ಭೀಮಣ್ಣ ಗಜಾಪುರ

ಕೂಡ್ಲಿಗಿ(ಮೇ.18): ಕೂಲಿ ಮಾಡಲು ಕರ್ನಾಟಕಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಸ್ಲಿಂ ಕುಟುಂಬವೊಂದು ಕಳೆದ 15 ವರ್ಷಗಳಿಂದ ತಾಲೂಕಿನ ತಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಫೆಬ್ರವರಿಯಲ್ಲಿ 3 ಮಕ್ಕಳನ್ನು ಇಲ್ಲಿಯೇ ಬಿಟ್ಟು ಯಾವುದೋ ಕೆಲಸಕ್ಕೆ ತಮ್ಮ ತವರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಕೂಲಿ ಕಾರ್ಮಿಕನಿಗೆ ಕೊರೋನಾ ಎಫೆಕ್ಟ್‌ನಿಂದ ವಾಪಸ್‌ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳನ್ನು ಬಿಟ್ಟು 3 ತಿಂಗಳು ಒದ್ದಾಡಿದ ತಂದೆ ಕೊನೆಗೆ ವಾರದ ಹಿಂದೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.

ಇತ್ತ ಕೂಡ್ಲಿಗಿ ತಾಲೂಕು ತಾಯಕನಹಳ್ಳಿಯಲ್ಲಿರುವ ಮಕ್ಕಳು ಮೊಬೈಲ್‌ ಮೂಲಕವೇ ತಂದೆಯ ಅಂತ್ಯಸಂಸ್ಕಾರವನ್ನು ನೋಡಿದ್ದಾರೆ. ಈ ಮೂರು ಮಕ್ಕಳ ಜೀವನ ಇಂದಿಗೂ ಅತಂತ್ರ ಪರಿಸ್ಥಿತಿಯಲ್ಲಿದೆ.
ಪಶ್ಚಿಮ ಬಂಗಾಳದ ಮಧುಪುರ ಗುಲ್ಡ್‌ ಬಾ ಗ್ರಾಮದ ಅಬ್ದುಲ್‌ ಅಲೀಂ ಮತ್ತು ಅವರ ಪತ್ನಿ ಪರ್ಷಿಯಾ 15 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕರ್ನಾಟಕಕ್ಕೆ ಬಂದು ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ತಂದೆ ಗಾರೆ ಕೆಲಸ ಮಾಡಿದರೆ, ತಾಯಿ ಮನೆಗೆಲಸ ಮಾಡಿಕೊಂಡು ನೆಮ್ಮದಿಯಾಗಿದ್ದರು. 

ಲಾಕ್‌ಡೌನ್‌: ಹಸಿದವರ ಹೊಟ್ಟೆ ತುಂಬಿಸುತ್ತಿರುವ ಕೊಟ್ಟೂ​ರು​ಸ್ವಾಮಿ ಮಠ​..!

​ಫೆಬ್ರವರಿ ತಿಂಗಳಲ್ಲಿ ತನ್ನ ತಾಯಿಯನ್ನು ನೋಡಲು ಹೆಂಡತಿ ಜತೆ ಅಬ್ದುಲ್‌ ಅಲೀಂ ತಮ್ಮ ಮೂವರು ಹೆಣ್ಣು ಮಕ್ಕಳನ್ನು ತಾಯಕನಹಳ್ಳಿಯಲ್ಲಿಯೇ ಬಿಟ್ಟು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ಎಫೆಕ್ಟ್‌ನಿಂದಾಗಿ ದಂಪತಿಗೆ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ. 

ಇತ್ತ ತಾಯಕನಹಳ್ಳಿಯಲ್ಲಿ ಮೂರು ಮಕ್ಕಳು ತಂದೆ, ತಾಯಿಗಾಗಿ ಪರಿತಪಿಸುತ್ತಿದ್ದರು. ಅತ್ತ ದಂಪತಿ ಮೂರು ಮಕ್ಕಳನ್ನು ಬಿಟ್ಟು ಪಶ್ಚಿಮ ಬಂಗಾಳದಲ್ಲಿಯೇ ಪರಿತಪಿಸುತ್ತಿದ್ದರು. 3 ತಿಂಗಳಾದರೂ ಇಲ್ಲಿಗೆ ಬರಲಾಗಲಿಲ್ಲ. ಇದರಿಂದ ನೊಂದ ತಂದೆಗೆ ಗುರುವಾರ ಹೃದಯಘಾತವಾಗಿ ಪಶ್ಚಿಮ ಬಂಗಾಳದಲ್ಲಿ ಕೊನೆಯುಸಿರೆಳೆ​ದಿ​ದ್ದಾ​ರೆ. ಇತ್ತ ಕರ್ನಾಟಕದಲ್ಲಿದ್ದ 3 ಮಕ್ಕಳು ಮೊಬೈಲ್‌ ಮೂಲಕವೇ ತನ್ನ ತಂದೆಯ ಮೃತದೇಹವನ್ನು, ಅಂತ್ಯಸಂಸ್ಕಾರವನ್ನು ನೋಡುವ ದುರಾದೃಷ್ಟ ಎದುರಾಯಿತು.

