chikkaballapura : ಮಳೆ ಬಿದ್ದರೂ ಬಹುಗ್ರಾಮ ಕುಡಿವ ಯೋಜನೆಗೆ ನೀರಿಲ್ಲ!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಲ್ಲೆಯಲ್ಲಿ ಇಲ್ಲಿವರೆಗೂ ಅನುಮೋದನೆಗೊಂಡಿದ್ದು ಕೇವಲ 3 ಯೋಜನೆಗಳು.

 there is no water for the multi-village drinking water scheme snr

 ಚಿಕ್ಕಬಳ್ಳಾಪುರ (ಅ.14):  ಜಿಲ್ಲಾದ್ಯಂತ ಹಲವು ತಿಂಗಳಿಂದ ಮಳೆರಾಯನ ಅರ್ಭಟ ಜೋರಾಗಿದೆ. ಎಲ್ಲಿ ನೋಡಿದರೂ ಮಳೆ ನೀರು ಪ್ರವಾಹದ ರೀತಿಯಲ್ಲಿ ಕೆರೆ, ಕುಂಟೆಗಳು ಉಕ್ಕಿ ಹರಿಯುತ್ತಿದೆ. ಆದರೆ ವಿಪಯಾರ್ಸದ ಸಂಗತಿಯೆಂದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಲ್ಲೆಯಲ್ಲಿ ಇಲ್ಲಿವರೆಗೂ ಅನುಮೋದನೆಗೊಂಡಿದ್ದು ಕೇವಲ 3 ಯೋಜನೆಗಳು.

ಸತತ ಎರಡು ವರ್ಷದಿಂದ ಅತಿವೃಷ್ಟಿಗೆ ರೈತಾಪಿ (Farmers ) ಜನ ಕಂಗಾಲಾಗಿದ್ದಾರೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ, ಪಾಸ್ತಿಗೆ ಹಾನಿಯಾಗಿದೆ. ಎಲ್ಲಿ ನೋಡಿದರೂ ಮಳೆ ನೀರು (Water)  ಹರಿಯುತ್ತಿದೆ. ಆದರೆ ಶಾಶ್ವತ ಕುಡಿಯುವ ನೀರಿನ ವಿಚಾರದಲ್ಲಿ ಮಾತ್ರ ಜಿಲ್ಲೆಯು ಇಂದಿಗೂ ಪರಿತಪ್ಪಿಸುವ ಪರಿಸ್ಥಿತಿ ತಪ್ಪಿಲ್ಲ. ಮಳೆ ಬಿದ್ದರೂ ಇಂದಿಗೂ ಕುಡಿಯುವ ನೀರಿಗೆ ಅಂತರ್ಜಲವನ್ನೆ ಅವಲಂಬಿಸಿದ್ದು ಗ್ರಾಮೀಣ ಭಾಗದಲ್ಲಿ ಜಲಾಶಯ, ಡ್ಯಾಂಗಳು ಇಲ್ಲದೇ ಇರುವುದು ಬಹುಗ್ರಾಮ ಯೋಜನೆಗೆ ಹಿನ್ನಡೆ ಆಗಿದೆ.

3 ಯೋಜನೆಗೆ ಅನುಮೋದನೆ

ಕೇಂದ್ರ, ರಾಜ್ಯ ಸರ್ಕಾರ ಜಲ ಜೀವನ್‌ ಮಿಷನ್‌ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 60:40ರ ಅನುಪಾತದಲ್ಲಿ ಕೋಟ್ಯಂತರ ರು, ಅನುದಾನ ಖರ್ಚು ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ 1,500 ಕ್ಕೂ ಹೆಚ್ಚು ಜನವಸತಿ ಗ್ರಾಮಗಳಿದ್ದು 3 ಲಕ್ಷಕ್ಕೂ ಅಧಿಕ ಮನೆಗಳಿಗೆ. ಆದರೆ ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದರೂ ಬಹುಗ್ರಾಮ ಯೋಜನೆ ಲಾಭ ಸಿಗುತ್ತಿಲ್ಲ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಗುಡಿಬಂಡೆಯ ಹಂಪಸಂದ್ರ ಹಾಗೂ ಗೌರಿಬಿದನೂರಿನ ದಂಡಿಗಾನಹಳ್ಳಿ ಯೋಜನೆ ಸೇರಿ 3 ಬಹುಗ್ರಾಮ ಯೋಜನೆಗಳು ಅನುಮೋದನೆಗೊಂಡಿದೆ.

