ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಯುತ್ತದೆ ಎನ್ನುವುದು ತೋಳ ಬಂತು ತೋಳದ ಕಥೆಯಂತಾಗಿದೆ.

 ಗಂ.ದಯಾನಂದ ಕುದೂರು

 ಕುದೂರು : ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಯುತ್ತದೆ ಎನ್ನುವುದು ತೋಳ ಬಂತು ತೋಳದ ಕಥೆಯಂತಾಗಿದೆ. ಹೇಮಾವತಿ ನದಿ ನೀರು ಮಾಗಡಿಯ ಕೆರೆಗಳಿಗೆ ಹರಿಯಬೇಕು ಎನ್ನುವುದಕ್ಕೆ ಅಧಿಕೃತವಾಗಿ ಸರ್ಕಾರದ ವಲಯದಲ್ಲಿ ಸಮೀಕ್ಷೆಗಳು ನಡೆಯಲು ಆರಂಭಿಸಿದ್ದು1993 ರಲ್ಲಿ. ಆದರೆ 31 ವರ್ಷಗಳಾದರೂ ಹೇಮಾವತಿಯ ನದಿ ನೀರಿನ ಹನಿಯೂ ಮಾಗಡಿ ತಾಲೂಕಿನ ಭೂಮಿಗೆ ಹರಿಯಲಿಲ್ಲ. ಆದರೆ ಚುನಾವಣೆಯ ಸಂದರ್ಭಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಹೇಮಾವತಿ ನದಿ ನೀರು ಹರಿದೇ ಹರಿಯುತ್ತಾಳೆ ಎಂದು ಪ್ರಚಾರ ಮಾಡುತ್ತಾರೆ. ಇಲ್ಲಿನ ಜನರು ಅಸೆ ಕಣ್ಣುಗಳಿಂದ ಕಾದದ್ದಾಯಿತೇ ಹೊರತು ಹೇಮೆ ಹರಿಯುವ ಯಾವ ಲಕ್ಷಣಗಳೂ ಕಾಣಲಿಲ್ಲ.

ಹೇಮೆಯ ಸುದ್ದಿ ಹರಿದು ಬಂದ ದಾರಿ:

1992 ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ, ಎಸ್.ಎಂ.ಕೃಷ್ಣರವರು ಉಪಮುಖ್ಯಮಂತ್ರಿ ಹಾಗೂ ಮಧ್ಯಮ ಮತ್ತು ಬೃಹತ್ ನೀರಾವರಿ ಸಚಿವರಾಗಿದ್ದಾಗ ಸೆಪ್ಟಂಬರ್ 14 1992 ರಲ್ಲಿ ಕುಣಿಗಲ್ ಮತ್ತು ಹೆಬ್ಬೂರು ಮಧ್ಯ ಹೇಮಾವತಿ ಎಡದಂಡೆ ನಾಲೆಯ 180 - 200 ಕಿಮೀ ಅಂತರದಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆ ಎಂಬ ಹೆಸರಿನಲ್ಲಿ ಸಮಿತಿ ರಚಿಸಲಾಯಿತು. ಅಲ್ಲಿಂದ ಹೇಮಾವತಿ ಮಾತು ಆರಂಭವಾಯಿತು. ಮತ್ತೆ 1996 ರಲ್ಲಿ ಹೊಸ ಸಮಿತಿ ರಚಿಸಲಾಯಿತು. ಆಗ ನೀರಾವರಿ ಸಚಿವರಾಗಿದ್ದ ಕೆ.ಎನ್.ನಾಗೇಗೌಡರು ಸಮಿತಿಯ ಅಧ್ಯಕ್ಷರಾದರು, ಉಪಾಧ್ಯಕ್ಷರಾಗಿ ಎಚ್.ಎಂ.ರೇವಣ್ಣ ಇದ್ದರು. ಮತ್ತೆ 2003 ರಲ್ಲಿ ಸಮಿತಿ ಬೇರೆಯಾಯಿತು. ಆಗ ನೀರಾವರಿ ಸಚಿವರಾಗಿ ಎಚ್.ಕೆ.ಪಾಟೀಲರಿದ್ದರು.ಬಹುಕಾಲದ ಚರ್ಚೆಯ ನಂತರ ೨೦೦೩, ಡಿಸೆಂಬರ್ 11 ರಲ್ಲಿ ಮಾಗಡಿ ತಾಲೂಕಿನ ೮೬ ಕೆರೆಗಳಿಗೆ ೦.೯ ಟಿಎಂಸಿ ನೀರು ಹರಿಸಲಾಗುತ್ತದೆ ಎಂಬ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ೯೬ ಕೋಟಿ ರು. ಗಳನ್ನು ಮೀಸಲಿಟ್ಟಿದ್ದೂ ಆಯಿತು. ಆದರೆ ನೀರು ಹರಿಸುವ ಕೆಲಸಕ್ಕೆ ಚಾಲನೆ ನೀಡಲಾಗಲೇ ಇಲ್ಲ. ಅಷ್ಟರಲ್ಲಾಗಲೇ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳು ಬಂದ ಕಾರಣ ಸಮಿತಿಯನ್ನು ಪುನರ್ ರಚನೆ ಮಾಡಲು ನಿರ್ಧರಿಸಲಾಯಿತು.

