Asianet Suvarna News Asianet Suvarna News

ಮಂಡ್ಯದ ಮಹಿಳೆಯರು ಸ್ಟ್ರಾಂಗು ಗುರೂ

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತಿಗೆ ಸಾಕಷ್ಟು ಸಾಕ್ಷ್ಯಗಳು  ನಮ್ಮಲ್ಲಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಮಂಡ್ಯದ ಜನವಾದಿ ಮಹಿಳಾ ಸಂಘಟನೆ

This is how mandya women clean-up tanks
Author
Bengaluru, First Published Aug 9, 2018, 4:55 PM IST

ಬರೋಬ್ಬರಿ 32,000 ಮಹಿಳೆಯರಿರುವ ಈ ಸಂಘಟನೆ ಇದುವರೆಗೂ ಸರಕಾರದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ದೊಡ್ಡ ಆಂದೋಲನವನ್ನೇ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಮನುಷ್ಯ ಸಂಘ ಜೀವಿಯಾಗಿ ಇರಬೇಕು ಎಂಬುದನ್ನೇ ಮೂಲ ಮಂತ್ರವಾಗಿಸಿಕೊಂಡು ಬಂದಿರುವ ಜನವಾದಿ ಮಹಿಳಾ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಸದಸ್ಯರ ಒಗ್ಗಟ್ಟಿನಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಸಿಗುತ್ತದೆ ಎನ್ನುವುದನ್ನು ಸಾಬೀತು ಪಡಿಸಿದೆ.

ಮಹಿಳೆಯರ ಸ್ವಾವಲಂಬನೆಯೇ ಮುಖ್ಯ ಉದ್ದೇಶ

ಉದ್ಯೋಗಂ ಪುರುಷ ಲಕ್ಷಣಂ ಎಂಬ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ ಸ್ತ್ರೀ ಕೂಡ ಉದ್ಯೋಗಸ್ಥಳಾಗಿ ಸಮಾನವಾಗಿ ದುಡಿಯುವ ಶಕ್ತಿ, ಯುಕ್ತಿ ಹೊಂದಿದ್ದಾಳೆ. ಈ ಹಿಂದೆಯೂ ಗ್ರಾಮೀಣ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಇರುತ್ತಿದ್ದರು. ಇದೇ ನಿಟ್ಟಿನಲ್ಲಿ ಚಿಂತನೆ ನಡೆಸಿದ ಜನವಾದಿ ಮಹಿಳಾ ಸಂಘಟನೆಯ ಮಂಡ್ಯ ಘಟಕವು ಜಿಲ್ಲೆಯಲ್ಲಿ 32,000 ಗ್ರಾಮೀಣ ಮಹಿಳೆಯರ ಸೇರಿಸಿಕೊಂಡು ಉದ್ಯೋಗ ಒದಗಿಸುವ ಮಹತ್ಕಾರ್ಯ ಮಾಡುತ್ತಿದೆ. ‘ಗ್ರಾಮೀಣ ಭಾಗದಲ್ಲಿ ಮಳೆ ಮತ್ತು ಅಂತರ್ಜಲ ಹೇರಳವಾಗಿದ್ದರೆ ಮಾತ್ರ ರೈತ ಮಹಿಳೆಯರಿಗೆ ಯಥೇಚ್ಛವಾಗಿ ಕೆಲಸ ಸಿಗುತ್ತವೆ. ಇಲ್ಲದೇ ಹೋದರೆ ರೈತ ಮಹಿಳೆಯರು ನಿರುದ್ಯೋಗದ ಬವಣೆಯಲ್ಲಿ ನಲುಗಬೇಕಾಗುತ್ತದೆ. ಇದೇ ಕಾರಣಕ್ಕೆ ನಾವು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ವನ್ನು ಬಳಕೆ ಮಾಡಿಕೊಂಡು ಹಳ್ಳಿಗಳ ಕೆರೆಗಳ  ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಈಗ ಮಹಿಳೆಯರಿಗೆ ಕೆಲಸದ ಜೊತೆಗೆ ನಾಳಿನ ಸಮಾಜಕ್ಕೆ ಕೊಡುಗೆ ನೀಡಿದಂತೆಯೂ ಆಗುತ್ತಿದೆ’ ಎನ್ನುತ್ತಾರೆ ಮಂಡ್ಯ ಜನವಾದ ಮಹಿಳಾ ಸಂಘಟನೆಯ ದೇವಿ.

