ಬೆಂಗಳೂರು [ಜ.20]:  ಕಳ್ಳತನಕ್ಕೆ ಬಂದ ವ್ಯಕ್ತಿಯೊಬ್ಬ ಕೊಠಡಿಯಲ್ಲಿ ಮಲಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಕಾಲ್ಕಿತ್ತಿರುವ ಪ್ರಕರಣ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸಂತ್ರಸ್ತೆ ಬಾಲಕಿ ಕುಟುಂಬ ಬೆಳ್ಳಂದೂರಿನ ಸಮೀಪ ಇರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದು, ಎರಡನೇ ಅಂತಸ್ತಿನಲ್ಲಿ ಬಾಲಕಿ ಕುಟುಂಬ ವಾಸವಿದೆ. 

ಕಾಂಗ್ರೆಸ್‌ ಮುಖಂಡನಿಂದ ಅತ್ಯಾ​ಚಾರ: ಶಿಕ್ಷಕಿ ಆರೋಪ..

ಆರೋಪಿ ಜ.18ರಂದು ಬೆಳಗಿನ ಜಾವ 4.30ರ ಸುಮಾರಿಗೆ ಮನೆಯ ಬಾತ್‌ ರೂಮ್‌ ಹಿಂಬದಿ ಕಿಟಕಿ ಮೂಲಕ ಮನೆ ಪ್ರವೇಶ ಮಾಡಿದ್ದಾನೆ. ಮೊದಲಿಗೆ ಆರೋಪಿ ಕಬೋರ್ಡ್‌ನಲ್ಲಿ ಬೆಲೆ ಬಾಳುವ ವಸ್ತುಗಳಿಗಾಗಿ ಹುಟುಕಾಟ ನಡೆಸಿದ್ದಾನೆ. 

ಏನು ಸಿಗದಾಗ ಕೊಠಡಿಯಲ್ಲಿ ಒಬ್ಬಳೆ ಮಲಗಿದ್ದ ಒಂಬತ್ತು ವರ್ಷದ ಬಾಲಕಿ ಪಕ್ಕ ಮಲಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಎಚ್ಚರಗೊಂಡು ಬಾಲಕಿ ಚೀರಾಡಿದ್ದು, ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕತ್ತಲೆ ಇದ್ದ ಕಾರಣ ಆರೋಪಿ ಯಾರ ಕೈಗೂ ಸಿಕ್ಕಿಲ್ಲ. ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.