ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯದಲ್ಲಿ ಏಕಾಏಕಿ ನೀರು ಬಿಟ್ಟ ಕಾರಣ ಕಳೆದ 2019 ಹಾಗೂ 2021ರಲ್ಲಿ ಜನರು ಮನೆಗಳನ್ನು ಕಳೆದುಕೊಂಡು ಎರಡು ವರ್ಷಗಳಾಗುತ್ತಾ ಬಂದರೂ ಇಂದಿಗೂ ಪರಿಹಾರವನ್ನು ಮಾತ್ರ ಸರ್ಕಾರ ನೀಡಿಲ್ಲ. ಇದರಿಂದ ಸಂತ್ರಸ್ತರು ನ್ಯಾಯಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ನ.18): ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯದ ಸಮೀಪದಲ್ಲಿರುವ ಆ ಗ್ರಾಮದಲ್ಲಿ ಕಳೆದ 2019 ಹಾಗೂ 2021ರಲ್ಲಿ ಮಹಾಕಂಟಕವೇ ಎದುರಾಗಿತ್ತು. ಜಲಾಶಯದಲ್ಲಿ ಏಕಾಏಕಿ ನೀರು ಬಿಟ್ಟ ಕಾರಣ ದೊಡ್ಡ ಪ್ರಮಾಣದಲ್ಲಿಯೇ ನೆರೆ ಸೃಷ್ಠಿಯಾಗಿ ಹಲವರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಆದರೆ, ಜನರು ಮನೆಗಳನ್ನು ಕಳೆದುಕೊಂಡು ಎರಡು ವರ್ಷಗಳಾಗುತ್ತಾ ಬಂದರೂ ಇಂದಿಗೂ ಪರಿಹಾರವನ್ನು ಮಾತ್ರ ಸರ್ಕಾರ ನೀಡಿಲ್ಲ. ಇದರಿಂದ ಸಂತ್ರಸ್ತರು ನ್ಯಾಯಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದ ಸಮೀಪದಲ್ಲೇ ಇರುವ ಕಾರವಾರದ ಕದ್ರಾ ಗ್ರಾಮದಲ್ಲಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಬಿಟ್ಟಿದ್ದ ಹಿನ್ನೆಲೆ 2019 ಹಾಗೂ 2021ರಲ್ಲಿ ಭಾರೀ ಪ್ರಮಾಣದಲ್ಲಿ ನೆರೆ ಕಾಣಿಸಿಕೊಂಡಿತ್ತು. 2019ರಲ್ಲಿ ಮನೆಗಳನ್ನು ಕಳೆದುಕೊಂಡವರು ಸಾಲಸೂಲ ಮಾಡಿಕೊಂಡು ಕಷ್ಟಪಟ್ಟು ಮನೆಗಳನ್ನು ರಿಪೇರಿ ಮಾಡಿಸಿಕೊಂಡಿದ್ದರು. ಮತ್ತೆ 2021ರಲ್ಲಿ ಪ್ರವಾಹ ಕಾಣಿಸಿಕೊಂಡು ಮತ್ತೆ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಸಂತ್ರಸ್ತರು ಮನೆಗಳಿಲ್ಲದೇ ಬೀದಿಗೆ ಬಿದ್ದಿದ್ದು ಸರ್ಕಾರ ಮಾತ್ರ ಈ ವರೆಗೆ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಅತಿಕ್ರಮಣ ಭೂಮಿಯಲ್ಲಿ ಮನೆಗಳಿವೆ ಅನ್ನೋ ಒಂದೇ ಕಾರಣಕ್ಕೆ ಇನ್ನೂ ಪರಿಹಾರ ಬಿಡುಗಡೆ ಮಾಡದೇ ಸರ್ಕಾರ ನಿರ್ಲಕ್ಷ ವಹಿಸಿದ್ದು, ತಮಗೆ ನ್ಯಾಯಕೊಡಿ ಎಂದು ಸಂತ್ರಸ್ತರು ಪ್ರತಿನಿತ್ಯ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
Uttara Kannada ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕಾಳಿ ನೀರು ಪೂರೈಸುವ ಯೋಜನೆಗೆ ಆಕ್ಷೇಪ
ನೆರೆ ಕಾಣಿಸಿಕೊಂಡ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಹತ್ತು ಸಾವಿರ ರೂಪಾಯಿ ಹಣವನ್ನು ತಾಲೂಕು ಆಡಳಿತದಿಂದ ನೀಡಲಾಗಿತ್ತು. ಅಲ್ಲದೇ, ಮನೆ ಕಳೆದುಕೊಂಡವರಿಗೆ ಕದ್ರಾದಲ್ಲಿನ ಕೆಪಿಸಿ ಕಾಲೋನಿಯಲ್ಲಿದ್ದ ಹಳೆ ಮನೆಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು ಯಾವಾಗ ಮನೆಗಳನ್ನು ಬಿಡಿಸಿ ಕಳುಹಿಸುತ್ತಾರೋ ಗೊತ್ತಿಲ್ಲ. ಸರ್ಕಾರದಿಂದ ತಮಗೆ ಪರಿಹಾರ ಕೊಟ್ಟರೇ ನಾವು ಮನೆ ಕಟ್ಟಿಕೊಂಡು ಹೋಗುತ್ತೇವೆ ಎನ್ನುವುದು ನಿರಾಶ್ರಿತರ ಆಗ್ರಹ. ಇನ್ನು ವಿರ್ಜೆ ಗ್ರಾಮದ ಸುಮಾರು 37 ಕುಟುಂಬಗಳಿಗಂತೂ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ನಿಂದ ನಿರಾಶ್ರಿತರಿಗೆ ಕಳೆದ ಎರಡು ವರ್ಷದಿಂದ ಸಹಾಯವನ್ನು ಮಾಡುತ್ತಾ ಬರಲಾಗಿದ್ದು, ಸರ್ಕಾರವೇ ಶಾಶ್ವತ ಪರಿಹಾರವನ್ನು ಒದಗಿಸಬೇಕು ಅನ್ನೋದು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರ ಅಭಿಪ್ರಾಯ.
Uttara Kannada: ಕಾಳಿ ನದಿ ಜಾಕ್‌ವೆಲ್ ನಿರ್ಮಾಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಕಾಳಿ ನದಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದಲೇ ಮನೆಗಳನ್ನು ನಿರ್ಮಿಸುವ ಚಿಂತನೆಯನ್ನು ಕೂಡಾ ಜಿಲ್ಲಾಡಳಿತದಿಂದ ಮಾಡಲಾಗಿತ್ತು. ಆದರೆ, ಇಂದಿಗೂ ಯಾವ ಮನೆಯೂ ಕಟ್ಟಿಕೊಟ್ಟಿಲ್ಲ, ಪರಿಹಾರವೂ ನೀಡಿಲ್ಲ. ಜಲಾಶಯದ ಅಧಿಕಾರಿಗಳ ನಿರ್ಲಕ್ಷ್ಯದಿಂದಾದ ಪ್ರವಾಹಕ್ಕೆ ನಮ್ಮ ಮನೆಗಳನ್ನು ಕಳೆದುಕೊಳ್ಳುವಂತಾಗಿದ್ದು, ಇನ್ನಾದರೂ ಸರ್ಕಾರ ನಮ್ಮ ಬಗ್ಗೆ ಗಮನಹರಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿ ಎನ್ನುವುದು ನಿರಾಶ್ರಿತರ ಬೇಡಿಕೆ.
