ನಂಜನಗೂಡು(ಜು.24): ಜುಬಿಲಿಯಂಟ್‌ ಕಾರ್ಖಾನೆಯಿಂದ ಪಡೆದ ಆಹಾರ ಕಿಟ್‌ಗಳನ್ನು ಬಿಜೆಪಿ ಕಾರ್ಯಕರ್ತರು ದುರುಪಯೋಗ ಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪುಷ್ಟಿನೀಡುವಂತೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಆಹಾರ ಕಿಟ್‌ಗಳು ಪಕ್ಷದ ಮುಖಂಡರೊಬ್ಬರಿಗೆ ಸೇರಿದ ಕಲ್ಯಾಣ ಮಂಟಪದಲ್ಲಿ ಪತ್ತೆಯಾಗಿದೆ.

ಜುಬಿಲಿಯಂಟ್‌ ಕಾರ್ಖಾನೆ ನಿರ್ಲಕ್ಷದಿಂದಾಗಿ ನಂಜನಗೂಡು ಕೊರೋನಾ ಹಾಟ್‌ಸ್ಪಾಟ್‌ ಎಂದೇ ಬಿಂಬಿತವಾಗಿ ಜನಜೀವನಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಅಲ್ಲಿವರೆವಿಗೆ ಕಾರ್ಖಾನೆ ಬಾಗಿಲು ತೆರೆಯದಂತೆ ಕ್ರಮವಹಿಸುವಂತೆ ಶಾಸಕ ಬಿ. ಹರ್ಷವರ್ಧನ್‌ ಒತ್ತಾಯಿಸಿದ್ದರು. ಕಡೆಗೆ ಜುಬಿಲಿಯಂಟ್‌ ಕಾರ್ಖಾನೆ ಮಾಲೀಕರೊಂದಿಗೆ ಸಂಧಾನವೇರ್ಪಟ್ಟು 10 ಗ್ರಾಮಗಳನ್ನು ದತ್ತು ಪಡೆಯುವುದು ಮತ್ತು ಕ್ಷೇತ್ರದ ಜನತೆಗೆ 50 ಸಾವಿರ ಆಹಾರ ಕಿಟ್‌ ವಿತರಿಸಬೇಕೆಂದು ಮಾತುಕತೆಯಾಗಿತ್ತು.

ಯಲ್ಲಾಪುರದಲ್ಲಿ ಅಪರೂಪದ ಮಿಲಿಟರಿ ಆಮೆ..!

ಆದರೆ ಕ್ಷೇತ್ರದಾದ್ಯಂತ ಬರೀ ಬಿಜೆಪಿ ಮುಖಂಡರಿಗೆ ಕಾರ್ಯಕರ್ತರಿಗೆ ಮಾತ್ರ ಆಹಾರ ಕಿಟ್‌ ವಿತರಿಸಲಾಗುತ್ತಿದೆ, ಬಡಜನರಿಗೆ ಆಹಾರ ಕಿಟ್‌ ತಲುಪುತ್ತಿಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಆರೋಪಿಸಿದ್ದರು. ಅಲ್ಲದೆ ಕೆಲ ಜಿಪಂ ಕ್ಷೇತ್ರಗಳಲ್ಲಿ ಮಾತ್ರ ಆಹಾರ ಕಿಟ್‌ ವಿತರಿಸಲಾಗಿತ್ತು. ಬದನವಾಳು ಜಿಪಂ ಕ್ಷೇತ್ರ ಕೌಲಂದೆ ಜಿಪಂ ಕ್ಷೇತ್ರ ನಗರದ 31 ವಾರ್ಡ್‌ಗಳಲ್ಲಿ ಆಹಾರಕಿಟ್‌ ವಿತರಣೆ ಮಾಡಿಲ್ಲ.

ಈ ಮಧ್ಯೆ ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ ಒಡೆತನದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಆಹಾರ ಕಿಟ್‌ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ನಗರಾಧ್ಯಕ್ಷರು ತಾವೇ ವಿತರಣೆ ಮಾಡುತ್ತಿರುವುದಾಗಿ ಬಿಂಬಿಸಿಕೊಳ್ಳುವ ಸಲುವಾಗಿ ಮತ್ತು ಬರೀ ಬಿಜೆಪಿ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಿಟ್‌ ದುರುಪಯೋಗ ಆಗಿಲ್ಲ

ಈ ಬಗ್ಗೆ ಶಾಸಕ ಬಿ. ಹರ್ಷವರ್ಧನ್‌ ಸ್ಪಷ್ಟನೆ ನೀಡಿದ್ದು, ಜುಬಿಲಿಯಂಟ್‌ ಕಾರ್ಖಾನೆಯಿಂದ ಪಡೆದ ಆಹಾರಕಿಟ್‌ ದುರುಪಯೋಗವಾಗಿಲ್ಲ, ಕಾರ್ಖಾನೆಯಿಂದ 22 ಸಾವಿರ ಆಹಾರಕಿಟ್‌ ಮಾತ್ರ ಬಂದಿದ್ದು, ಉಳಿದ 28 ಸಾವಿರ ಆಹಾರಕಿಟ್‌ ಬರಬೇಕಿದೆ ಕಾರ್ಖಾನೆಯಿಂದ ಪ್ರತಿ ದಿನ 500 ಕಿಟ್‌ ಪೂರೈಕೆಯಾಗುತ್ತಿದೆ ಪೂರೈಕೆಯಾದ ಆಹಾರಕಿಟ್‌ಗಳನ್ನು ಒಂದು ಕಡೆ ದಾಸ್ತಾನು ಮಾಡಿ ಪ್ರತಿ ಜಿಪಂ ಕ್ಷೇತ್ರಗಳಿಗೆ ವಿತರಣೆ ಮಾಡಲಾಗುತ್ತಿದ್ದೇವೆ. ಸರ್ಕಾರಿ ಗೋದಾಮಿನಲ್ಲಿಟ್ಟರೆ ದುರುಪಯೋಗವಾಗಬಹುದೆಂಬ ಉದ್ದೇಶದಿಂದ ನಾನೇ ಕಲ್ಯಾಣ ಮಂಟಪದಲ್ಲಿ ಇಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿಂದ ಗ್ರಾಮಗಳಿಗೆ ವಿತರಣೆ ಮಾಡಲಾಗುತ್ತಿದೆ, ಪ್ರತಿ ಬೂತ್‌ಗೆ 200 ರಂತೆ 224 ಬೂತ್‌ಗಳಿಗೂ ಸಹ ಹಂಚಿಕೆ ಮಾಡಲಾಗುತ್ತಿದೆ. ಎಷ್ಟುಕಿಟ್‌ ವಿತರಣೆಯಾಗಿದೆ ಎಂಬ ಬಗ್ಗೆ ದಾಖಲೆ ಇಟ್ಟುಕೊಂಡಿದ್ದು, ಇದರಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.