ಹೇಮೆಗೆ ಅಂದಿನ ನಾಯಕರ ಭರವಸೆಗಳು:

2010 ರಲ್ಲಿ ಸಿದ್ದಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿಯವರ ಬಳಿ ಹೇಮಾವತಿ ನದಿ ನೀರಿಗೆ ಒಮ್ಮತದ ಸಂಕಲ್ಪಕ್ಕಾಗಿ, ಸರ್ವಪಕ್ಷ ಮತ್ತು ಸರ್ವಧರ್ಮೀಯರ ಸಭೆಯನ್ನು ನಡೆಸಿ, ಸಧ್ಯದಲ್ಲಿಯೇ ಹೇಮಾವತಿ ನದಿ ನೀರು ಮಾಗಡಿಗೆ ಹರಿಯುವಂತೆ ಸರ್ಕಾರದ ವಲಯದಲ್ಲಿ ಮಾತನಾಡುತ್ತೇನೆ ಎಂದು ಬಾಲಕೃಷ್ಣರವರು ಸ್ವಾಮೀಜಿಯವರ ಎದುರು ಮಾತು ಕೊಟ್ಟಿದ್ದರು.

೨೦೧೧ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು ಮಾಗಡಿಯ ತಿರುಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಹತ್ವದ ಯೋಜನೆಯಾದ ಹೇಮಾವತಿ ನೀರಿನ ಕುರಿತಾಗಿ ಶೀಘ್ರವೇ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕೊಡಿಸುವೆ ಎಂದು ಹೋದವರು ತಿರುಗಿ ಬರಲಿಲ್ಲ.

೨೦೧೫ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯನವರು ಹೇಮಾವತಿ ನದಿ ನೀರಿಗಾಗಿ ೨೮೫ ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ, ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದಾಗಿ ಹೇಳಿದ್ದರು.

ಸಂಸದ ಡಿ.ಕೆ.ಸುರೇಶ್ ರವರು ೨೦೧೬ ರ ಜನವರಿ ೩ರಂದು ಮಾಗಡಿ ತಾಲೂಕಿಗೆ ಹೇಮಾವತಿ ಯೋಜನೆಯನ್ನು ಕೊಡುಗೆಯಾಗಿ ಕೊಡುತ್ತಿದ್ದೇನೆ ಎಂದು ಕರಲಹಳ್ಳಿ ಬಸವಣ್ಣದ ದೇವಾಲಯದಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ಅದಾದ ಆರು ತಿಂಗಳೊಳಗೆ ಇದೇ ಸಂಸದರು ಈಗ ಬಿಡುಗಡೆಯಾಗಿರುವ ೨೮೫ ಕೋಟಿ ರು. ಕೊರತೆಯಾಗುತ್ತದೆ. ಅದಕ್ಕೆ ಹೆಚ್ಚುವರಿಯಾಗಿ ಇನ್ನೂ ೫೦ ಕೋಟಿ ರು. ಬೇಕಿದೆ. ಆದರೆ ಸರ್ಕಾರ ಕೊಡಲಾಗದು ಎಂದು ಹೇಳಿರುವ ಕಾರಣ ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು. ಜೂನ್ ತಿಂಗಳಲ್ಲಿ ಟೆಂಡರ್ ಕರೆದು ಯೋಜನೆ ಜಾರಿಗೊಳಿಸುತ್ತೇವೆ ಎಂದಿದ್ದರು.

