೈಲ್ ಮೂಲಕ ಅವರು ಮಾಹಿತಿ ನೀಡಿದ್ದು, ರಕ್ಷಿಸುವ ಕಾರ್ಯ ಆರಂಭವಾಗಿತ್ತು. ತಹಸೀಲ್ದಾರ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ ವೇಳೆ ರಕ್ಷಣೆ ಮಾಡಿದ್ದಾರೆ.