Asianet Suvarna News Asianet Suvarna News

ಉಡುಪಿಯಲ್ಲಿ ಮೊಳಗಿದ ಸಾಮರಸ್ಯ ನಡಿಗೆ ಸಹಬಾಳ್ವೆ ಉದ್ಘೋಷ

* ಉಡುಪಿಯಲ್ಲಿ ನಡೆದ ಸಾಮರಸ್ಯ ನಡಿಗೆ ಸಹಬಾಳ್ವೆ ಸಮಾವೇಶ
* ರಾಜ್ಯದ ಮೂಲೆ ಮೂಲೆಗಳಿಂದ ಜನರು ಭಾಗಿ
* ಮೊಳಗಿದ ಸಾಮರಸ್ಯ ನಡಿಗೆ ಸಹಬಾಳ್ವೆ ಉದ್ಘೋಷ

thousands of Peoples participated In sahabalve conference at udupi rbj
Author
Bengaluru, First Published May 14, 2022, 10:36 PM IST

ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ, (ಮೇ.14):
ಹಿಜಾಬ್ ವಿವಾದದ ಮೂಲಕ ಧರ್ಮ ಸಂಘರ್ಷ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ಸಮಾನಮನಸ್ಕ ಸಂಘಟನೆಗಳು ಸೌಹಾರ್ದ ಸಮಾವೇಶ ಸಹಬಾಳ್ವೆ ಜಾತಾ ನಡೆಸಿವೆ. ಉಡುಪಿಯ ಹುತಾತ್ಮ ವೇದಿಕೆಯಲ್ಲಿ ಮಧ್ಯಾಹ್ನ ಆರಂಭವಾದ ಕಾರ್ಯಕ್ರಮ ರಾತ್ರಿ 9 ಗಂಟೆಯವರೆಗೆ ನಡೆದು ಕಾರ್ಯಕ್ರಮದುದ್ದಕ್ಕೂ ಸೌಹಾರ್ದವನ್ನು ಪಠಿಸಲಾಯ್ತು. 

ಕಳೆದ ಡಿಸೆಂಬರ್ ತಿಂಗಳ ಅಂತ್ಯ ಭಾಗದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ಹೋರಾಟದ ನಂತರ ಇದು ರಾಜ್ಯಾದ್ಯಂತ ವ್ಯಾಪಿಸಿತು. ಉಡುಪಿಯ ಕಾಪುವಿನ ಜಾತ್ರೆಯಲ್ಲಿ ಶುರುವಾದ ವ್ಯಾಪಾರ ಬಹಿಷ್ಕಾರ,ಮುಂದೆ ಜಿಲ್ಲೆ ಜಿಲ್ಲೆಗಳಿಗೆ ವರ್ಗಾಯಿಸಲ್ಪಟ್ಟಿತು. ಜಾತ್ರೆಗಳಲ್ಲಿ ಸಂಘರ್ಷ ಹಲಾಲ್ ,ಆಜಾನ್  ಇತರ ಬೇರೆಬೇರೆ ಮಗ್ಗಲುಗಳನ್ನು ಪಡೆದು ಮನಸ್ತಾಪಗಳು ಉಂಟಾಯ್ತು.

ಇದೆಲ್ಲವನ್ನು ಹೊರತುಪಡಿಸಿ ಸಮಾಜದಲ್ಲಿ ಸಾಮರಸ್ಯ ಬೆಸೆಯಬೇಕು ಎಂಬ ಉದ್ದೇಶದಿಂದ ರಾಜ್ಯದ ಹತ್ತಾರು ಪ್ರಗತಿಪರ, ದಲಿತ  ಸಂಘಟನೆಗಳು ಸಹಬಾಳ್ವೆ ಸಮಾವೇಶವನ್ನು ಆಯೋಜಿಸಿತ್ತು. ಹಿಜಾಬ್ ವಿವಾದ ಆರಂಭವಾದ ಉಡುಪಿಯಲ್ಲೇ ಈ ಸಮಾವೇಶವನ್ನು ನಡೆಸಿದ್ದು ಗಮನಸೆಳೆಯಿತು.

ಸಂವಿಧಾನ, ಕಾನೂನಿಗೆ ತಲೆಬಾಗಿದ ಮುಸ್ಲಿಂ ಸಮುದಾಯ: ಇನ್ಮುಂದೆ ಕೇಳಿಸಲ್ಲ ಆಜಾನ್ ಕೂಗು

ನಾಡಿನ ಬೇರೆ ಬೇರೆ ಧಾರ್ಮಿಕ ಮುಖಂಡರು ಸಾಮಾಜಿಕ ಚಿಂತಕರು, ಪ್ರಗತಿಪರರು, ರಾಜಕೀಯ ಮುಖಂಡರುಗಳು ಸಮಾವೇಶದಲ್ಲಿ ಭಾಗಿಯಾದರು. ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 5 ಕಿಲೋಮೀಟರ್ ಗಳ ಪಾದಯಾತ್ರೆ ನಡೆಯಿತು .ಸೌಹಾರ್ದ ಬೆಸೆಯುವ ಘೋಷವಾಕ್ಯಗಳು, ಸೌಹಾರ್ದ ಸಾರುವ ಟ್ಯಾಬ್ಲೋಗಳ ಮೂಲಕ ಮೆರವಣಿಗೆ ನಡೆಸಲಾಯಿತು. ನಗರದ ಮಿಷನ್ ಕಂಪೌಂಡ್ ನಲ್ಲಿ ಇರುವ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಯಿತು. 

