ಬೆಂಗಳೂರು [ಜ.06]:  ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನೊಬ್ಬ ಮನೆಯಿಂದ ಹೊರಬರಲಾಗದೆ ಸಿಕ್ಕಿಬೀಳುತ್ತೇನೆಂಬ ಭಯದಲ್ಲಿ ಸಿಲಿಂಡರ್‌ ಸೋರಿಕೆ ಮಾಡಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಸ್ವಸ್ತಿಕ್‌ (27) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವಕನಿಗೆ ಶೇ.20ರಷ್ಟುಸುಟ್ಟು ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮನೆ ಮಾಲಿಕ ಮೋಹನ್‌ ಎಂಬುವರು ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದಾರೆ.

ಬೀಗ ಹಾಕಿಕೊಂಡು ಹೋದ ದಂಪತಿ:

ಮೋಹನ್‌ ಅವರು ಕಟ್ಟಡ ಗುತ್ತಿಗೆದಾರರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಕೆಲವು ವರ್ಷಗಳಿಂದ ವಿಭೂತಿನಗರದಲ್ಲಿ ನೆಲೆಸಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಜ.1ರಂದು ಮೋಹನ್‌ ಅವರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಹೊರಗೆ ಹೋಗಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಮೋಹನ್‌ ಅವರ ಪತ್ನಿ ಮನೆಯ ಹೊರಗಿನ ಆವರಣವನ್ನು ಶುಚಿಗೊಳಿಸುತ್ತಿದ್ದರು. ಈ ವೇಳೆ ಆರೋಪಿ ಕಳ್ಳತನ ಮಾಡಲು ಸ್ವಸ್ತಿಕ್‌ ಮನೆ ಪ್ರವೇಶ ಮಾಡಿ ಅವಿತುಕೊಂಡಿದ್ದ.

ಹೊರಗೆ ಹೋಗಿದ್ದ ಮೋಹನ್‌ ಅವರು ಬೆಳಗ್ಗೆ 8.40ರ ಸುಮಾರಿಗೆ ಮನೆಗೆ ವಾಪಸ್‌ ಆಗಿದ್ದು, ಮನೆಗೆ ಬೀಗ ಹಾಕಿ ಇಡೀ ಕುಟುಂಬ ದೇವಸ್ಥಾನಕ್ಕೆ ತೆರಳಿತ್ತು. ಈ ವೇಳೆ ಆರೋಪಿ ಮನೆಯಲ್ಲಿ ಸಿಲುಕಿದ್ದ. ಹೊರಗೆ ಬರಲು ಆಗದೆ ಸಿಕ್ಕಿ ಬೀಳುತ್ತೇನೆಂಬ ಆತಂಕದಲ್ಲಿ ಸ್ವಸ್ತಿಕ್‌ ಮೊದಲಿಗೆ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ತಲೆ ದಿಂಬು, ಮನೆಯಲ್ಲಿನ ಬಟ್ಟೆಯನ್ನೆಲ್ಲ ಅಡುಗೆ ಕೋಣೆಗೆ ಹಾಕಿ ಮೊದಲಿಗೆ ಬೆಂಕಿ ಹಚ್ಚಿದ್ದಾನೆ. ನಂತರ ಸಿಲಿಂಡರ್‌ ಪೈಪ್‌ ಕಿತ್ತು ಅನಿಲ ಸೋರಿಕೆ ಮಾಡಿದ್ದಾನೆ. ಪರಿಣಾಮ ಸ್ವಸ್ತಿಕ್‌ನ ದೇಹ ಶೇ.20ರಷ್ಟುಸುಟ್ಟು ಗಾಯಗಳಾಗಿವೆ.