ಅನಾಥ ಮಕ್ಕಳಿಗೆ ಆಶ್ರಯ ನೀಡಿದ ಗನಿಸಾಬ್‌

ತಂದೆಯನ್ನು ಕಳೆದುಕೊಂಡು ತಾಯಕನಹಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ಅನಾಥವಾಗಿದ್ದ 3 ಮಕ್ಕಳನ್ನು ಈಗ್ಗೆ ಎರಡು ದಿನಗಳ ಹಿಂದೆ ಅದೇ ಗ್ರಾಮದ ಮುಖಂಡ ಗನಿಸಾಬ್‌ ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿ ಸದ್ಯ ಮೂರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. 18 ವರ್ಷದ ಜನಾತುನ್‌ ಪಿರ್ದೋಜ್‌, 17 ವರ್ಷದ ಹಕ್ಲೀಮಾ ಬಳ್ಳಾರಿಯ ಮದ್ರಾಸಾದಲ್ಲಿ ಅಭ್ಯಾಸ ಮಾಡುತ್ತಿದ್ದು, ಇನ್ನೋರ್ವ ಮಗಳು 14 ವರ್ಷದ ರಹಿಮಾ ಬಿಸ್ವಾಸ್‌ ಇದೇ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಇನ್ನಿಬ್ಬರು ಹೆಣ್ಣು ಮಕ್ಕಳ ವಿವಾಹವಾಗಿದ್ದು, ಪಶ್ಚಿಮ ಬಂಗಾಳದಲ್ಲೇ ಸಂಸಾರ ನಡೆಸುತ್ತಿದ್ದಾರೆ.

ನಮ್ಮ ಅಜ್ಜಿಗೆ ಆರಾಮ ಇದ್ದಿ​ಲ್ಲ. ನಮ್ಮ ತಂದೆ ಮತ್ತು ತಾಯಿ ನೋಡಿಕೊಂಡು ಬರೋಣ ಅಂತ ಫೆಬ್ರವರಿ ತಿಂಗಳಲ್ಲಿ ಹೋಗಿದ್ರು, ಕೊರೋನಾ ಲಾಕ್‌ಡೌನ್‌ನಿಂದ ನಮ್ಮಪ್ಪ ನಮ್ಮಲ್ಲಿಗೆ ಬರಲಾಗ್ಲಿಲ್ಲ, ನಮ್ಮತ್ರ ಬರ್ಲಿಕ್ಕೆ ಆಗ್ಲಿಲ್ಲ ಎಂದು ನೊಂದಿದ್ರು, ಗುರುವಾರ ಹೃದಯಾಘಾತದಿಂದ ತಂದೆ ಸತ್ರೂ, ನಮ್ಮನೆ ನೋಡು ಪುಣ್ಯ ಸಿಗ್ಲಿಲ್ಲ, ಬಹಳ ದುಃಖ ಆಗ್ತಿದೆ, ವಾಟ್ಸ್‌ಆ್ಯಪ್‌ ನಲ್ಲಿಯೇ ಅಂತ್ಯಸಂಸ್ಕಾರ ನೋಡು ಹಾಗಾಯಿತು ಎಂದು ತಾಯಕನಹಳ್ಳಿಯಲ್ಲಿರುವ ಮಗಳು ಹಕ್ಲೀಮಾ ತನ್ನ ದುಃಖ ತೋಡಿಕೊಂಡಿದ್ದಾಳೆ. 

ಅಬ್ದುಲ್‌ ಅಲೀಂ ನಮ್ಮ ಕುಟುಂಬದ ಸದಸ್ಯನಂತೆ ನಮ್ಮ ಜತೆ ಒಡನಾಟವಿದ್ದ, ಊರಲ್ಲಿ ಗಾರೆ ಕೆಲ್ಸ ಮಾಡ್ತಾ ಜೀವನ ಮಾಡ್ತಿದ್ದ, ಆತ ಮಕ್ಕಳನ್ನು ನೋಡಲು ಸಾಧ್ಯವಾಗದೇ ಪಶ್ಚಿಮ ಬಂಗಾಳದಲ್ಲಿ ಅಸು ನೀಗಿದ್ದು ನನಗೂ ದುಃಖ ತಂದಿದೆ. ಆತನ ಪತ್ನಿ ಬರುವವರೆಗೂ ನನ್ನ ಮನೆಯಲ್ಲಿಯೇ ಮೂರು ಮಕ್ಕಳನ್ನು ಕರೆದುಕೊಂಡು ಬಂದು ಯೋಗಕ್ಷೇಮ ನೋಡಿಕೊಳ್ತೀನಿ ಎಂದು ತಾಯಕನಹಳ್ಳಿ ಗ್ರಾಮದ ಮುಖಂಡಗ ನಿಸಾಬ್‌ ಅವರು ಹೇಳಿದ್ದಾರೆ.