ಉಳಿದಂತೆ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟಹಾಗೂ ಗೌರಿಬಿದನೂರು ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರಂತರವಾಗಿ ನೀರು ಒದಗಿಸುವ ಜಲಮೂಲಗಳ ಕೊರತೆ ಎದುರಾಗಿದೆ. ಅದರಲ್ಲೂ ಶಿಡ್ಲಘಟ್ಟಹಾಗೂ ಚಿಂತಾಮಣಿ ತಾಲೂಕಿನಲ್ಲಿ ಅಂತೂ ಇಂದಿಗೂ ಜಲ ಜೀವನ್‌ ಮಿಷನ್‌ ಅನುಷ್ಟಾನಕ್ಕೆ ಶಾಶ್ವತ ನೀರಿನ ಅಭಾವ ಎದ್ದು ಕಾಣುತ್ತಿದ್ದು ಇಂದಿಗೂ ಕೊಳವೆ ಬಾವಿಗಳನ್ನೆ ಕುಡಿಯುವ ನೀರಿಗೆ ಅಶ್ರಯಿಸಿಕೊಳ್ಳಬೇಕಿದ್ದು ಮಳೆ ನೀರು ಸಂಗ್ರಹಿಸಿ ಕುಡಿಯುವ ನೀರಿಗೆ ಬಳಸಿಕೊಳ್ಳುವ ಯಾವುದೇ ಡ್ಯಾಂಗ್‌, ಜಲಾಶಯಗಳು ಗ್ರಾಮೀಣ ಭಾಗದಲ್ಲಿ ಇಲ್ಲದೇ ಇರುವುದು ಎದ್ದು ಕಾಣುತ್ತಿದೆ.

ಚಿಂತಾಮಣಿಗೆ ನೀರು ಪೂರೈಕೆ ಯೋಜನೆ

ಚಿಂತಾಮಣಿ ನಗರಕ್ಕೆ ಭಕ್ತರಹಳ್ಳಿ ಅರಸೀಕೆರೆಯಿಂದ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದ್ದು ಕೊಳವೆ ಮಾರ್ಗ ಮಧ್ಯೆ ಬರುವ ಹುಸೇನ್‌ ಪುರ, ಕತ್ತರಿಗುಪ್ಪೆ, ಲಕ್ಷ್ಮೇದೇವನಕೋಟೆ, ಚಾಂಡ್ರಹಳ್ಳಿ ಮತ್ತು ಕೋನಪಲ್ಲಿ ಗ್ರಾಮಗಳಿಗೆ ನಿರಂತರ ನೀರು ಸರಬರಾಜು ಮಾಡುವ 818.33 ಲಕ್ಷ ಮೊತ್ತದ ಯೋಜನೆಗೆ ಅನುಮೋದನೆ ದೊರೆತಿದೆ. ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲಿದೆ.

ಹಂತ- 3ಲ್ಲಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ 61 ಗ್ರಾಮಗಳ 8,638 ಮನೆಗಳಿಗೆ, ಹಂತ-4 ರಲ್ಲಿ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ 444 ಗ್ರಾಮಗಳಿಗೆ ಒಟ್ಟು 38,659 ಮನೆಗಳಿಗೆ ನೇರ ನಲ್ಲಿ ಮೂಲಕ ನೀರು ಸರಬರಾಜಿಗೆ ಒಟ್ಟು 18796 ಲಕ್ಷ ರು, ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಕಾಮಗಾರಿ ಕೈಗೊಳ್ಳಲು ಟೆಂಡರ್‌ ಪ್ರಕ್ರಿಯೆಯಲ್ಲಿದೆ.

ಜಕ್ಕಲಮಡಗುನಿಂದ ನಳ ಸಂಪರ್ಕ

ಜಿಪಂ ನೀಡಿರುವ ಮಾಹಿತಿ ಪ್ರಕಾರ ಇಲಿವರೆಗೂ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದಿಂದ ಕಣಜೇನಹಳ್ಳಿ, ತಿಪ್ಪೇನಹಳ್ಳಿ, ಮುಸ್ಟೂರು ಹಾಗೂ ಮೈಲಪ್ಪನಹಳ್ಳಿ ಸೇರಿ 4 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 1,496 ಮನೆಗಳಿಗೆ ನಲ್ಲಿ ಸಂಪರ್ಕ ಮೂಲಕ ನೀರು ಕಲ್ಪಿಸಲಾಗುತ್ತಿದೆ. ಹೊಸದಾಗಿ ಅನುಮೋದನೆಗೊಂಡಿರುವ ಹಂಪಸಂದ್ರ, ಮಂಡಿಕಲ್ಲು, ದಂಡಿಗಾನಹಳ್ಳಿ ಬಹುಗ್ರಾಮ ಕುಡಿಯುವ ಯೋಜನೆ ಅನುಷ್ಠಾನಗೊಳ್ಳಬೇಕಿದೆ.

Latest Videos
Follow Us:
Download App:
  • android
  • ios