ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಏ.03):  ರಾಜ್ಯದ ಪ್ರಮುಖ ಪ್ರವಾಸಿ ತಾಣ ಹೊಸಪೇಟೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ತೀವ್ರಗೊಳಿಸಿದೆ.
ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಜತೆಗೆ ರಾಜಧಾನಿ ಬೆಂಗಳೂರಿನಿಂದಲೂ ನಿತ್ಯ ಪ್ರಯಾಣಿಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತಪಾಸಿಸಿ ಅವರ ಆರೋಗ್ಯ ಸ್ಥಿತಿ ಮೇಲೆ ಸ್ವಾಬ್‌ ಸಂಗ್ರಹಣೆ ಮಾಡಲಾಗುತ್ತಿದೆ.

ಯಾವ್ಯಾವ ರೈಲುಗಳು:

ನಗರದ ರೈಲು ನಿಲ್ದಾಣಕ್ಕೆ ಬೆಂಗಳೂರಿನಿಂದ ನಿತ್ಯ ಬೆಳಗ್ಗೆ 7.10ಕ್ಕೆ ಹಂಪಿ ಎಕ್ಸ್‌ಪ್ರೆಸ್‌ ರೈಲು ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತದೆ. ಈ ರೈಲು ಮೈಸೂರು, ಹುಬ್ಬಳ್ಳಿಗೂ ತೆರಳುವುದರಿಂದ ಈ ರೈಲಿನ ಪ್ರಯಾಣಿಕರನ್ನು ತಪಾಸಿಸಲಾಗುತ್ತಿದೆ.

ಹುಬ್ಬಳ್ಳಿ-ಬಳ್ಳಾರಿ ಪ್ಯಾಸೆಂಜರ್‌ ರೈಲು, ಹೊಸಪೇಟೆ-ಹರಿಹರ-ಬೆಂಗಳೂರು ರೈಲು, ಸಂಪರ್ಕ ಕ್ರಾಂತಿ ರೈಲು, ಹರಿಪ್ರಿಯಾ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರನ್ನು ತಪಾಸಿಸಲಾಗುತ್ತಿದೆ. ಆರೋಗ್ಯ ಇಲಾಖೆ ಜತೆಗೆ ರೈಲ್ವೆ ಇಲಾಖೆ ಕೂಡ ಕೈಜೋಡಿಸಿದ್ದು, ರೈಲ್ವೆ ಸಿಬ್ಬಂದಿ ಆರೋಗ್ಯಕ್ಕೂ ಒತ್ತು ನೀಡಿದೆ. ಹೊಸಪೇಟೆ ರೈಲ್ವೆ ನಿಲ್ದಾಣದಿಂದ ಬಹುತೇಕ ಪ್ರವಾಸಿಗರು ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ, ವಾಜಪೇಯಿ ಜೂಲಾಜಿಕಲ್‌ ಪಾರ್ಕ್ ವೀಕ್ಷಣೆಗೆ ತೆರಳುತ್ತಾರೆ. ಹೀಗಾಗಿ ಕೊರೋನಾ ಹರಡುವಿಕೆಯನ್ನು ಆರಂಭದಲ್ಲೇ ತಡೆಯಲು ಆರೋಗ್ಯ ಇಲಾಖೆ ಥರ್ಮಲ್‌ ಸ್ಕ್ರೀನಿಂಗ್‌ ಮೊರೆ ಹೋಗಿದೆ.

ಬಳ್ಳಾರಿಯಲ್ಲಿ ಕೊರೋನಾ 2ನೇ ಅಲೆಗೆ ಮೊದಲ ಬಲಿ: ಮತ್ತೆ ಸೀಲ್‌ಡೌನ್‌, ಆತಂಕದಲ್ಲಿ ಜನತೆ

ಸರದಿಯಲ್ಲಿ ಕಾರ್ಯ:

ಆರೋಗ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಸರದಿಯಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಾರ್ಯ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ರೈಲ್ವೆ ಸಿಬ್ಬಂದಿಯೂ ಸಾಥ್‌ ನೀಡುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ ಲಕ್ಷಣ ಕಂಡುಬಂದರೆ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ರವಾನೆ ಮಾಡಲಾಗುತ್ತಿದ್ದು, ಅವರು ಬಂದು ಸ್ವಾಬ್‌ ಸಂಗ್ರಹಿಸಿ ಅವರ ವಿಳಾಸ ಬರೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೊರೋನಾ ವೈರಸ್‌ನ ಕೊಂಡಿಕಳಚಲು ಅನುಕೂಲ ಆಗಲಿದೆ ಎಂಬ ಆಶಾಭಾವ ಜನರಲ್ಲಿ ಒಡಮೂಡಿದೆ.

ಮೊದಲು ಪತ್ತೆ:

ನಗರದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿತ್ತು. ಆದರೆ, ಗದಗ ರೈಲ್ವೆ ನಿಲ್ದಾಣದ ಲೋಕೋಪೈಲೆಟ್‌ (ಚಾಲಕ)ನಲ್ಲಿ ಮೊದಲು ಕೊರೋನಾ ನಗರದಲ್ಲಿ ಪತ್ತೆಯಾಗಿತ್ತು. ಬಳಿಕ 30 ಲೋಕೋಪೈಲೆಟ್‌ರಲ್ಲಿ ಕೊರೋನಾ ಕಾಣಿಸಿತ್ತು. ರೈಲ್ವೆ ಇಲಾಖೆಯೇ ಇದರಿಂದ ಬೆಚ್ಚಿಬಿದ್ದಿತ್ತು. ಈಗ ರೈಲ್ವೆ ಇಲಾಖೆಯು ಆರೋಗ್ಯ ಇಲಾಖೆ ಜತೆಗೂಡಿ ತಪಾಸಣೆ ಕಾರ್ಯದಲ್ಲಿ ನಿರತವಾಗಿದೆ.

ಆರೋಗ್ಯ ಹಿತದೃಷ್ಟಿ:

ನಗರ ಪ್ರಮುಖ ಪ್ರವಾಸಿ ತಾಣವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನಗರದ ಜನರ ಆರೋಗ್ಯ ಹಿತದೃಷ್ಟಿಯಿಂದ ಹೋಟೆಲ್‌, ರೆಸಾರ್ಟ್‌ನಲ್ಲೂ ಥರ್ಮಲ್‌ ಸ್ಕ್ರೀನಿಂಗ್‌ಗೆ ಸೂಚಿಸಲಾಗಿದೆ. ಈ ಮಧ್ಯೆ ರೈಲ್ವೆ ನಿಲ್ದಾಣದಲ್ಲೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತಿರುವುದರಿಂದ ಕೊರೋನಾ ವೈರಸ್‌ ಹರಡುವಿಕೆಗೆ ಕಡಿವಾಣ ಹಾಕಬಹುದು ಎಂಬುದು ಆರೋಗ್ಯ ಇಲಾಖೆಯ ಅಭಿಮತ.