ಸಣ್ಣಪುಟ್ಟ ತಪ್ಪು ಮಾಡಿದ ಕುಟುಂಬಗಳಿಗೆ ಸಾವಿರಾರು ರೂಪಾಯಿ ದಂಡ: ಬರಿಸದಿದ್ದರೆ ಗ್ರಾಮದಿಂದ ಸಾಮಾಜಿಕ ಬಹಿಷ್ಕಾರ!
ಈ ಗ್ರಾಮದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಸಾಮಾಜಿಕ ಬಹಿಷ್ಕಾರ ಎನ್ನುವುದು ಸಾಮಾನ್ಯ ಎನ್ನುವಂತೆ ಆಗಿದೆ. ಇಲ್ಲಿನ ಕೆಲವು ವ್ಯಕ್ತಿಗಳ ಕಾನೂನು ಬಾಹಿರ ನಿರ್ಧಾರಗಳಿಗೆ ಜನಸಾಮಾನ್ಯರ ಬದುಕು ನಲುಗಿ ಹೋಗುತ್ತಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.26): ಈ ಗ್ರಾಮದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಸಾಮಾಜಿಕ ಬಹಿಷ್ಕಾರ ಎನ್ನುವುದು ಸಾಮಾನ್ಯ ಎನ್ನುವಂತೆ ಆಗಿದೆ. ಇಲ್ಲಿನ ಕೆಲವು ವ್ಯಕ್ತಿಗಳ ಕಾನೂನು ಬಾಹಿರ ನಿರ್ಧಾರಗಳಿಗೆ ಜನಸಾಮಾನ್ಯರ ಬದುಕು ನಲುಗಿ ಹೋಗುತ್ತಿದೆ. ಅಂತಹ ವಿಚಿತ್ರ ಸಾಮಾಜಿಕ ಬಹಿಷ್ಕಾರಗಳಿಗೆ ಒಳಗಾಗಿ ಮೂರು ಕುಟುಂಬಗಳು ಪರದಾಡುತ್ತಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹರಗ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಪ್ರತೀ ಬೀದಿಗೊಂದು ಸಮಿತಿ ಇದ್ದರೆ, ಇಡೀ ಗ್ರಾಮಕ್ಕೆ ಒಂದು ಸಮಿತಿ ಇದೆ. ಈ ಸಮಿತಿಗಳು ಗ್ರಾಮದಲ್ಲಿ ಯಾರೇ ಸಣ್ಣಪುಟ್ಟ ತಪ್ಪು ಮಾಡಿದರೂ ಸಾವಿರಾರು ರೂಪಾಯಿ ದಂಡ ಹಾಕುತ್ತವೆ. ಈ ದಂಡ ಬರಿಸದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗುತ್ತದೆ.
ಬಹಿಷ್ಕಾರ ಹಾಕಿದರೆಂದರೆ ಆ ಕುಟುಂಬಗಳ ಮನೆಗಳಿಗೆ ಯಾರೂ ಹೋಗುವಂತಿಲ್ಲ, ಬರುವಂತಿಲ್ಲ. ಆ ಕುಟುಂಬದ ಯಾರೂ ಊರಿನ ಯಾರ ಮನೆಗೂ ಹೋಗುವಂತಿಲ್ಲ. ಅಷ್ಟೇ ಏಕೆ ಊರಿನ ಯಾರೂ ಇವರನ್ನು ಮಾತನಾಡಿಸುವಂತಿಲ್ಲ, ಇವರು ಯಾರನ್ನು ಮಾತನಾಡಿಸುವಂತೆ ಇಲ್ಲ. ಯಾವುದೇ ಒಂದು ವಸ್ತುವನ್ನು ಖರೀದಿಸುವಂತಿಲ್ಲ, ಕೊಡುವಂತೆಯೂ ಇಲ್ಲ. ಅದು ಎಷ್ಟರ ಮಟ್ಟಿನ ಬಹಿಷ್ಕಾರ ಎಂದರೆ ಕುಡಿಯುವ ನೀರನ್ನೂ ಇವರಿಗೆ ಕೊಡುವಂತೆ ಇಲ್ಲ. ಇಷ್ಟೊಂದು ಕಟ್ಟುನಿಟ್ಟಿನ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತಿದೆ. ವಿವಿಧ ಕಾರಣಗಳಿಗೆ ಮೂರು ಕುಟುಂಬಗಳಿಗೆ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಇಂಚಗೇರಿ ಸಾಂಪ್ರದಾಯದ ನಿಂಬಾಳ ಆಶ್ರಮದಲ್ಲಿ RSS ಮೋಹನ್ ಭಾಗವತ್ ವಾಸ್ತವ್ಯ: ಕಾರಣವೇನು?
