2019ರಲ್ಲಿ ಗುಂಡಿ ಬಿದ್ದಿದ್ದ ಜಾಗದ ಬಳಿಯೇ ಮತ್ತೆ ಗುಂಡಿ ಸೃಷ್ಟಿ, ಕಬ್ಬಿಣದ ಸರಳುಗಳ ದರ್ಶನ

ಬೆಂಗಳೂರು(ಸೆ.21): ಸುಮ್ಮನಹಳ್ಳಿಯ ಮೇಲ್ಸೇತುವೆಯ ನಿರ್ವಹಣೆಯ ಲೋಪದಿಂದ ಮತ್ತೆ ಫ್ಲೈಓವರ್‌ ಮೇಲೆ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ. ಕಳೆದ 2004-06ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೇಲ್ಸೇತುವೆ ನಿರ್ಮಿಸಿ 2014-15ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಮಾಡಬೇಕಿದ್ದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇ ಪದೆ ಫ್ಲೈಓವರ್‌ನಲ್ಲಿ ಗುಂಡಿ ಕಾಣಿಸಿಕೊಳ್ಳುತ್ತಿವೆ.

ನಾಗರಬಾವಿಯಿಂದ ಡಾ. ರಾಜಕುಮಾರ್‌ ಸಮಾಧಿ ಕಡೆ ಕಡೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದಿದ್ದು, ಕಳೆದ 2019ರ ನವೆಂಬರ್‌ನಲ್ಲಿಯೂ ಇದೇ ಮಾರ್ಗದಲ್ಲಿ ಮತ್ತು ಕಳೆದ ಬಾರಿ ಗುಂಡಿ ಬಿದ್ದಿರುವ ಸಮೀಪದಲ್ಲಿಯೇ ಮತ್ತೆ ಗುಂಡಿ ಸೃಷ್ಟಿಯಾಗಿದೆ. ಸದ್ಯ ಸುಮಾರು 3/3 ಅಡಿ (9 ಚದರ ಅಡಿ) ಗುಂಡಿ ನಿರ್ಮಾಣವಾಗಿದ್ದು, ಮೇಲ್ಸೇತುವೆಗೆ ಅಳವಡಿಸಲಾದ ಕಬ್ಬಿಣದ ಸರಳು ದರ್ಶನವಾಗುತ್ತಿವೆ. ಹೀಗಾಗಿ, ಸಂಚಾರಿ ಪೊಲೀಸರು ಗುಂಡಿಯ ಸುತ್ತ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.

Bengaluru Flood: ಬೆಂಗಳೂರಿನಲ್ಲೀಗ ಗುಂಡಿ ಬಿದ್ದ ರಸ್ತೆಗಳಿಂದಲೇ ಸಮಸ್ಯೆ..!

ಕಾಂಕ್ರೀಟ್‌ ಸ್ಲಾಬ್‌ ಕಳಪೆ?

ಮೇಲ್ಸೇತುವೆಯ ಭೀಮ್‌ ಹಾಗೂ ಗರ್ಡರ್‌ಗಳು ಸದೃಢವಾಗಿವೆ. ಆದರೆ, ಮೇಲ್ಸೇತುವೆಗೆ ಹಾಕಿರುವ ಸ್ಲಾ್ಯಬ್‌ನ ಕಾಂಕ್ರಿಟ್‌ ಕಳಪೆ ಆಗಿರುವುದರಿಂದ ಆಗಾಗ ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾಗುತ್ತಿದೆ. ಹೀಗಾಗಿ, ಶಿಥಿಲಗೊಂಡಿರುವ ಇಡೀ ಸ್ಲಾಬ್‌ ತೆಗೆದು ರಿಪೇರಿ ಮಾಡಬೇಕಿದೆ.