ಈ ಸಮಾವೇಶದಲ್ಲಿ 5 ಸಾವಿರಕ್ಕೂ ಮಿಕ್ಕಿಜನರು ಭಾಗಿಯಾಗಿದ್ದರು. ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ದೆಹಲಿಯ ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್ ಭಾಗಿಯಾಗಿ ನೇರವಾಗಿ ಹೆಸರು ಹೇಳದೆ ಕೇಂದ್ರ ಸರ್ಕಾರದ ಕಿವಿ ಹಿಂಡಿದರು. 

ಉಡುಪಿಯಿಂದಲೇ ದ್ವೇಷದ ಸಂದೇಶ ಹೊರಟಿತು. ಕರಾವಳಿ ಏನು ಭಿತ್ತಿದರೂ ಉತ್ತಮ ಫಸಲು ನೀಡುತ್ತದೆ. ಏನು ಬಿತ್ತಿದರೂ ಬಂಗಾರದ ಬೆಳೆ ಸಿಗುತ್ತದೆ ಅಂತ ಕೆಲವರು ದ್ವೇಷದ ಬೀಜ ಬಿತ್ತಿದ್ದಾರೆ. ಕರ್ನಾಟಕದಲ್ಲಿ ದ್ವೇಷದ ಬೀಜದಿಂದ ಫಸಲು ಹುಟ್ಟುವುದಿಲ್ಲ. ಮಂದಿರ ಇಲ್ಲೇ ಮಾಡ್ತೇವೆ ಅಂತಾರೆ, ನಾವು ಸೌಹಾರ್ದ ಇಲ್ಲಿಂದಲೇ ಆರಂಭ ಅನ್ನೋಣ. ಅವರು ದೇಶ ಒಡೆಯುತ್ತಾರೆ ನಾವು‌ ಜೋಡಿಸೋಣ. ಒಡೆಯುವ ಜನರು ಈ ದೇಶದಲ್ಲಿ ಎರಡನೇ ದರ್ಜೆಯ ಜನರನ್ನು ತಯಾರಿಸ ಬಯಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎನ್ನುತ್ತಾರೆ. ಕನ್ನಡ ಹಿಂದಿಗಿಂತಲೂ ಪುರಾತನ ಭಾಷೆ. ಹಿಂದಿ ಈ ದೇಶದ ಮಾಲಕ ಆಗಲು ಸಾಧ್ಯವಿಲ್ಲ‌. ರಾಜ್ಯದ ಭಾಷೆಗಳು ಈ ದೇಶದಲ್ಲಿ ಬಾಡಿಗೆದಾರರಲ್ಲ. ಈ ದೇಶದಲ್ಲಿ ಯಾರೂ ಎರಡನೇ ದರ್ಜೆಯ ನಾಗರಿಕರಲ್ಲ. ಎಲ್ಲರೂ ಮನೆಯ ಮಾಲಕರೇ, ಬಾಡಿಗೆದಾರರಿಲ್ಲ ಎಂದರು.

ಸೆಕ್ಯುಲರಿಸಂ ಅಂದ್ರೆ ಏನು ಅಂತ ಕೇಳ್ತಾರೆ. ಸೆಕ್ಯುಲರಿಸಂ ಈ ದೇಶದ ಸ್ವಧರ್ಮ. ಅಧಿಕಾರದ ಕುರ್ಚಿಯಲ್ಲಿ‌ ಕುಳಿತವರು ತಾವೇ ದೇವರು ಅಂತ ಭಾವಿಸಿದ್ದಾರೆ. ದೇಶ ಅವರು ಅಧಿಕಾರ ಹಿಡಿಯುವ ಹಿಂದೆಯೂ ನಡೆಯುತ್ತಿತ್ತು‌ ಮುಂದೆಯೂ ನಡೆಯುತ್ತದೆ. ದೇಶಪ್ರೇಮ ದೇಶದ್ರೋಹದ ಬಗ್ಗೆ ದೇಶದಲ್ಲಿ ಬಹಳ ಚರ್ಚೆ ಯಾಗುತ್ತಿದೆ. ಯಾರು ದೇಶದ್ರೋಹಿಗಳು ಅಂತ ಜನ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಹಿಂದೂ ಕ್ರೈಸ್ತ ಮುಸಲ್ಮಾನ ಸಿಖ್ ಧರ್ಮಗುರುಗಳು ಈ ಸಮಾವೇಶದಲ್ಲಿ ಹಿತವಚನ ನೀಡಿದರು. ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಸೌಹಾರ್ದ ಗೀತೆಗಳನ್ನು ಹಾಡಿದರು. ಸಮಾವೇಶದಲ್ಲಿ ಅನೇಕ ಪುಸ್ತಕಗಳು ಬಿಡುಗಡೆಯಾದವು. ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಉದ್ದಕ್ಕೂ ಹಿಜಾಬ್ ಸೇರಿದಂತೆ ಯಾವುದೇ ವಿವಾದಗಳನ್ನು ಪ್ರಸ್ತಾಪಿಸದೆ ಸೌಹಾರ್ದತೆಯ ಸಂದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

Follow Us:
Download App:
  • android
  • ios