ಮಾಯವಾದ ಸಿ.ಪಿ.ಯೋಗೇಶ್ವರ್:

ಇದರ ಮಧ್ಯ ಆಗ ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ರವರು ತುಮಕೂರಿನಲ್ಲಿ ನೀರಾವರಿ ತಜ್ಞರನ್ನು ಭೇಟಿ ನೀಡಿ, ಕುಣಿಗಲ್ ತಾಲೂಕಿನ ಕುರುಡಿಗೆರೆಯಿಂದ ಮಾಗಡಿ ತಾಲೂಕು ಕುದೂರು ಹೋಬಳಿಯ ಕೆಂಚನಪುರದ ಕೆರೆಗೆ ಹಾಗೂ ತಿಪ್ಪಸಂದ್ರ ಹೋಬಳಿಯ ಕೆರೆಗಳಿಗೆ ನೀರು ಹರಿಸುತ್ತೇನೆ ಎಂದು ಹೇಳಿ ಹೋದವರು ಮತ್ತೆ ತಾಲೂಕಿಗೆ ಬರಲೇ ಇಲ್ಲ.

ಮಾತು ಮರೆತ ಸುರೇಶ್‌ಗೌಡ:

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರು ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವುದಕ್ಕೆ ನಾನು ಶ್ರಮಿಸುತ್ತೇನೆ ಎಂದು ಮಾತು ಕೊಟ್ಟು ಮರೆತು ಹೋದರು.

ಹೇಮಾವತಿಗಿಂತ ಮೇಕೆದಾಟು ಸೂಕ್ತ ಎಂದಿದ್ದರು ಶಾಸಕ ಎಚ್.ಸಿ.ಬಾಲಕೃಷ್ಣರವರು. ಮತ್ತೆ ಅವರು ಮುಂದುವರೆದು ಹೇಮಾವತಿಯಿಂದ ಮಾತ್ರ ಸಾಧ್ಯವಿಲ್ಲ. ನೇತ್ರಾವತಿ ನದಿ ನೀರಿನ ಲಿಂಕ್ ಕೊಡಬೇಕು ಎಂದಿದ್ದರು.

ನಂತರ ಬಂದ ಶಾಸಕ ಎ.ಮಂಜುನಾಥ್, ಯಡಿಯೂರಪ್ಪರವರ ಸರ್ಕಾರದಲ್ಲಿ ೪೬೦ ಕೋಟಿ ರು. ಹಣ ಮಂಜೂರು ಮಾಡಿಸಿಕೊಂಡು ಬಂದು ಪೈಪ್‌ಲೈನ್ ಕೆಲಸ ಆರಂಭಿಸಿದರು. ಕೆಲವು ರೈತರು ನಮ್ಮ ಜಮೀನಿನಲ್ಲಿ ಪೈಪ್ ಹಾಕಲು ಬಿಡುವುದಿಲ್ಲ ಎಂದು ಗಲಾಟೆ ಮಾಡಿ ಕಾಮಗಾರಿಗೆ ತಡೆಯೊಡ್ಡಿದರು.

ತುಮಕೂರು ಶಾಸಕರ ಪ್ರತಿಭಟನೆ:

ಪೈಪ್ ಲೈನ್ ಮೂಲಕ ತುಮಕೂರು ಜಿಲ್ಲೆಯಿಂದ ಮಾಗಡಿ ತಾಲೂಕಿಗೆ ನೀರು ತರುವುದು ಸುಲಭಕ್ಕಾಗುವುದಿಲ್ಲ. ಅದನ್ನು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ತಂದರೆ ಮಾತ್ರ ತಾಲೂಕಿನ ಕೆರೆಗಳಿಗೆ ನೀರು ಹರಿಸಬಹುದು ಎಂದು ಸಂಸದ.ಡಿ.ಕೆ.ಸುರೇಶ್, ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ರವರು ಒತ್ತಾಯ ಮಾಡಿದ ನಂತರ ತುಮಕೂರು ಜಿಲ್ಲೆಯ ಶಾಸಕರು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಹರಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸಲು ಶುರು ಮಾಡಿದರು.

ಇದಕ್ಕೆ ಪ್ರತಿರೋಧವಾಗಿ ಮಾಗಡಿ ತಾಲೂಕಿನಲ್ಲಿಯೂ ಮಾಜಿ ಸಚಿವ ಎಚ್.ಎಂ.ರೇವಣ್ಣರ ಮುಂದಾಳತ್ವದಲ್ಲಿ ರಸ್ತ ತಡೆ ಚಳುವಳಿಯೂ ಆಯಿತು.