45 ಕೆರೆಗಳಿಗೆ ಮರುಜೀವ

ನರೇಗಾ ಯೋಜನೆಯಲ್ಲಿ ರೂಪಿಸಲಾದ ಉದ್ಯೋಗವು ಮಹಿಳೆಯರ ಹಕ್ಕು. ಇದನ್ನು ಬಳಸಿಕೊಂಡು ಕೆರೆಗಳ ಸಂರಕ್ಷಣೆ ಮಾಡುವುದು ಹಾಗೂ ಅಂತರ್ಜಲ ವೃದ್ಧಿಸುವುದು ಇವರ ಮೂಲ ಆಶಯಗಲ್ಲಿ ಒಂದು. ಇದುವರೆಗೂ ಜಿಲ್ಲೆಯಲ್ಲಿ 45ಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಮೂಲಕ ಗ್ರಾಮೀಣ ಬದುಕಿನಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಈ ಧೀರೆಯರ ಹಿಂದೆ ಶಕ್ತಿಯಂತೆ ಕೆಲಸ ಮಾಡುತ್ತಿರುವುದು ಜಿಲ್ಲಾಧ್ಯಕ್ಷೆ ದೇವಿ. ಇವರೊಂದಿಗೆ ಸುನೀತಾ, ಸುಶೀಲಾ, ಶೋಭಾ, ಮಂಗಳ, ಪ್ರೇಮಮ್ಮ, ಪ್ರಮೀಳಾ ಅವರುಗಳೂ ಸಾಥ್ ನೀಡಿ, ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಶಕ್ತರಾಗುವಂತೆ ಮಾಡಿದ್ದಾರೆ

ಇದು ಸಂಘಟನೆಯ ಶಕ್ತಿ

‘ಮಹಿಳೆ ಅಬಲೆ ಅಲ್ಲ. ಎಲ್ಲಾ ಕೆಲಸವನ್ನೂ ಮಾಡುವ ಶಕ್ತಿ ಅವಳಲ್ಲಿದೆ. ಆದರೆ ಅವಕಾಶಗಳನ್ನು ಯಾರೂ ಕರೆದು ಕೊಡುವುದಿಲ್ಲ. ನಾವು ನಾವೇ ಸಂಘಟಿತರಾಗಿ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಖಂಡಿತವಾಗಿಯೂ ಪುರುಷನ ಸಮಾನಕ್ಕೆ ನಿಲ್ಲಬಹುದು. ಒಂದು ಸಂಘಟನೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ನಮ್ಮ ಜನವಾದಿ ಮಹಿಳಾ ಸಂಘಟನೆ ಮಾದರಿ’ ಎನ್ನುವ ದೇವಿ ಅವರ ಸಾಹಸಮಯ ಕಾರ್ಯಕ್ಕೆ ನಿಮ್ಮದೂ ಒಂದು ಮೆಚ್ಚುಗೆ ಇರಲಿ. ದೂ. 9449326634

ಸಂಘಟನೆ ಏನೇನು ಮಾಡಿದೆ

ಸಂಘಟನೆಯ ಆಶಯಗಳು ವಿಶಾಲ ದೃಷ್ಠಿಕೋನದಿಂದ ಕೂಡಿದೆ. ನಾವು ಇಂದು ಜಿಲ್ಲೆಯಲ್ಲಿ 32,000 ಸದಸ್ಯರಿದ್ದೇವೆ. ಕೆಲಸ ಮಾಡಿ ಹಣ ಗಳಿಸುವುದಷ್ಟೇ ನಮ್ಮ ಉದ್ದೇಶವಲ್ಲ

ಅದಕ್ಕೆ ಬದಲಾಗಿ-

2008 ರಿಂದಲೂ ಮಹಿಳೆಯರ ರಕ್ಷಣೆ, ಶಿಕ್ಷಣ, ದೌರ್ಜನ್ಯ ತಡೆ, ಬಾಲ್ಯ ವಿವಾಹ ತಡೆಯ  ಪ್ರಯತ್ನಕ್ಕೂ ಕೈ ಹಾಕಿದ್ದೇವೆ. ಮುಖ್ಯವಾಗಿ ಇಂದು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯುವ ಸಲುವಾಗಿ ನರೇಗಾ ಯೋಜನೆಯನ್ನು ಸಮರ್ಪಕ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪುರುಷ ಮಹಿಳೆ ಮತ್ತು ಯುವಕರಿಗೆ ಉದ್ಯೋಗ ಕೊಡಿಸುವ ಆಶಯವಿದೆ. ವರದಕ್ಷಿಣೆ ದಾಹಕ್ಕೆ ಬಲಿಯಾಗುತ್ತಿರುವ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ. ಈ ನಿಟ್ಟಿನಲ್ಲಿ ಜಾಗೃತಿ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ಹೆಣ್ಣು ಭ್ರೂಣ ಹತ್ಯೆ ತಡೆಗೆ ಮುಂದಾಗುವುದು. ಕೆರೆ ಹೂಳೆತ್ತುವ ಜೊತೆಗೆ ರಸ್ತೆ ಕಾಮಗಾರಿಗಳನ್ನು ಕೂಡ ಮಾಡಿ, ಗ್ರಾಮೀಣ ಭಾಗದಲ್ಲಿ ಎಲ್ಲಾ ಸೌಲಭ್ಯಗಳು  ಸಿಗುವಂತೆ ಮಾಡುವುದೇ ನಮ್ಮ ಆಶಯವಾಗಿದೆ ಎಂದು ಹೇಳುವ ದೇವಿ ಅವರು ಗ್ರಾಮೀಣ ಮಹಿಳೆಯರ ಗಟ್ಟಿ ದನಿಯಾಗಿ ಸಂಘಟನೆ ಮೂಲಕ ಕೆಲಸ ಮಾಡುತ್ತಾ ಬಂದಿದ್ದಾರೆ.

Follow Us:
Download App:
  • android
  • ios