ಬೆಳಗ್ಗೆ 10.15ರ ಸುಮಾರಿಗೆ ಮೋಹನ್‌ ಅವರ ಕುಟುಂಬ ಮನೆಗೆ ವಾಪಸ್‌ ಆಗಿದ್ದು, ಬೆಂಕಿ ಉರಿಯುವುದನ್ನು ಕಂಡು ಆತಂಕಗೊಂಡಿದ್ದಾರೆ. ನೆರೆಮನೆಯವರ ಸಹಾಯದೊಂದಿಗೆ ಮನೆಗೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಕೊಠಡಿಯಲ್ಲಿ ಫ್ಯಾನಿಗೆ ಹಾಕಿದ್ದ ವೇಲ್‌ ಹಾಗೂ ಅಡುಗೆ ಕೋಣೆಯಲ್ಲಿ ಬಟ್ಟೆಹಾಕಿ ಬೆಂಕಿ ಹಚ್ಚಿರುವುದನ್ನು ಕಂಡು ಯಾರೋ ವ್ಯಕ್ತಿ ಒಳಗೆ ನುಗ್ಗಿ ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ. ಕೂಡಲೇ ಮೋಹನ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಸಿಸಿಟಿವಿ ನೋಡುತ್ತಿದ್ದಾಗ ಹೊರಬಂದ ಕಳ್ಳ

ಮನೆಯೊಳಗಿನ ಚಿತ್ರಣ ನೋಡಿ ಅಚ್ಚರಿಗೊಳಗಾದ ಮೋಹನ್‌ ಅವರು ನೆರೆಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿ ನೋಡಲು ಹೋಗಿದ್ದು, ಉಳಿದವರು ಪೊಲೀಸರ ಬರುವಿಕೆಗಾಗಿ ಮನೆಯ ಹೊರಗಿನ ಆವರಣದಲ್ಲಿ ನಿಂತಿದ್ದರು.

ಈ ವೇಳೆ ಸ್ವಸ್ತಿಕ್‌ ನಿಧಾನವಾಗಿ ಬಾಗಿಲು ತೆರೆದು ಹೊರಬರುತ್ತಿದ್ದ. ಇದನ್ನು ಕಂಡ ನೆರೆ ಮನೆ ನಿವಾಸಿ ಆತನನ್ನು ಹಿಡಿದರು. ದೇಹದಲ್ಲಿ ಸುಟ್ಟು ಗಾಯಗಳಾಗಿದ್ದರಿಂದ ಕೂಡಲೇ ಮೋಹನ್‌ ಅವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದರು. ಸ್ವಸ್ತಿಕ್‌ ವಿಭೂತಿಪುರದ ನಿವಾಸಿಯಾಗಿದ್ದು, ಬಾರ್‌ ಬೆಂಡಿಂಗ್‌ ಕೆಲಸ ಮಾಡಿಕೊಂಡಿದ್ದ. ಆತನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳ್ಳತನಕ್ಕೆ ಹೋದಾಗ ಸಿಕ್ಕಿಬೀಳುವ ಆತಂಕದಲ್ಲಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದರು.

ಹೊಡೀಬೇಡಿ ಎಂದು ಬೇಡಿಕೊಂಡ!

ನಿಮ್ಮ ಮನೆಯ ಬಾಗಿಲು ತೆರೆದಿತ್ತು, ಯಾವುದಾದರೂ ವಸ್ತು ಕಳವು ಮಾಡಿಕೊಂಡು ಹೋಗಲು ಮನೆ ಪ್ರವೇಶಿಸಿದೆ. ಮನೆಯಿಂದ ಹೊರಬಾರಲು ಆಗದೆ ಈ ರೀತಿ ಮಾಡಿಕೊಂಡೆ. ನನಗೆ ಹೊಡೆಯಬೇಡಿ ಎಂದು ಆತ ನಮ್ಮನ್ನು ಬೇಡಿಕೊಂಡ. ಆತನ ದೇಹದಲ್ಲಿ ಸುಟ್ಟು ಗಾಯಗಳಾಗಿತ್ತು. ನಾವು ಕೂಡ ಮನುಷ್ಯರೇ. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಒಂದು ವೇಳೆ ನನ್ನ ಮನೆಯಲ್ಲಿ ಆತನಿಗೆ ಏನಾದರೂ ಹೆಚ್ಚು-ಕಡಿಮೆ ಆಗಿದ್ದರೆ ನಾನೇ ಇಲ್ಲಸಲ್ಲದ ಆರೋಪ ಎದುರಿಸಬೇಕಾಗಿತ್ತು ಎಂದು ಮನೆ ಮಾಲಿಕ ಮೋಹನ್‌ ಪ್ರತಿಕ್ರಿಯಿಸಿದ್ದಾರೆ.