ಗೋಕರ್ಣ ದೇವಾಲಯ ಆಡಳಿತಾಧಿಕಾರಿ ಮೇಲೆ ಆ್ಯಸಿಡ್ ದಾಳಿಗೆ ಸಿದ್ಧತೆ?
ಶಾಂತವಾಗಿದ್ದ ಕಾರವಾರ ಜಿಲ್ಲೆಯಲ್ಲಿಯೂ ಇಂಥ ದಾಖಲಾಗುತ್ತಿರುವ ಪ್ರಕರಣಗಳು ನಿಜಕ್ಕೂ ಆತಂಕ ಹುಟ್ಟಿಸಿದೆ. ದೇವಾಲಯದ ಆಡಳಿತಾಧಿಕಾರಿ ಮೇಲೆ ಆ್ಯಸಿಡ್ ದಾಳಿಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಾರವಾರ[ಜ.06] ಗೋಕರ್ಣದ ಮಹಾಬಲೇಶ್ವರ ದೇವಾಲಯದ (ರಾಮಚಂದ್ರಾಪುರ ಮಠದ) ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಜಿ. ಕೆ. ಹೆಗಡೆ ಅವರ ಮೇಲೆ ಆ್ಯಸಿಡ್ ದಾಳಿ ಮಾಡಲು ಸಂಚು ನಡೆದಿದೆ ಎಂದು ಪೊಲೀಸ್ ದೂರು ದಾಖಲಾಗಿದೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಜಿ.ಕೆ ಹೆಗಡೆ ಅಮಾವಾಸ್ಯೆ ರಥೋತ್ಸವ ಮುಗಿಸಿ ದೇವಾಲಯದಿಂದ ನಿವಾಸಕ್ಕೆ ನಡೆದು ಹೋಗುತ್ತಿರುವಾಗ ವಿಶ್ವನಾಥ, ಫಣಿರಾಜ್ ಗೋಪಿ ಎಂಬುವರು ಬೈಕಿನಲ್ಲಿ ಬಂದು ಹೆಗಡೆಯವರೇ, ನಿಮಗೆ ಆ್ಯಸಿಡ್ ಹಾಕಲು ಗೋಕರ್ಣದಲ್ಲಿ ತಯಾರಿ ನಡೆದಿದೆ . ಆಸಿಡ್ ಬಾಟಲಿಯನ್ನು ತಂದು ಇಟ್ಟಿದ್ದಾರೆ . ಇದರಲ್ಲಿ ಗೋಕರ್ಣದ ಕೆಲವರು ಇದ್ದಾರೆ. ನೀವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿ ಹೋಗಿದ್ದಾರೆ.
ಇದಾದ ಮೇಲೆ ಹೆಗಡೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿ ದೂರು ದಾಖಲಿಸಿದ್ದಾರೆ . ಈ ಹಿಂದೆ ನಕಲಿ ಸಿಡಿ ಕೇಸಿನಲ್ಲಿ ದೂರು ದಾಖಲಿಸಿದಾಗ ಜಿ .ಕೆ. ಹೆಗಡೆ ಅವರಿಗೆ ಕೊಲೆ ಬೆದರಿಕೆ ಬಂದಿತ್ತು ಮತ್ತು ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿಯೂ ಸಹ ಜೀವ ಬೆದರಿಕೆ ಕರೆ ಬಂದಿತ್ತು .
ರಾಮಚಂದ್ರಾಪುರ ಮಠದ ಆಡಳಿತದಲ್ಲಿ ಮಹಾಬಲೇಶ್ವರ ದೇವಾಲಯವು ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದ ವಿರೋಧಿಗಳು ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಇಲ್ಲಿನ ಕಾರ್ಯಕರ್ತರ ಧೃತಿಗೆಡಿಸಲು ಈ ರೀತಿಯ ಷಡ್ಯಂತ್ರ ರೂಪಿಸಿರಬಹುದು ಎಂದು ಜಿ.ಕೆ.ಹೆಗಡೆ ಆರೋಪಿಸಿದ್ದಾರೆ.