Asianet Suvarna News Asianet Suvarna News

ಟೊಮೆಟೋ ಆಯ್ತು ಈಗ ದಾಳಿಂಬೆ ಮೇಲೆ ಕಳ್ಳರ ಕಣ್ಣು: ಸಿಸಿ ಕ್ಯಾಮರಾ ಮೊರೆ ಹೋದ ರೈತರು..!

ಅಲ್ಲಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳ ನೀರಿನ ಆಶ್ರಯದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದ ರೈತರಿಗೂ ಸಂಕಷ್ಟ ತಪ್ಪಿಲ್ಲಾ. ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆದ ತೋಟಗಾರಿಕಾ ಬೆಳಗಳ ಫಸಲಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ.

Thieves Theft Pomegranate Fruit in Vijayapura grg
Author
First Published Sep 10, 2023, 8:44 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಸೆ.10):  ಈ ವರೆಗೆ ಟೊಮೆಟೋ ಮೇಲಿದ್ದ ಕಳ್ಳರ ಕಣ್ಣೀಗ ದಾಳಿಂಬೆ ಮೇಲೆ ಬಿದ್ದಿದೆ. ಟೊಮೆಟೋ ಗಗನಮುಖಿಯಾಗಿದ್ದಾಗ ತೋಟಗಳಿಗೆ ನುಗ್ಗಿ ಕಳ್ಳರು ಟೊಮೆಟೋ ಕಳ್ಳತನ ಮಾಡ್ತಿದ್ರು. ಆದ್ರೀಗ ಅದೆ ಕಳ್ಳರು ದಾಳಿಂಬೆ ಬೆನ್ನು ಬಿದ್ದಿದ್ದಾರೆ. ರಾತ್ರೋ ರಾತ್ರಿ ದಾಳಿಂಬೆ ತೋಟಗಳಿಗೆ ನುಗ್ಗಿ ದಾಳಿಂಬೆ ಹಣ್ಣು ಕದಿಯುತ್ತಿದ್ದಾರೆ. ಇದಕ್ಕೆ ಬೇಸತ್ತ ರೈತರಿಗ ಸಿಸಿ ಕ್ಯಾಮರಾ ಮೊರೆ ಹೋಗಿದ್ದಾರೆ.

ವಿಜಯಪುರದಲ್ಲಿ ಬರದ ನಡುವೆ ರೈತರಿಗೆ ಕಳ್ಳರ ಕಾಟ..!

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರಗಾಲ ಉಂಟಾಗಿದೆ. ವಾಡಿಕೆಗಳಿಗಿಂತ ಮಳೆ ಕಡಿಮೆಯಾಗಿದೆ. ಜೂನ್ ನಲ್ಲಿ ಮಳೆಯಾಗದ ಕಾರಣ ಮುಂಗಾರು ಬಿತ್ತನೆ ಮಾಡಿಲ್ಲಾ. 7.40 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿದ್ದರೂ ಜುಲೈ 15 ರ ನಂತರ ಮಳೆಯಾಗಿದೆ. ಈ ಕಾರಣ 5.70 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿತ್ತು. ಆದರೆ ಅಗಷ್ಟನಲ್ಲಿ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳು ಕಮರಿ ಹಾಳಾಗಿವೆ. ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ನಷ್ಟವಾಗಿದೆ. ಇಷ್ಟರ ಮದ್ಯೆ ಅಲ್ಲಲ್ಲಿ ಬಾವಿ ಹಾಗೂ ಕೊಳವೆ ಬಾವಿಗಳ ನೀರಿನ ಆಶ್ರಯದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆದ ರೈತರಿಗೂ ಸಂಕಷ್ಟ ತಪ್ಪಿಲ್ಲಾ. ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆದ ತೋಟಗಾರಿಕಾ ಬೆಳಗಳ ಫಸಲಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ.

ಗ್ಯಾರಂಟಿಯಲ್ಲಿ ಹುಟ್ಟಿದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಯಲ್ಲಿಯೇ ಮುಳುಗಿ ಹೋಗಲಿದೆ: ರಮೇಶ ಭೂಸನೂರ

‌ಚೆನ್ನಶೆಟ್ಟಿ ತೋಟದಲ್ಲಿ 4 ಲಕ್ಷ ಮೌಲ್ಯದ ದಾಳಿಂಬೆ ಅಬೇಸ್..!

ವಿಜಯಪುರ  ತಾಲೂಕಿನ ಜುಮನಾಳ ಗ್ರಾಮದ ಮಹಾದೇವ ಚೆನಶೆಟ್ಟಿ ಎಂಬ ರೈತನ  4 ಎಕರೆ ಜಮೀನಿನಲ್ಲಿ ಬೆಳೆದಿರೋ ಕಟಾವಿಗೆ ಬಂದಿದ್ದ ದಾಳಿಂಬೆಯನ್ನು ಕದೀಮರು ರಾತ್ರಿ ಕದ್ದುಕೊಂಡು ಹೋಗಿದ್ದಾರೆ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಹೊಂದಿಕೊಂಡಿರೋ ಜಮೀನಿನಲ್ಲಿ ಮಹದೇವ ಚೆನಶೆಟ್ಟಿ, ಬರಗಾಲದಲ್ಲೂ ಭರಪೂರ ದಾಳಿಂಬೆ ಬೆಳೆದಿದ್ದಾರೆ. ಕಷ್ಟಪಟ್ಟು ಉತ್ತಮ ದಾಳಿಂಬೆ ಬೆಳೆದಿದ್ದು ಇದೀಗಾ ಕಟಾವಿದೆ ಬಂದಿದೆ. 20 ಕೆಜಿ ಒಂದು ದಾಳಿಂಬೆ ಟ್ರೇ 2000 ರೂಪಾಯಿಗೆ ಮಾರುಕಟ್ಟೆಯಲ್ಲಿ ಮಹಾದೇವ ಬೆಳೆದಿದ್ದ ದಾಳಿಂಬೆ ಮಾರಾಟವಾಗುತ್ತಿದೆ. 4ಎಕರೆಗೆ 6 ಲಕ್ಷಕ್ಕೂ ಆಧಿಕ ಹಣ ಖರ್ಚು ಮಾಡಿರೋ ಮಹಾದೇವ ಚೆನಶೆಟ್ಟಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಮಹಾದೇವ ಅವರ ತೋಟದಲ್ಲಿ ಬೆಳೆದಿರೋ ದಾಳಿಂಬೆಯನ್ನು ಕಳೆದ ರಾತ್ರಿ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ಧಾರೆ.  3 ರಿಂದ 4 ಲಕ್ಷ ರೂಪಾಯಿ ಮೌಲ್ಯದ ದಾಳಿಂಬೆಯನ್ನು ಕದ್ದುಕೊಂಡು ಹೋಗಿದ್ದಾರೆ. ಇದರಿಂದ ದಾಳಿಂಬೆ ಬೆಳಗಾರ ಮಹಾದೇಶ ಚೆನಶೆಟ್ಟಿ ಕಂಗಾಲಾಗಿದ್ದಾರೆ.

ಏರಿದ ದಾಳಿಂಬೆ ಧಾರಣೆ, ಕಳ್ಳತನಕ್ಕೆ ಮುಗಿಬಿದ್ದ ಖದೀಮರು..!

ಟೊಮೆಟೋ ತೋಟಗಳಲ್ಲಿ ಕಳ್ಳತನ ಮಾಡ್ತಿದ್ದ ಕಳ್ಳರು ಟೊಮೆಟೊ ದರ ಇಳಿಯುತ್ತಿದ್ದಂತೆ ದಾಳಿಂಬೆಯತ್ತ ಕಣ್ಣಹಾಯ್ಸಿದ್ದಾರೆ. ಯಾಕಂದ್ರೆ ಈಗ ದಾಳಿಂಬೆ ಮಾರ್ಕೆಟ್‌ ನಲ್ಲಿ 160ರಿಂದ 200 ರೂಪಾಯಿ ವರೆಗು ಮಾರಾಟವಾಗ್ತಿದೆ. ದಾಳಿಂಬೆ ದರ ಏರಿಕೆಯಾಗಿದ್ದರಿಂದ ಕಳ್ಳರು ಈಗ ದಾಳಿಂಬೆ ತೋಟಗಳಿಗೆ ನುಗ್ಗಿ ಕಳ್ಳತನ ಶುರು ಮಾಡಿದ್ದಾರೆ.

ಸಚಿವರೇ ನಿಮಗೆ 10 ಕೋಟಿ ರೂ. ಕೋಡ್ತೀವಿ, ನೇಣು ಹಾಕಿಕೊಳ್ಳಿ: ಮಾಜಿ ಸಚಿವ ಬೆಳ್ಳುಬ್ಬಿ ಸವಾಲು

ಸಿಸಿ ಕ್ಯಾಮರಾ, ಮುಳ್ಳುಬೇಲಿ ಮೊರೆ ಹೋದ ರೈತ..!

ರಾತ್ರಿ ದಾಳಿಂಬೆ ತೋಟಗಳಿಗೆ ನುಗ್ತಿರೋ ಕಳ್ಳರ ಗುಂಪಿನ ಮೇಲೆ ಕಣ್ಣಿಡಲು ರೈತ ಮಹಾದೇವ ಚೆನ್ನಶೆಟ್ಟಿ ಸಿಸಿಕ್ಯಾಮರಾ ಮೊರೆ ಹೋಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಜಮೀನಿನಲ್ಲಿ 360° ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದಾರೆ. ಸೋಲಾರ್‌ ಮೂಲಕ ಕಾರ್ಯನಿರ್ವಹಿಸುವ ಈ ಸಿಸಿಕ್ಯಾಮರಾ ಹಗಲು ರಾತ್ರಿ ದಾಳಿಂಬೆ ಕಳ್ಳರ ಮೇಲೆ ನಿಗಾ ಇಡಲಿದೆ. ಈ ಮೂಲಕ ಕಳ್ಳರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನು ಹೊಲದ ಸುತ್ತಲು ತಾವೇ ಸ್ವತಃ ಮುಳ್ಳುಕಂಟಿ ಕಡಿದು ತಂದು ಬೇಲಿ ಹಾಕಿದ್ದಾರೆ. ಕಳ್ಳರು ಜಮೀನಿಗೆ ನುಗ್ಗದಂತೆ ಬೇಕಾದ ವ್ಯವಸ್ಥೆಯನ್ನ ಮಾಡಿಕೊಂಡಿದ್ದಾರೆ.

ಕಷ್ಟಪಟ್ಟು ಸಾವಯವ ರೀತಿಯಲ್ಲಿ ದಾಳಿಂಬೆ ಬೆಳೆದಿದ್ದ ರೈತ ಮಹಾದೇವ..!

ಹನಿ ನೀರಾವರಿ ಮೂಲಕ ಮಹಾದೇವ ಚೆನಶೆಟ್ಟಿ ಕಳೆದ ಆರು ತಿಂಗಳಿಂದಲೂ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದರು. ಮಳೆಯ ಕೊರತೆ ಹಾಗೂ ಬರದಲ್ಲೂ ರ್ಧೈರ್ಯ ಮಾಡಿ 5 ರಿಂದ 6 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದರು. ಇನ್ನೇನು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಕಳುಹಿಸಲು ಮುಂದಾಗಿದ್ದರು. 20 ಕೆಜಿಯ ದಾಳಿಂಬೆ ಫಸಲಿನ ಒಂದು ಟ್ರೇ 2000 ಕ್ಕೂ ಆಧಿಕ ದರಕ್ಕೆ ಮಾರಾಟವಾಗುತ್ತಿದೆ. ಹೇಗೂ ಐದಾರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಉತ್ತಮ ಫಸಲು ಇದೆ ಉತ್ತಮ ದರವೂ ಇದೆ. ಹಾಗಾಗಿ ಲಾಭವೂ ಹೆಚ್ಚಾಗಲಿದೆ. ಸಾಲಸೋಲ ಮಾಡಿದ್ದನ್ನು ಮರುಪಾವತಿ ಮಾಡಬೇಕೆಂದು ಮಹಾದೇವ ಕನಸು ಕಂಡಿದ್ದರು. ಆದರೆ ಕಳ್ಳರು ಇವರ ಜಮೀನಿನಲ್ಲಿದ್ದ ದಾಳಿಂಬೆಯನ್ನು ಕದ್ದು ಓಡಿ ಹೋಗಿದ್ದಾರೆ. ಈ ಕುರಿತು ರೈತ ಮಹಾದೇವ ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ಸಹ ನೀಡಿದ್ದಾರೆ.

Follow Us:
Download App:
  • android
  • ios