ಹೊಸನಗರ(ಜು.11): ಕೊರೋನಾ ಔಷ​ಧ, ಉಪಕರಣ ಖರೀದಿಯಲ್ಲಿ ಅವ್ಯವಹಾರ, ರೋಗ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೆ ರಾಜಿನಾಮೆ ನೀಡುವಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹ ಮಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಸಿಕಲ್‌ ಜಾಥಾ ನಡೆಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಜನರು ಕೊರೋನಾದಂತಹ ಭೀಕರ ರೋಗದಿಂದ ಬಳಲುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿಯೂ ಸರ್ಕಾರ ಕೊರೋನಾ ಔಷ​ಧ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದೆ ಎಂದು ದೂರಿದರು. ಕೊರೋನಾ ಔಷ​ಧ, ಬೆಡ್‌, ಪಿಪಿಇ ಕಿಟ್‌ ಖರೀದಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ. ಆರೋಗ್ಯ ಸಚಿವರು ಈ ಕುರಿತಂತೆ ಸರಿಯಾದ ಸ್ಪಷ್ಟನೆ ಸಹ ನೀಡುವಲ್ಲಿ ವಿಫಲರಾಗಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಕಳೆದ 1 ತಿಂಗಳಿಂದ ದಿನದಿಂದ ದಿನಕ್ಕೆ ಏರುತ್ತಿದೆ. ಜಾಗತಿಕ ಮಟ್ಟದಲ್ಲಿ ತೈಲದ ಬೆಲೆ ಇಳಿಕೆಯಾದರೂ ದೇಶದಲ್ಲಿ ಮಾತ್ರ ಏರುಮುಖ ಕಾಣುತ್ತಿದೆ ಎಂದು ದೂರಿದರು.

ಮಾಸಾಂತ್ಯ ಕುವೆಂಪು ವಿವಿ ಘಟಿಕೋತ್ಸವ

ಚೀನಾ, ನೇಪಾಳ ವಿರುದ್ಧ ಗಡಿ ನಿಯಂತ್ರಣ ರೇಖೆ, ವಿದೇಶಾಂಗ ನೀತಿ, ಆರ್ಥಿಕ ಸಂಕಷ್ಟವನ್ನು ಹದ್ದುಬಸ್ತಿಗೆ ತರುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದೇಶ ಕೊರೋನಾ ಸಂಕಷ್ಟದಲ್ಲಿದ್ದರೂ ಶಾಸಕ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪ ಶಂಕುಸ್ಥಾಪನೆ, ಉದ್ಘಾಟನೆ ಎಂಬ ನೆಪದಲ್ಲಿ ಲಾಕ್‌ ಡೌನ್‌, ಸೀಲ್‌ ಡೌನ್‌ ನಿಯಮ ಗಾಳಿಗೆ ತೂರಿ ರೋಗ ಹೆಚ್ಚಲು ಕಾರಣ ಆಗುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಎಂಪಿಎಂ ಕಾರ್ಖಾನೆ ಮುಳಗಡೆಗೆ ಮುಖ್ಯ ಕಾರಣ ಆದ ಶಾಸಕ ಆರಗ ಜ್ಞಾನೇಂದ್ರ ಮೇಲಿನ ರೂ.300 ಕೋಟಿ ಹಗರಣ ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮಾಜಿ ಸಚಿವರ ನೇತೃತ್ವದಲ್ಲಿ ನಡೆದ ಬೈಸಿಕಲ್‌ ಜಾಥಾದಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ, ಬಿ.ಜಿ.ನಾಗರಾಜ್‌, ಸದಾಶಿವ ಶ್ರೇಷ್ಠಿ, ಚಂದ್ರಮೌಳಿ, ಕುನ್ನೂರು ಮಂಜಪ್ಪ, ಏರಗಿ ಉಮೇಶ, ಪ್ರಭಾಕರ್‌, ಬ್ರಹ್ಮೇಶ್ವರ ಮೊದಲಾದವರು ಇದ್ದರು.