ನಾಳೆಯಿಂದ ರಿಪೇರಿ ಶುರು: 

ಬಿಬಿಎಂಪಿ ಗುರುವಾರದಿಂದ ದುರಸ್ತಿ ಕಾಮಗಾರಿ ಆರಂಭಿಸಲು ತೀರ್ಮಾನಿಸಿದೆ. ಗುಂಡಿ ಬಿದ್ದಿರುವ ಇಡೀ ಸ್ಲಾ್ಯಬ್‌ ಕತ್ತರಿಸಿ ತೆಗೆದು ಅಲ್ಲಿಗೆ ಮತ್ತೆ ಕಬ್ಬಿಣದ ಸರಳುಗಳನ್ನು ಜೋಡಿಸಿ ಕಾಂಕ್ರಿಟ್‌ ಹಾಕಿ ರಿಪೇರಿ ಮಾಡಬೇಕಿದೆ. ಕಾಮಗಾರಿ ಪೂರ್ಣವಾಗಲು ಸುಮಾರು 75ರಿಂದ 90 ದಿನ ಕಾಲಾವಕಾಶ ಬೇಕಾಗಲಿದೆ. ಹಾಗಾಗಿ, ಈ ಅವಧಿಯಲ್ಲಿ ಫ್ಲೈಓವರ್‌ ಮೇಲೆ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.

ಇಂದು ವಾಹನ ಸಂಚಾರದ ಬಗ್ಗೆ ತಜ್ಞರಿಂದ ತೀರ್ಮಾನ

ತಜ್ಞರ ಸಂಸ್ಥೆಯ ತಂಡ ಬುಧವಾರ ಮೇಲ್ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗುಂಡಿ ಪಕ್ಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಲಹೆ ನೀಡಲಿದ್ದಾರೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಬೆಂಗ್ಳೂರು ಪ್ರವಾಹದ ಬಗ್ಗೆ ಶ್ವೇತಪತ್ರಕ್ಕೆ ಕಾಂಗ್ರೆಸ್‌ ಪಟ್ಟು: ಸರ್ಕಾರದ ವಿರುದ್ಧ 'ಕೈ' ನಾಯಕರ ವಾಗ್ದಾಳಿ

ಟ್ರಾಫಿಕ್‌ ಜಾಮ್‌ ಸಾಧ್ಯತೆ?: ಫ್ಲೈಓವರ್‌ನಲ್ಲಿ ಗುಂಡಿ ಬಿದ್ದಿರುವುದರಿಂದ ಹೆಚ್ಚಿನ ಸಂಖ್ಯೆಯ ವಾಹನಗಳು ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸುತ್ತಿವೆ. ಇದರಿಂದ ಸುಮ್ಮನಹಳ್ಳಿ ಜಂಕ್ಷನ್‌ನಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಿದೆ. ಒಂದು ವೇಳೆ ಫ್ಲೈಓವರ್‌ ಮೇಲೆ ವಾಹನ ಸಂಚಾರ ನಿಷೇಧಿಸಿದರೆ ಸುಮ್ಮನಹಳ್ಳಿ ಜಂಕ್ಷನ್‌, ಕಂಠೀರವ ನಗರ ಹಾಗೂ ಕೊಟ್ಟಿಗೆಪಾಳ್ಯ ಸೇರಿದಂತೆ ವಿವಿಧ ಕಡೆ ಭಾರೀ ಸಂಚಾರಿ ದಟ್ಟಣೆ ಉಂಟಾಗಲಿದೆ.

ಇಡೀ ಫ್ಲೈಓವರ್‌ ಪರೀಕ್ಷೆ ಅಗತ್ಯ

ಕಳೆದ ಬಾರಿ ಸುಮ್ಮನಹಳ್ಳಿ ಮೇಲ್ಸೇತುವೆಯ ನಾಗರಭಾವಿ ಕಡೆಯಿಂದ ರಾಜಕುಮಾರ್‌ ಸಮಾಧಿ ಕಡೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದ ಸಂದರ್ಭದಲ್ಲಿ ಸಿವಿಲ್‌-ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆ ಇಡೀ ಮೇಲ್ಸೇತುವೆ ಪರೀಕ್ಷಿಸಿ ಕೆಲವು ಸುಧಾರಣೆ ಮಾಡಿ ಮತ್ತೆ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೂ ಇದೀಗ ಮತ್ತೆ ಮೇಲ್ಸೇತುವೆ ಮೇಲ್ಭಾಗದಲ್ಲಿ ಗುಂಡಿ ಬಿದ್ದಿರುವುದು ಇಡೀ ಮೇಲ್ಸೇತುವೆಯ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿದೆ.