ಹಾನಗಲ್ಲ(ಏ.05):  ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ಮುಳುಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಂತಗಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಅಖ್ತರ್‌ರಜಾ ಯಳವಟ್ಟಿ(16), ಅಹ್ಮದ್‌ರಜಾ ಅಂಚಿ (16) ಹಾಗೂ ಸಾಹಿಲ್‌ ಡೋಂಗ್ರಿ (17) ಮೃತಪಟ್ಟಬಾಲಕರು. ನಾಲ್ವರು ಸ್ನೇಹಿತರು ಸೇರಿ ಗ್ರಾಮದ ಬಳಿ ಇರುವ ಕಟ್ಟೆ ಕೆರೆಗೆ ಈಜಲು ಹೋಗಿದ್ದರು. ಒಬ್ಬರಿಗೂ ಈಜು ಬರುತ್ತಿರಲಿಲ್ಲ. ಆಳ ತಿಳಿಯದೇ ಮುಂದಕ್ಕೆ ಹೋಗಿ ಮೂವರೂ ಮುಳುಗಿದ್ದಾರೆ. ಹಿಂದಿದ್ದ ಒಬ್ಬಾತ ಸ್ನೇಹಿತರು ಮುಳುಗುತ್ತಿರುವುದನ್ನು ನೋಡಿ ಗಾಬರಿಗೊಂಡು ದಡಕ್ಕೆ ಬಂದಿದ್ದಾನೆ. ತಕ್ಷಣ ಗ್ರಾಮದವರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಹೋಗಿ ನೋಡುವ ವೇಳೆಗೆ ಮೂವರು ಬಾಲಕರು ಮುಳುಗಿ ಮೃತಪಟ್ಟಿದ್ದರು.

ನನಗೆಷ್ಟೇ ನೋವಾದ್ರೂ ಮುಜುಗರ ತರುವ ಹೇಳಿಕೆ ನೀಡಲಿಲ್ಲ ಎಂದ ಸಚಿವ

ಬಾಲಕರ ಮೃತದೇಹವನ್ನು ಸ್ಥಳೀಯರು ಹೊರಕ್ಕೆ ತಂದಿದ್ದಾರೆ. ವಿಷಯ ತಿಳಿದ ಹಾನಗಲ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಬೇಸಿಗೆಯಾದ್ದರಿಂದ ವಿಪರೀತ ಸೆಕೆಯಾಗುತ್ತಿದ್ದು, ಮಕ್ಕಳು ಈಜಲು ತೆರಳಿದ್ದರು ಎಂದು ಪಾಲಕರು ಕಣ್ಣೀರಿಡುತ್ತಿದ್ದಾರೆ.