ರುದ್ರಪ್ಪ, ಸಾವಿತ್ರಿ ಹಾಗೂ ಗಿರೀಶ್ ಎಂಬುವರ ಮೂರು ಕುಟುಂಬಗಳಿಗೆ ಕಳೆದ ಹಲವು ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. ರುದ್ರಪ್ಪ ಎಂಬುವರ ಮಗ ಕಳೆದ 20 ವರ್ಷಗಳ ಹಿಂದೆ ದೇವಸ್ಥಾನದ ಒಳಗೆ ಹೋಗಿದ್ದನಂತೆ. ಇದನ್ನೇ ಗುರಿಯಾಗಿಸಿಕೊಂಡ ಗ್ರಾಮದ ಸಮಿತಿ 80 ಸಾವಿರ ದಂಡ ಹಾಕಿದ್ದರಂತೆ. ಆದರೆ ಅವರ ಮಗ ಇದನ್ನು ಮನೆಯವರಿಗೆ ಹೇಳದೆ ಇದ್ದಿದ್ದರಿಂದ ಮತ್ತು ರುದ್ರಪ್ಪ ಅವರು ಇಲಾಖೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬೇರೆ ಊರಿನಲ್ಲಿ ಇದ್ದಿದ್ದರಿಂದ ಇದು ಅವರಿಗೆ ಗೊತ್ತೇ ಆಗಿಲ್ಲ. ಆದರೆ ನಿವೃತ್ತಿ ನಂತರ ಕಳೆದ ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದಾಗ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ತಿಳಿಯಿತು.
ಸಂಬಂಧಿಕರೊಬ್ಬರು ಅವರ ಮನೆಯ ಮದುವೆ ಆಮಂತ್ರಣ ನೀಡಲು ಬಂದವರು ಆಮಂತ್ರಣಪತ್ರ ನೀಡದೆ ನಿಮ್ಮನ್ನು ಬಹಿಷ್ಕಾರ ಹಾಕಿರುವುದರಿಂದ ಆಮಂತ್ರಣ ಪತ್ರ ಕೊಡುವುದಿಲ್ಲ ಎಂದು ಹೇಳಿ ಹೋದರು. ಇದೀಗ ಕಳೆದ ಒಂದು ತಿಂಗಳ ಹಿಂದೆ ಯಾರನ್ನೂ ಮಾತನಾಡಿಸದಂತೆ ಕಟ್ಟುನಿಟ್ಟಿನ ನಿಯಮ ಹೇರಿದ್ದಾರಂತೆ. ಇದು ಇವರ ಕಥೆಯಾದರೆ 7 ವರ್ಷಗಳ ಹಿಂದೆ ತಮ್ಮ ಅಣ್ಣ ಜಮೀನಿನಲ್ಲಿ ಬಾಳೆಗೊನೆ ಕದ್ದಿದ್ದಾನೆ ಎಂದು ಅಂದು ಸಾವಿತ್ರಿ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು. ಇಂದಿಗೂ ಈ ಕುಟುಂಬ ಬಹಿಷ್ಕಾರದಲ್ಲೇ ಕಣ್ಣೀರ ಬದುಕು ದೂಡುತ್ತಿದ್ದಾರೆ. ಮಗದೊಂದೆಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕಾಫಿ ಬೆಳೆದರು ಎಂಬ ಕಾರಣಕ್ಕೆ ಗ್ರಾಮದ ಗಿರೀಶ್ ಎಂಬುವರ ಕುಟುಂಬಕ್ಕೆ 80 ಸಾವಿರ ದಂಡ ವಿಧಿಸಲಾಗಿದೆಯಂತೆ.
ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 7 ಮಂದಿ ಬಂಧನ, 5 ಮಕ್ಕಳ ರಕ್ಷಣೆ, ಆರೋಗ್ಯ ಇಲಾಖೆ ಶಾಮೀಲು
ದಂಡ ಕಟ್ಟುವುದಿಲ್ಲ ಎಂದಿದ್ದಕ್ಕೆ ಕಳೆದ ಒಂದು ವರ್ಷದಿಂದ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರದ ವಿರುದ್ಧ ಪೊಲೀಸ್, ಕಂದಾಯ ಇಲಾಖೆಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಈ ಮೂರು ಕುಟುಂಬಗಳು ಬಹಿಷ್ಕಾರದಿಂದ ನೊಂದು ಸಾಕಾಗಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಗೂ ದೂರು ನೀಡಿದ್ದಾರೆ. ವಿಪರ್ಯಾಸವೆಂದರೆ ಸಿಎಂ ಆಗಲಿ, ಡಿಸಿಎಂ ಆಗಲಿ ಗೃಹಸಚಿವರಾಗಲಿ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಈ ಕುಟುಂಬಗಳು ಒಂದೆಡೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೆ ಮತ್ತೊಂದೆಡೆ ಸರ್ಕಾರದಿಂದಲೂ ಉತ್ತರ ಸಿಗದೆ ಕಣ್ಣೀರಿಡುವಂತೆ ಆಗಿದೆ.