ಉಪಮುಖ್ಯಮಂತ್ರಿಗಳ ಮೌನವೇಕೆ?:

ಮಾಗಡಿ ತಾಲೂಕಿಗೆ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಹರಿಯಬೇಕೆಂಬ ಹಂಬಲ ಡಿಸಿಎಂ ಡಿ.ಕೆ.ಶಿವಕುಮಾರ್ ರವರದ್ದೂ ಆಗಿತ್ತು. ಈ ಹಿಂದೆ ಅವರು ಹೆಚ್ಚುವರಿಯಾಗಿ 40 ಕೋಟಿ ರು.ಗಳನ್ನು ಕಾಮಗಾರಿಗೆ ಮಂಜೂರು ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಮಾಗಡಿ ತಾಲೂಕಿಗೆ ನೀರು ಹರಿಯಬಾರದು ಎಂದು ಅವರದ್ದೇ ಪಕ್ಷದ ತುಮಕೂರು ಜಿಲ್ಲೆಯ ಶಾಸಕರು ಪ್ರತಿಭಟಿಸುತ್ತಿರುವಾಗ, ಅವರನ್ನು ಗದರಿಸಿ ಸುಮ್ಮನಿರುವಂತೆ ಮತ್ತು ತಮ್ಮ ಜಿಲ್ಲೆಗೆ ನೀರು ಹರಿಸಲು ಚಳುವಳಿಗಳಾಗದಂತೆ ಕಾಮಗಾರಿ ಆರಂಭಿಸಲು ಪ್ರಯತ್ನ ಪಡುತ್ತಿಲ್ಲವಲ್ಲ ಏಕೆ? ಎಂದು ತಾಲೂಕಿನ ಜನರು ಪ್ರಶ್ನಿಸಿದ್ದಾರೆ.

ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹರಿಯುವ ಮುನ್ನ ಹಾಸನದ ಜಿಲ್ಲೆಯ ಜನರೂ ಕೂಡಾ ಹೀಗೆಯೇ ಪ್ರತಿಭಟಿಸಿದ್ದರೆ ತುಮಕೂರು ಜಿಲ್ಲೆಗೆ ನೀರು ಬರಲು ಸಾಧ್ಯವಾಗುತ್ತಿತ್ತಾ? ಆದ್ದರಿಂದ ಕುಡಿಯುವ ನೀರಿಗೆ ಯಾರದ್ದೂ ಅಡ್ಡಿ ಇರಬಾರದು. ಪರಸ್ಪರ ಸಹಕಾರಗಳಿಂದ ಮತ್ತು ಸೌಹಾರ್ದತೆಯಿಂದ ಮಾತ್ರ ನೆಮ್ಮದಿಯ ಜೀವನ ಮಾಡಬಹುದು ಎಂದು ಮಾಗಡಿ ತಾಲೂಕಿನ ಜನರು ತುಮಕೂರು ಶಾಸಕರಿಗೆ ಮನವಿ ಮಾಡಿದ್ದಾರೆ.

ನೀರಾವರಿ ವಿಚಾರವಾಗಿ ಯಾವುದೇ ರಾಜಕಾರಣ ಬೇಡ, ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಸರಾಗವಾಗಿ ಬರುತ್ತದೆ ಎಂಬುದು ವಾದ. ಆದರೆ ಶ್ರೀರಂಗ ಏತ ನೀರಾವರಿ ಯೋಜನೆಗೆ ಪೈಪ್‌ ಮೂಲಕವಾದರೂ ನೀರು ಬರಬೇಕು. ಶ್ರೀರಂಗ ಏತ ನೀರಾವರಿ ಯೋಜನೆಗೂ ಎಕ್ಸ್‌ಪ್ರೆಸ್ ಕೆನಾಲ್‌ ಗೂ ಸಂಬಂಧವಿಲ್ಲ. ಶ್ರೀರಂಗ ಏತ ನೀರಾವರಿ ಯೋಜನೆಗೆ ೪೬೦ ಕೋಟಿ ರು. ಮಂಜೂರಾಗಿದೆ.

-ಎ.ಮಂಜುನಾಥ್, ಮಾಜಿ ಶಾಸಕರು, ಮಾಗಡಿ