Asianet Suvarna News Asianet Suvarna News

ಕಲಬುರಗಿ: ಈಜಲು ಹೋದ ಮೂವರು ಬಾಲಕರ ದುರ್ಮರಣ

ವಿಜಯಪುರದ ಮೂವರು ವಿದ್ಯಾರ್ಥಿಗಳು ನೀರುಪಾಲು|ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕು ಬೆಳಕೋಟಾ ಬಳಿ ಗಂಡೋರಿ ಜಲಾಶಯದಲ್ಲಿ ದುರಂತ| ಜಲಸಮಾಧಿಯಾದ 3 ಬಾಲಕರು ಇಂಡಿ ತಾಲೂಕು ಸತ್ಯಸಾಯಿ ಪ್ರೇಮನಿಕೇತನ ಶಾಲೆಯ ಮಕ್ಕಳು|

Three Children Dead in Dam in Kalaburagi District
Author
Bengaluru, First Published Jan 1, 2020, 1:35 PM IST

ಕಲಬುರಗಿ(ಜ.01): ಜಿಲ್ಲೆಯ ಕಮಲಾಪುರ ತಾಲೂಕಿನ ಬೆಳಕೋಟಾ ಸಮೀಪದಲ್ಲಿರುವ ಗಂಡೋರಿ ನಾಲಾ ಜಲಾಶಯದ ನೀರಲ್ಲಿ ಈಜಲು ಹೋಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮೂವರು ಬಾಲಕರು ಮುಳುಗಿ ದಾರುಣವಾಗಿ ಸಾವಿಗೀಡಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಹೊಸ ವರುಷದ ಮುನ್ನಾ ದಿನವೇ ಸಂಭವಿಸಿರುವ ಈ ಘೋರ ದುರಂತದಲ್ಲಿ ಸಾವಿಗೀಡಾದ ನತದೃಷ್ಟ ಬಾಲಕರನ್ನು ಮಂಜುನಾಥ ಯಾದವಾಡ (15), ಶುಭಮ್‌ ಹೊಸೂರ್‌ (15) ಹಾಗೂ ಲಕ್ಷ್ಮಣ ಡೋಣೂರ ದೇವರಹಿಪ್ಪರಗಿ (14) ಎಂದು ಗುರುತಿಸಲಾಗಿದೆ. ಈ ಬಾಲಕರೆಲ್ಲರೂ ಇಂಡಿ ತಾಲೂಕಿನ ಅಂಜುಟಗಿಯಲ್ಲಿರುವ ಸತ್ಯಸಾಯಿ ಪ್ರೇಮನಿಕೇತನ ವಸತಿ ಶಾಲೆಯಲ್ಲಿ ಕ್ರಮವಾಗಿ 9ನೇ ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತ್ಯಸಾಯಿ ಪ್ರೇಮ ನಿಕೇತನ ವಸತಿ ಶಾಲೆಯಿಂದ ಒಟ್ಟು 96 ಮಕ್ಕಳು ಡಿ. 25 ರಂದೇ ಕಮಲಾಪುರದಲ್ಲಿರುವ ಸತ್ಯಸಾಯಿ ವಿಶ್ವವಿದ್ಯಾಲಯ ಕ್ಯಾಂಪಸ್‌ ಭೇಟಿಗೆ ಆಗಮಿಸಿದ್ದರು. ಎಲ್ಲ ಮಕ್ಕಳು ಹಾಗೂ ಅವರ ಜೊತೆ ನಾಲ್ವರು ಶಿಕ್ಷಕರು ಮಂಗಳವಾರ ಮಧ್ಯಾಹ್ನ 2.30 ಗಂಟೆ ಹೊತ್ತಿಗೆ ಕಮಲಾಪುರ ಸಮೀಪದಲ್ಲಿರುವ ಬೆಳಕೋಟಾ ಹತ್ತಿರದ ಗಂಡೋರಿ ನಾಲಾ ಜಲಾಶಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಮಕ್ಕಳು ಜಲಾಶಯದ ಹಿನ್ನೀರಲ್ಲಿ ಈಜಲು ಹೋಗಿದ್ದು ಈ ದುರಂತ ಸಂಭವಿಸಲು ಕಾರಣವಾಗಿದೆ.

ಗ್ರಾಮೀಣ ಸಿಪಿಐ ಹಾಗೂ ಹೆಚ್ಚಿನ ಪೊಲೀಸರು ಗಂಡೋರಿ ನಾಲಾ ಜಲಾಶಯದ ಸ್ಥಳಕ್ಕೆ ಧಾವಿಸಿದ್ದಾರೆ. ನೀರಲ್ಲಿ ಮುಳುಗಿರುವ ಮೂವರು ಬಾಲಕರ ಶವಗಳು ಹೊರಗೆ ತೆಗೆಯಲಾಗಿದೆ.

ಈಜಲು ಹೋಗಿಯೇ ಈ ದುರಂತ ಸಂಭವಿಸಿದೆ. ಗಂಡರಿ ನಾಲಾ ಹಿನ್ನೀರು ತುಂಬ ಆಳವಾಗಿದೆ. ಇವರೆಲ್ಲರಿಗೂ ಜಲಾಶಯದ ಹಿನ್ನೀರಿನ ಆಳ, ಸೆಳೆತದ ಅರಿವೇ ಇಲ್ಲ. ಹೀಗಿದ್ದರೂ ನೀರಲ್ಲಿ ಧುಮುಕಿದ್ದೇ ದುರಂತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಮಹಾಗಾಂವ್‌ ಠಾಣೆಯಲ್ಲಿ ಪೊಲೀಸರು ಸದರಿ ದುರಂತ ಬೆಳವಣಿಗೆಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಕೋಟಾ ಗಂಡೋರಿ ಜಲಾಶಯದಲ್ಲಿ ಮುಳುಗಿರುವ ಇಂಡಿ ತಾಲೂಕು ಅಂಜುಟಗಿ ಸತ್ಯಸಾಯಿ ಪ್ರೇಮನಿಕೇತನ ವಸತಿ ಶಾಲೆಯ 9ನೇ ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದ ಮೂವರ ಮಕ್ಕಳ ಶವ ತಕ್ಷಣ ಹೊರತೆಗೆಯಲಾಯಿತು. 
 

Follow Us:
Download App:
  • android
  • ios